ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿ–ಮಳೆಗೆ ಮನೆ ಕಳೆದುಕೊಂಡ ಕುಟುಂಬ

ವರ್ಷ ಕಳೆದರೂ ಸಿಗದ ಪರಿಹಾರ, ಬದುಕಿಗಾಗಿ ಕಾಫಿ ಎಸ್ಟೆಟ್‌ ಮೊರೆ
Last Updated 17 ಮೇ 2021, 3:34 IST
ಅಕ್ಷರ ಗಾತ್ರ

ಹಾಸನ: ಕಳೆದ ವರ್ಷ ಸುರಿದ ಭಾರಿ ಮಳೆಗೆ ಮನೆಯ ಮೇಲೆ ಮರ ಬಿದ್ದು ಮನೆ ಹಾಗೂ ಬದುಕು ಕಳೆದುಕೊಂಡಿರುವ ಕುಟುಂಬ ಒಂದು ಕಾಫಿ ಎಸ್ಟೇಟ್‌ನಲ್ಲಿ ಆಸರೆ ಪಡೆದಿದ್ದು, ಕೂಲಿ ಕೆಲಸ ಮಾಡಿಕೊಡು ಜೀವನ ನಡೆಸುತ್ತಿದೆ.

ಸಕಲೇಶಪುರ ತಾಲ್ಲೂಕಿನ ಚಂಗಡಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹೇರೂರು ಗ್ರಾಮದ ಅಣ್ಣಾಚಾರಿ ಮತ್ತು ಸುಮಿತ್ರ ದಂಪತಿಯ ಸಂಕಷ್ಟವಿದು. ಈ ದಂಪತಿಗೆ ನಾಲ್ವರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದು, ಮೂರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ.

‘ಪತಿ ಅಣ್ಣಾಚಾರಿ ಆಸ್ತಮದಿಂದ ಬಳಲುತ್ತಿದ್ದು, ಆರೈಕೆಗೆಂದು ಮನೆ ಬಿಟ್ಟು ದೊಡ್ಡ ಮಗಳ ಮನೆಯಲ್ಲಿ ಕಲವು ತಿಂಗಳು ಇದ್ದೆವು. ಕಳೆದ ವರ್ಷ ಸುರಿದ ಗಾಳಿ ಮಳೆಗೆ ಮನೆಯ ಹಿಂಭಾಗ ಇದ್ದ ಮರ ಮನೆಯ ಮೇಲೆ ಉರುಳಿ ಸಂಪೂರ್ಣ ಜಖಂ ಆಗಿತ್ತು. ಊರಿನವರು ಕರೆ ಮಾಡಿ ಈ ವಿಷಯ ತಿಳಿಸಿದರು. ಆದರೆ, ಮೊದಲ ಹಂತದ ಕೋವಿಡ್‌ ಲಾಕ್‌ಡೌನ್ ಇದ್ದ ಕಾರಣ ಊರಿಗೆ ಹೋಗಲು ಆಗಲಿಲ್ಲ. ಬಳಿಕ ಹೋಗಿ ನೋಡಿದಾಗ ಮನೆ ಸಂಪೂರ್ಣಜಖಂ ಆಗಿದ್ದು, ಇಡೀ ಕುಟುಂಬ ಬೀದಿಗೆ ಬೀಳುವ ಸ್ಥಿತಿ ಬಂತು’ ಎಂದು ಸುಮಿತ್ರ ಅಳಲು ತೋಡಿಕೊಂಡರು.

‘ಮನೆ ಕಳೆದುಕೊಂಡಿದ್ದರಿಂದ ಗ್ರಾಮದಿಂದ 5 ಕಿ.ಮೀ ದೂರದಲ್ಲಿರುವ ಕಾಫಿ ಎಸ್ಟೇಟ್‌ನ ಲೈನ್‌ ಮನೆಗೆ ಸೇರಿಕೊಂಡೆವು. ನಾನು, ಪತಿ, ಒಬ್ಬ ಪುತ್ರ ಹಾಗೂ ಪುತ್ರಿ ಅಲ್ಲಿ ವಾಸವಿದ್ದೇವೆ. ಪತಿಗೆ ಕಾಯಿಲೆ ಮತ್ತಷ್ಟುಉಲ್ಬಣ ಆಗಿದ್ದು, ಕಾಫಿ ತೋಟದಲ್ಲಿಕೆಲಸ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮಗಳನ್ನು ಕಾಲೇಜು ಬಿಡಿಸಿ ನಮ್ಮ ಜೊತೆಗೆ ಕೂಲಿ ಕೆಲಸ ಮಾಡಲು ಸೇರಿಸಿಕೊಂಡಿದ್ದೇವೆ. ಮಗ ಮಾತ್ರ ಓದುತ್ತಿದ್ದಾನೆ’ ಎಂದು ವಿವರಿಸಿದರು.

ಕಾಫಿ ಎಸ್ಟೇಟ್‌ನಲ್ಲಿ ಲೈನ್ ಮನೆ ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ. ಇರುವ ಮನೆಯೂ ಬಿದ್ದು ಹೋಗಿದೆ. ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು, ಪತಿಯೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಪುನಮನೆ ಮಾಡುವಷ್ಟು ಶಕ್ತಿ ಇಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು. ಇಲ್ಲವೆ ಮನೆ ಮರು ನಿರ್ಮಾಣ ಮಾಡಿಕೊಡಬೇಕು’ ಎಂದು ಸುಮಿತ್ರ ಮನವಿ ಮಾಡಿದರು.

ಗಾಳಿ ಮಳೆಗೆ ಮನೆ ಬಿದ್ದಿದ್ದರಿಂದ ದಾಖಲೆಗಳು ನಾಶವಾಗಿವೆ. ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿ ಬಳಿ ಮನವಿ ಮಾಡಿದರೂ ಪರಿಹಾರ ಒದಗಿಸಿಲ್ಲ ಎಂದು ಸುಮಿತ್ರ ಹೇಳಿದರು.

ಕಳೆದ ವರ್ಷ ಮಳೆಗೆ ಮನೆ ಬಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಆ ಸಂದರ್ಭದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಪಡಿತರ ಚೀಟಿ, ಬ್ಯಾಂಕ್‌ ಖಾತೆ, ಆಧಾರ್‌ ಕಾರ್ಡ್ ಹಾಗೂ ಸಂಬಂಧಪಟ್ಟದಾಖಲೆಯನ್ನು ಗ್ರಾಮ ಪಂಚಾಯಿತಿಗೆ ನೀಡುವಂತೆ ತಿಳಿಸಿದ್ದರೂ ನೀಡಿಲ್ಲ ಎಂದು ಚಂಗಡಿಹಳ್ಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT