ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಹೇಮಾವತಿ ನೀರು: ರಾಜಕೀಯ ಮಾಡದಿರಿ: ರೇವಣ್ಣ ಮನವಿ

ಮಂಡ್ಯ, ತುಮಕೂರು, ಹಾಸನ ರೈತರ ಹಿತ ಕಾಪಾಡಿ
Last Updated 25 ಏಪ್ರಿಲ್ 2020, 15:28 IST
ಅಕ್ಷರ ಗಾತ್ರ

ಹಾಸನ: ಹೇಮಾವತಿ ಜಲಾಶಯದಿಂದ ಮೇ 1ರ ನಂತರ ಹಾಸನ ಹಾಗೂ ಮಂಡ್ಯ ಜಿಲ್ಲೆಗೆ ನೀರು ಬಿಡುವುದಿಲ್ಲವೆಂಬ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಹೇಳಿಕೆ ಸರಿಯಲ್ಲ. ನೀರು ಬಿಡುವ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಶುಕ್ರವಾರ ವಿಡಿಯೊ ಸಂವಾದದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್‌.ಬಾಲಕೃಷ್ಣ ಅವರ ಪ್ರಶ್ನೆಗೆ, ತುಮಕೂರಿಗೆ ಮಾತ್ರ ನೀರು ಬಿಡಲಾಗುವುದು ಎಂದು ಹೇಳಿದ್ದಾರೆ. ತೂಬಿನ ಬಳಿ ಪೊಲೀಸರನ್ನು ನಿಯೋಜಿಸಿ, ಗೇಟ್‌ ತೆರೆಯಲು ಬಂದವರನ್ನು ಬಂಧಿಸುವಂತೆ ಆದೇಶ ನೀಡಲಾಗಿದೆ. ತುಮಕೂರು, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳ ರೈತರ ಹಿತ ಕಾಪಾಡುವುದು ಮುಖ್ಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತುಮಕೂರಿಗೆ ದೇವೇಗೌಡರು ಕುಟುಂಬದವರು ನೀರು ಬಿಡುವುದಿಲ್ಲವೆಂದು ಅಪಪ್ರಚಾರ ಮಾಡುತ್ತಾರೆ. ಯಾವ ಕಾಲದಲ್ಲಿ ಎಷ್ಟು ನೀರು ಬಿಡಲಾಗಿದೆ ಎಂಬ ಅಂಕಿ ಅಂಶವನ್ನು ಶೀಘ್ರದಲ್ಲಿಯೇ ಬಹಿರಂಗ ಪಡಿಸಲಾಗುವುದು. ಜಲಾಶಯದಲ್ಲಿ ಸಾಕಷ್ಟು ನೀರಿದ್ದು, ಎಲ್ಲಾ ಜಿಲ್ಲೆಗಳಿಗೂ ನೀರು ಬಿಡಬೇಕು ಎಂದು ಒತ್ತಾಯಿಸಿದರು.

ಸೋಮವಾರ ನೀರಾವರಿ ಇಲಾಖೆಯ ಕಾರ್ಯದರ್ಶಿಯನ್ನು ಭೇಟಿ ಮಾಡಿ ಈ ವಿಷಯವಾಗಿ ಚರ್ಚಿಸಲಾಗುವುದು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪಾಲನೆ ಮಾಡುತ್ತಿದ್ದಾರೆಯೇ ಎಂಬುದರ ಕುರಿತು ಪರಿಶೀಲಿಸಲಾಗುವುದು. ಯಾವ ಕಾಲದಲ್ಲಿ ಯಾವ ಯಾವ ಜಿಲ್ಲೆಗೆ ಎಷ್ಟೆಷ್ಟು ನೀರು ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಒಟ್ಟು 6.55 ಲಕ್ಷ ಎಕರೆ ಹೇಮಾವತಿ ಜಲಾಶಯದ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಕೃಷಿಕರ ಹಿತ ಕಾಪಾಡುವುದು ಮುಖ್ಯ. ರಾಜಕೀಯ ಮಾಡಬಾರದು. ನೀರು ಬಿಡುವುದಿಲ್ಲವೆಂದರೆ ಜನರ ತೀರ್ಮಾನಕ್ಕೆ ಬಿಟ್ಟು, ಹೋರಾಟ ಮುಂದುವರೆಸುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್‌ ಹಿರಿಯ ಮುಖಂಡ ಸಿದ್ದರಾಮಯ್ಯ ಅವರು ಕೂಡಲೇ ಸಿಪಿಐ, ಸಿಪಿಎಂ, ರೈತಸಂಘ, ಜೆಡಿಎಸ್‌ ಸೇರಿದಂತೆ ವಿರೋಧ ಪಕ್ಷಗಳ ಸಭೆ ಕರೆದು ಲಾಕ್‌ಡೌನ್‌ ನಿಂದಾಗಿ ಹಾನಿಯಾಗಿರುವ ಕೃಷಿ, ತೋಟಗಾರಿಕೆ ಬೆಳೆಗಳು, ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಸರಿಯಾಗಿ ಆಹಾರ ಪದಾರ್ಥ ವಿತರಿಸಲಾಗುತ್ತಿದೆಯೇ ಎಂಬುದರ ಬಗ್ಗೆ ಚರ್ಚಿಸಬೇಕು. ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ರೈತರು ಬೆಳೆದ ತರಕಾರಿ ಮತ್ತು ಹಣ್ಣು ಮಾರಾಟವಾಗದೆ ಅಂದಾಜು ₹ 100 ಕೋಟಿ ನಷ್ಟವಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು,ದಿಗ್ಬಂಧನದಿಂದಾಗಿ ಜನರು ಹೊರಗೆ ಬರುವಂತಿಲ್ಲ. ಹೊರ ಬಂದವರಿಗೆ ಗೂಸಾ ಬೀಳುತ್ತದೆ. ಕೃಷಿಕರು ಪಾಸ್‌ ಇಲ್ಲದೆ ಓಡಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT