ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರ | ಗುಂಡಿಬಿದ್ದ ರಸ್ತೆ; ದುರಸ್ತಿಗೆ ಅನಾಸ್ಥೆ

Published 11 ಅಕ್ಟೋಬರ್ 2023, 5:56 IST
Last Updated 11 ಅಕ್ಟೋಬರ್ 2023, 5:56 IST
ಅಕ್ಷರ ಗಾತ್ರ

ವರದಿ: ಎಚ್.ವಿ. ಸುರೇಶ್‌ಕುಮಾರ್

ಹೊಳೆನರಸೀಪುರ: ಪಟ್ಟಣದ ಸೀತಾವಿಲಾಸ ರಸ್ತೆ, ಕಾಳಿಕಾಂಬ ದೇವಾಲಯ ರಸ್ತೆ, ಹಾಸನ ರಸ್ತೆಯ ಪುರಸಭೆ ಕೋಳಿ ಅಂಗಡಿ ವಾಣಿಜ್ಯ ಸಂಕೀರ್ಣದ ಎದುರು ದೊಡ್ಡ ಗುಂಡಿಗಳು ಬಿದ್ದಿದ್ದು, ಪಟ್ಟಣದ ಜನರು ಓಡಾಡುವುದಕ್ಕೂ ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದಲ್ಲಿ ಶುದ್ದ ಕುಡಿಯುವ ನೀರು ಒದಗಿಸಲು ಸೀತಾವಿಲಾಸ ರಸ್ತೆ ಹಾಗೂ ಕಾಳಿಕಾಂಬ ದೇವಾಲಯ ರಸ್ತೆಯಲ್ಲಿ, ಆ ಕಡೆಯಿಂದ ಈ ಕಡೆಯವರೆಗೆ ಪೈಪ್ ಅಳವಡಿಸಲು ಅಗೆದು ಹಾಕಲಾಗಿತ್ತು. ಪೈಪ್‌ಲೈನ್‌ ಅಳವಡಿಸಿ ಮುಚ್ಚದ ಕಾರಣ ರಸ್ತೆ ಪೂರ್ತಿ ಗುಂಡಿಮಯವಾಗಿದೆ.

ಅಲ್ಲಲ್ಲಿ ನೀರು ನಿಲ್ಲುತ್ತಿದ್ದು, ಗುಂಡಿ ಬಿದ್ದ ದಿನದಿಂದ ಈ ರಸ್ತೆಯಲ್ಲಿ ಬೈಕ್‌ಗಳಲ್ಲಿ ಓಡಾಡುವ ಅನೇಕರಿಗೆ ಬೆನ್ನುಹುರಿ ಸಮಸ್ಯೆ ಪ್ರಾರಂಭವಾಗಿದೆ. ಸಾರ್ವಜನಿಕರು ಓಡಾಡಲೂ ಕಷ್ಟವಾಗಿದೆ.

‘ಈ ಬಗ್ಗೆ ಹಿಂದಿನ ಮುಖ್ಯಾಧಿಕಾರಿ ಶಾಂತಲಾ ಅವರಿಗೆ ವಿವರಿಸಿದ್ದರೂ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಬಂದಿರುವ ಮುಖ್ಯಾಧಿಕಾರಿ ಮಹೇಂದ್ರ ಅವರಿಗೂ ಮನವಿ ಸಲ್ಲಿಸಿದ್ದು, ಸೀತಾವಿಲಾಸ ರಸ್ತೆ ಹಾಗೂ ಕಾಳಿಕಾಂಬ ರಸ್ತೆ ಗುಂಡಿಗಳನ್ನು ಮುಚ್ಚಿಸುವಂತೆ ಆಗ್ರಹಿಸಲಾಗಿದೆ’ ಎಂದು ಜನಸ್ಪಂದನ ವೇದಿಕೆಯ ಸುರೇಶ್‌ ತಿಳಿಸಿದ್ದಾರೆ.

‘2 ತಿಂಗಳು ಕಳೆಯುತ್ತಾ ಬಂದಿದೆ. ಆದರೆ ರಸ್ತೆ ಮಾತ್ರ ದುರಸ್ತಿ ಆಗಿಲ್ಲ. ಇದರಿಂದ ಬಡಾವಣೆಯ ಜನರು ತೊಂದರೆ ಅನುಭವಿಸುತ್ತಿದ್ದು, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಹಾಕಲು ಸಿದ್ದತೆ ನಡೆಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಪುರಸಭೆಯಲ್ಲಿ ರಸ್ತೆ ದುರಸ್ತಿಗೆ ಹಣ ಇಲ್ಲ. ಆದರೆ ಮೇಲಿಂದ ಮೇಲೆ ಪುರಸಭೆಯವರು ಅಗತ್ಯ ಇಲ್ಲದ ಕೆಲಸಗಳನ್ನು ಮಾಡಿಸಲು ಲಕ್ಷಾಂತರ ಹಣ ವೆಚ್ಚ ಮಾಡುತ್ತಾರೆ’ ಎಂದು ಪುರಸಭೆ ಆಡಳಿತ ಪಕ್ಷದ ಸದಸ್ಯರೊಬ್ಬರು ದೂರಿದರು.

‘ಗಾಂಧೀವೃತ್ತದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಡಿಜಿಟಲ್ ಜಾಹೀರಾತು ಫಲಕ ಹಾಕಿದ್ದಾರೆ. 1 ತಿಂಗಳಲ್ಲೇ ಅದು ಕೆಟ್ಟು ಹೋಗಿದೆ. ಪುರಸಭೆಯ ವಾಣಿಜ್ಯ ಸಂಕೀರ್ಣದಲ್ಲಿ ಅನೇಕ ವರ್ಷಗಳಿಂದ ಮಳಿಗೆಗಳು ಖಾಲಿ ಬಿದ್ದಿದೆ. ಮತ್ತೆ ಮತ್ತೆ ಮಳಿಗೆಗಳನ್ನು ಕಟ್ಟಿ ಸಾರ್ವಜನಿಕ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ’ ಎಂದು
ದೂರಿದ್ದಾರೆ.

ಈ ಬಗ್ಗೆ ಶಾಸಕ ರೇವಣ್ಣ ಅವರ ಗಮನಕ್ಕೆ ತರಲಾಗಿದ್ದು, ತಕ್ಷಣ ಡಾಂಬರ್‌ ಹಾಕಿಸಿ ಎಂದು ಸೂಚಿಸಿದ್ದರು. ಆದರೆ ಕೆಲಸ ಇನ್ನೂ ಪ್ರಾರಂಭ ಆಗಿಲ್ಲ ಎನ್ನುವುದು ಜನರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT