ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಅಧಿಕ ಮಳೆ– ಕೆರೆಕಟ್ಟೆಗಳಿಗೆ ಜೀವಕಳೆ

ಜಿಲ್ಲೆಯಲ್ಲಿ ವಾಡಿಕೆಗಿಂತ 10 ಸೆಂ.ಮೀ. ಹೆಚ್ಚು ಮುಂಗಾರು ಪೂರ್ವ ಮಳೆ
ಸಂತೋಷ್‌ ಸಿ.ಬಿ.
Published 14 ಜೂನ್ 2024, 7:26 IST
Last Updated 14 ಜೂನ್ 2024, 7:26 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅವಧಿ ಮಾರ್ಚ್ 1 ರಿಂದ ಮೇ 31ರವರೆಗೆ ಉತ್ತಮ ಮಳೆ ಸುರಿದಿದ್ದು, ಅಂತರ್ಜಲ ವೃದ್ಧಿಗೆ ಅನುಕೂಲವಾಗಿದೆ. ಕಳೆದ ವರ್ಷದ ಬರದ ಬವಣೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸುವಲ್ಲಿ ಸಹಕಾರಿಯಾಗಿದೆ.

ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ 16.2 ಸೆಂ.ಮೀ. ಮಳೆ ಆಗಬೇಕಿತ್ತು. ಆದರೆ 26.2 ಸೆಂ.ಮೀ. ಮಳೆಯಾಗಿದ್ದು, 10 ಸೆಂ.ಮೀ. ಹೆಚ್ಚು ಮಳೆ ಬಿದ್ದಿದೆ. ಬೇಲೂರು ತಾಲ್ಲೂಕಿನಲ್ಲಿ ಗರಿಷ್ಠ 30.5 ಸೆಂ.ಮೀ. ಮಳೆಯಾದರೆ, ಅರಸೀಕೆರೆಯಲ್ಲಿ ಅತಿ ಕಡಿಮೆ 22.9ಸೆಂ.ಮೀ. ಮಳೆಯಾಗಿದೆ.

ಜೂನ್ 1 ರಿಂದ 11 ರವರೆಗೆ ವಾಡಿಕೆಯಂತೆ 4.5 ಸೆಂ.ಮೀ. ಮಳೆಯಾಗಬೇಕಿದ್ದು, 6.8 ಸೆಂ.ಮೀ. ಮಳೆಯಾಗಿದೆ. ಸಕಲೇಶಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು 10 ಸೆಂ.ಮೀ.ಮಳೆ ಬಿದ್ದಿದ್ದು, ಅರಸೀಕೆರೆ ತಾಲ್ಲೂಕಿನಲ್ಲಿ ಅತಿ ಕಡಿಮೆ 3.9 ಸೆಂ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ಒಂದೂವರೆ ತಿಂಗಳಿನಿಂದ ಉತ್ತಮ ಮಳೆಯಾಗಿರುವ ಕಾರಣ ಬತ್ತಿ ಹೋಗಿದ್ದ ನೂರಾರು ಕೆರೆಗಳಿಗೆ ಜೀವಕಳೆ ಬಂದಿದ್ದು, ನೀರಿನ ಪ್ರಮಾಣ ವೃದ್ಧಿಯಾಗಿದೆ. ಇದರಿಂದ ಅಂತರ್ಜಲ ಮಟ್ಟ ಏರಿಕೆಗೆ ಸಹಕಾರಿಯಾಗಿದ್ದು, ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ನೀಗಿದಂತಾಗಿದೆ.

ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟ ಸುಮಾರು ನೂರು ಎಕರೆ ವಿಸ್ತೀರ್ಣದ 168 ಕೆರೆಗಳು ಜಿಲ್ಲೆಯಲ್ಲಿದ್ದು, ಇದರಲ್ಲಿ ಸುಮಾರು 127 ಕೆರೆಗಳಲ್ಲಿ ಶೇ 30ರಷ್ಟು ನೀರಿನ ಶೇಖರಣೆಯಾಗಿದೆ. ಇನ್ನು 33 ಕೆರೆಗಳಿಗೆ ಅಲ್ಪ ಸ್ವಲ್ಪ ನೀರು ಬಂದಿದೆ ಎಂದು ನೀರಾವರಿ ಇಲಾಖೆಯ ಕಾರ್ಯ ಪಾಲಕ ಎಂಜಿನಿಯರ್‌ ಟಿ.ಎನ್. ರಾಮಚಂದ್ರ ಮಾಹಿತಿ ನೀಡಿದ್ದಾರೆ.

168 ಕೆರೆಗಳಲ್ಲಿ ಅರಸೀಕೆರೆ ತಾಲ್ಲೂಕಿನ ಎರಡು ಕೆರೆಗಳು ಮಾತ್ರ ಶೇ 50ಕ್ಕಿಂತ ಹೆಚ್ಚಿನ ನೀರು ತುಂಬಿದ್ದು, ಬೇಲೂರು ತಾಲ್ಲೂಕಿನ 4 ಕೆರೆಯಲ್ಲಿ ಶೇ 30ಕ್ಕಿಂತ ಹೆಚ್ಚಿನ ನೀರಿನ ಸಂಗ್ರಹವಾಗಿದೆ ಎಂದು ತಿಳಿಸಿದ್ದಾರೆ.

ಉಳಿದಂತೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಣ್ಣಪುಟ್ಟ ಕೆರೆಗಳಲ್ಲಿ ಸಾಕಷ್ಟು ನೀರಿನ ಪ್ರಮಾಣ ವೃದ್ಧಿಯಾಗಿದ್ದು, ಆಶಾದಾಯಕ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು ಬಹುತೇಕ ಕೆರೆಗಳು ಭರ್ತಿಯಾಗುವ ಸಾಧ್ಯತೆ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT