ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಇಪಿ ಅನುದಾನ ದುರುಪಯೋಗ: ತನಿಖೆಗೆ ಆಗ್ರಹಿಸಿದ ರೇವಣ್ಣ

ಗುತ್ತಿಗೆದಾರರಿಂದ ಪರ್ಸೆಂಟೆಜ್‌ ಪಡೆಯುವ ಅಧಿಕಾರಿಗಳು: ಆರೋಪ
Last Updated 26 ಡಿಸೆಂಬರ್ 2020, 12:05 IST
ಅಕ್ಷರ ಗಾತ್ರ

ಹಾಸನ: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿರಿಸಿರುವ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನ ದುರುಪಯೋಗವಾಗಿದ್ದು, ಸಮಗ್ರ ತನಿಖೆ ನಡೆಸುವಂತೆ ಶಾಸಕ ಎಚ್‌.ಡಿ.ರೇವಣ್ಣ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.

ಯೋಜನೆ ಅಡಿ ಸಾವಿರ ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಲಾಗಿದೆ. ಅಂಬೇಡ್ಕರ್‌ ವಸತಿ ನಿಲಯ, ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯ, ಮೊರಾರ್ಜಿ ದೇಸಾಯಿ ವಸತಿ ನಿಲಯ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಬೇಕಾದ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಶೋಷಿತ ವರ್ಗದ ಜನರ ಹಣ ತಲುಪಬೇಕು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಪತ್ರ ಬರೆಯಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

"ತಿಮ್ಮಪ್ಪ ಎಂಬ ಖಾಸಗಿ ವ್ಯಕ್ತಿ ಅನುಮತಿ ನೀಡಿದ ಗುತ್ತಿಗೆದಾರರಿಗೆ ಮಾತ್ರ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ಸಣ್ಣಪುಟ್ಟ ಗುತ್ತಿಗೆದಾರರು ಟೆಂಡರ್‌ ಹಾಕಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಟೆಂಡರ್‌ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಉದಾಹರಣೆಗೆ ಹಾಸನ ಜಿಲ್ಲೆಯಲ್ಲೇ ₹80 ಕೋಟಿ ಪ್ಯಾಕೇಜ್‌ ಟೆಂಡರ್‌ ಕರೆಯಲಾಗಿದೆ. ಮುಖ್ಯಕಾರ್ಯದರ್ಶಿ, ಎಂಜಿನಿಯರ್‌ಗೆ ಶೇಕಡಾ 10 ರಷ್ಟು ಕಮಿಷನ್ ನೀಡಬೇಕು. ಸಣ್ಣಪುಟ್ಟ ಗುತ್ತಿಗೆದಾರರು ಟೆಂಡರ್ ಹಾಕಿದರೆ ಸ್ಥಳೀಯ ನಾಯಕರಿಂದ ಶಿಫಾರಸು ಪತ್ರ ತರುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ. ಗುತ್ತಿಗೆದಾರರು ಕಣ್ಣೀರು ಹಾಕುತ್ತಿದ್ದಾರೆ’ ಎಂದು ವಿವರಿಸಿದರು.

ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಗ್ರ ತನಿಖೆ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಪರಿಶಿಷ್ಟರ ಹಣ ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇನ್ನೇರಡು ವರ್ಷ ಏನು
ಮಾಡುತ್ತಾರೋ ಮಾಡಲಿ. ಆ ಮೇಲೆ ದೇವರು ಅವಕಾಶ ಕೊಟ್ಟರೆ ಕೆಲಸ ಮಾಡುತ್ತೇನೆ. ಸಂಕ್ರಾಂತಿ ಬಳಿಕ ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಈಗಲೇ ಘೋಷಿಸಬೇಕು. ಫಲಿತಾಂಶದ ಬಳಿಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿ ಮೀಸಲಾತಿ ನಿಗದಿ ಮಾಡಲಾಗುತ್ತದೆ. ಹಾಸನ ನಗರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿ ಅನ್ಯಾಯ ಮಾಡಿದ್ದಾರೆ. ಅದೇ ರೀತಿಯ ಪ್ರಮಾದ ಮರುಕಳಿಸಬಾರದೆಂದು ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇಷ್ಟ ಬಂದಂತೆ ಮಾಡುವುದಾದರೆ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಲಿ’ ಎಂದು ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT