ಅರಕಲಗೂಡು: ಅತಿವೃಷ್ಟಿಗೆ ಕಾಳುಮೆಣಸು ಬೆಳೆ ಅಪಾರ ನಷ್ಟ-ರೈತರಲ್ಲಿ ಮನೆಮಾಡಿದ ಚಿಂತೆ

7

ಅರಕಲಗೂಡು: ಅತಿವೃಷ್ಟಿಗೆ ಕಾಳುಮೆಣಸು ಬೆಳೆ ಅಪಾರ ನಷ್ಟ-ರೈತರಲ್ಲಿ ಮನೆಮಾಡಿದ ಚಿಂತೆ

Published:
Updated:
Deccan Herald

ಅರಕಲಗೂಡು: ಅತಿವೃಷ್ಟಿ ಪರಿಣಾಮ ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಕಾಳುಮೆಣಸು ಬೆಳೆ ಸಾಕಷ್ಟು ಹಾನಿಯಾಗಿದ್ದು ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.

ಹೋಬಳಿಯ ಮತ್ತರ, ಆಲದಹಳ್ಳಿ, ಮಾಗಲು, ಬಾಗದಾಳು, ಕೆಳಗಳಲೆ, ಹಿಪ್ಪಲಿ, ಬೈಸೂರು, ಮದಲಾಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಾಫಿ ತೋಟಗಳಲ್ಲಿ ಬೆಳೆಯಲಾಗಿದ್ದ ಕಾಳು ಮೆಣಸಿನ ಬೆಳೆಗೆ ಮಳೆಯಿಂದ ಕೊಳೆರೋಗ ಕಾಣಿಸಿಕೊಂಡಿದ್ದು ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಬಳ್ಳಿಗಳು ಕೊಳೆತ ಹೋಗಿವೆ. ಕಟ್ಟಿದ್ದ ಕಾಳುಗಳು ಉದುರಿ ಬೀಳುತ್ತಿದ್ದು ಬೆಳೆಗಾರರು ತಲೆಯ ಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ಬಂದಿದೆ.

‘10 ಎಕರೆ ಪ್ರದೇಶದಲ್ಲಿ ಕೃಷಿ ಮಾಡಿದ್ದ 3 ಸಾವಿರ ಕಾಳು ಮೆಣಸಿನ ಬಳ್ಳಿಗಳು ಸಂಪೂರ್ಣ ಹಾನಿಗೊಳಗಾಗಿವೆ. 6 ವರ್ಷಗಳ ಹಿಂದೆ ನಾಟಿ ಮಾಡಿದ್ದ ಬಳ್ಳಿಗಳು ಫಸಲು ನೀಡುತ್ತಿದ್ದು ವಾರ್ಷಿಕ 40 ಕ್ವಿಂಟಲ್ ಮೆಣಸಿನ ಕಾಳು ದೊರೆಯುತ್ತಿತ್ತು. ಇಂದಿನ ಮಾರುಕಟ್ಟೆ ದರದ ಪ್ರಕಾರ ಸುಮಾರು ₹ 20 ಲಕ್ಷ ನಷ್ಟ ಸಂಭವಿಸಿದೆ’ ಎಂದು ಮತ್ತರ ಗ್ರಾಮದ ಕೃಷಿಕ ಹಾಗೂ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ.ವಿಶ್ವನಾಥ್ ತಮ್ಮ ನೋವು ತೋಡಿಕೊಂಡರು.

ಬಳ್ಳಿಗಳು ಪೂರ್ಣ ಹಾಳಾಗಿವೆ. ರೋಗದ ಕಾರಣ ಈ ವರ್ಷ ಬಳ್ಳಿಗಳನ್ನು ನಾಟಿ ಮಾಡಲು ಸಾಧ್ಯವಿಲ್ಲ. ಮುಂದಿನ ವರ್ಷ ಹೊಸದಾಗಿ ನಾಟಿ ಮಾಡಿ ಬಳ್ಳಿಗಳನ್ನು ಬೆಳೆಸಿದರೂ ಅದು ಫಸಲು ನೀಡಲು ಕನಿಷ್ಠ 5 ವರ್ಷಬೇಕು. ಇದನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಬೆಳೆಗಾರರ ಸ್ಥಿತಿ ಅತಂತ್ರವಾಗಿದೆ. ಮಳೆ ತೀವ್ರ ಹೊಡೆತ ನೀಡಿದ್ದು ತುಂಬಲಾರದ ಹಾನಿಮಾಡಿದೆ. ಈ ಕುರಿತು ತೋಟಗಾರಿಕೆ ಇಲಾಖೆಗೆ ಪರಿಹಾರ ಕೋರಿ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲವಾಗಿದೆ.

10 ಎಕರೆ ಪ್ರದೇಶದಲ್ಲಿ ಕಾಫಿಯನ್ನು ಕೃಷಿ ಮಾಡಿದ್ದು ಮಳೆಯ ಪರಿಣಾಮ ಕಾಯಿಗಳು ಉದುರಿ ಈ ಬೆಳೆಯೂ ಕೈಹಿಡಿಯುತ್ತಿಲ್ಲ. ಹೀಗಾಗಿ ಬದುಕು ಅತಂತ್ರವಾಗಿದೆ. ಹೋಬಳಿಯಾದ್ಯಂತ ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಎಲ್ಲ ರೈತರ ಬೆಳೆಯ ಪರಿಸ್ಥಿತಿ ಇದೇ ಆಗಿದ್ದು ಕೋಟ್ಯಂತರ ನಷ್ಟವುಂಟಾಗಿದೆ. ಸರ್ಕಾರ ಹಾಗೂ ಸಂಬಾರು ಮಂಡಳಿ ಸೂಕ್ತ ಪರಿಹಾರ ನೀಡುವ ಮೂಲಕ ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಮದಲಾಪುರ ಗ್ರಾಮದ ಎಂ.ಆರ್.ಸುರೇಶ್ ತಾವು ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಳುಮೆಣಸು ಬೆಳೆ ಹಾನಿಗೊಳಗಾಗಿದೆ ಎಂದು ಅಲವತ್ತುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !