ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಚುನಾವಣೆ ಮುಗಿಯುವವರೆಗೆ ಮಾತ್ರ ರಾಜಕಾರಣ: ಸಚಿವ ಕೆ.ಎನ್‌.ರಾಜಣ್ಣ

Published 11 ಜೂನ್ 2023, 13:30 IST
Last Updated 11 ಜೂನ್ 2023, 13:30 IST
ಅಕ್ಷರ ಗಾತ್ರ

ಹಾಸನ: ‘ಚುನಾವಣೆ ಮುಗಿಯುವವರೆಗೂ ಮಾತ್ರ ರಾಜಕಾರಣ. ಚುನಾವಣೆ ಮುಗಿದ ಮೇಲೆ ಎಲ್ಲರನ್ನೂ ಒಂದೇ ಸಮನಾಗಿ ನೋಡಿ ಕೆಲಸ ಮಾಡಬೇಕು. ಹಾಸನ ಜಿಲ್ಲೆಯಲ್ಲೂ ಅದೇ ರೀತಿ ಕೆಲಸ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು.

ನಗರದಲ್ಲಿ ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ಸ್ವರೂಪ್‌ ಪ್ರಕಾಶ್ ಗೈರು ವಿಚಾರವಾಗಿ ಪ್ರತಿಕ್ರಿಯಿಸಿ, ‘ನಾನು ಏಕೆ ಬರಬಾರದು ಎಂದು ಕೇಳಿದ್ದೇನೆ ಅಷ್ಟೇ. ಅವರು ಬರಲಿಲ್ಲ ಎಂದರೆ ಅದರರ್ಥ ವಿರೋಧ ಎಂದು ಆರೋಪ ಮಾಡಿಲ್ಲ. ಬೇರೆ ಬೇರೆ ಶಾಸಕರು, ಅವರವರ ಕ್ಷೇತ್ರದಲ್ಲಿ ಕಾರ್ಯಕ್ರಮ ಚಾಲನೆ ಮಾಡಲು ಹೋಗಿದ್ಧಾರೆ ಎಂದು ಭಾವಿಸಿದ್ದೇನೆ’ ಎಂದರು.

‘ಶಾಸಕರಾದ ಬಾಲಕೃಷ್ಣ, ಶಿವಲಿಂಗೇಗೌಡ ಸಿಕ್ಕಿದ್ದರು, ನಾವು ನಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮ ಚಾಲನೆ ಮಾಡಬೇಕು ಅಂತ ಹೋದರು. ಸ್ವರೂಪ್‌ ಕೂಡ ಅದೇ ರೀತಿ ಬರುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಅವರು ಭಾಗವಹಿಸಲಿಲ್ಲ ಎಂದರೆ, ಜನಪರ ಕಾರ್ಯಕ್ರಮಗಳಿಗೆ ವಿರೋಧವಿದ್ದಾರಾ? ಎಂದು ಜನ ಭಾವಿಸಿದರೆ ಅದಕ್ಕೆ ನಾನು ಉತ್ತರ ಹೇಳಲು ಆಗಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸರ್ಕಾರಿ ಕಾರ್ಯಕ್ರಮದಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಲೋಪ ಆಗಿದ್ದರೆ, ಸಲಹೆ ಕೊಡಿ. ಆ ಸಲಹೆಯಂತೆ ಮುನ್ನಡೆಯುತ್ತೇವೆ. ನಾನು ಭಾಷಣದಲ್ಲಿ ಹೇಳಿದ್ದೇನೆ, ನನಗೆ ಯಾರ ಹೆಸರುಗಳು ಗೊತ್ತಿಲ್ಲ, ಯಾರೂ ಪರಿಚಯ ಇಲ್ಲ. ಹಾಗಾಗಿ ಯಾರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ. ಯಾವ ಲೋಪಗಳಿವೆಯೋ ಅದನ್ನು ಸರಿಪಡಿಸಿಕೊಂಡು ಮುಂದೆ ನಡೆಯುತ್ತೇನೆ. ಈ ಜಿಲ್ಲೆಯಲ್ಲಿ ಒಳ್ಳೆಯ ಆಡಳಿತ ಕೊಡುವ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

‘ಮಧುಗಿರಿ ಸಾಮಾನ್ಯ ಕ್ಷೇತ್ರ, ನಾನು ಪರಿಶಿಷ್ಟ ಪಂಗಡದ ಅಭ್ಯರ್ಥಿ. ಮಧುಗಿರಿ ಕ್ಷೇತ್ರದಲ್ಲಿ 36 ಸಾವಿರ ಬಹುಮತದಿಂದ ಗೆಲ್ಲಿಸುತ್ತಾರೆ ಎಂದರೆ, ಅಲ್ಲಿ ನಮ್ಮ ಜಾತಿ ಇಲ್ಲ, ದುಡ್ಡು ವ್ಯಯ ಮಾಡಿಲ್ಲ. ಏನೂ ಇಲ್ಲದೇ ಜನಪರವಾಗಿ ಕೆಲಸ ಮಾಡಿರುವುದರಿಂದ ಪ್ರೀತಿ, ವಿಶ್ವಾಸದಿಂದ ನನಗೆ ಅವಕಾಶ ಕೊಟ್ಟಿದ್ದಾರೆ’ ಎಂದರು.

‘ನಾನು ಅಧಿಕಾರಕ್ಕೆ ಬಂದ ಮೇಲೆ ಆ ಕ್ಷೇತ್ರದಲ್ಲಿರುವ ಎಲ್ಲ ಜನರು ನಮ್ಮ ಕುಟುಂಬದ ಸದಸ್ಯರೆಂದು ತಿಳಿದು, ಅವರೆಲ್ಲರ ಕಷ್ಟ, ಸುಖಕ್ಕೆ ಸ್ಪಂದಿಸಿ ಕೆಲಸ ಮಾಡುತ್ತಿದ್ದೇನೆ. ಅದೇ ರೀತಿ ಈ ಜಿಲ್ಲೆಯಲ್ಲೂ ಮಾಡುತ್ತೇನೆ’ ಎಂದರು.

‘ಜನಾಭಿಪ್ರಾಯ ಏನಿದೆಯೋ ಅದಕ್ಕೆ ನಾವೆಲ್ಲರೂ ತಲೆಬಾಗಬೇಕು. ನಾಳೆ ಒಂದು ಸ್ಥಾನ ಇರುವ ಪಕ್ಷ ಹತ್ತು ಸ್ಥಾನ ಗೆಲ್ಲಬಹುದು. ಏಳು ಸ್ಥಾನ ಇರುವುದು ಸೊನ್ನೆ ಆಗಬಹುದು. ಅದು ಬೇರೆ ವಿಚಾರ. ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಬಲಶಾಲಿಯಾಗಿ ಮಾಡುವ ಪ್ರಯತ್ನ ನಿರಂತರವಾಗಿ ಇರುತ್ತದೆ’ ಎಂದರು.

ಚುನಾವಣೆಯಲ್ಲಿ ನೀಡಿದ ಭರವಸೆ ಅನುಷ್ಠಾನ

ಶಕ್ತಿ ಯೋಜನೆಗೆ ಚಾಲನೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯದ ಶಕ್ತಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಭಾನುವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಸರ್ಕಾರವು ಶಕ್ತಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಎಲ್ಲ ಸಮುದಾಯದ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಗ್ರಾಮೀಣ ಭಾಗದ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಹೆಣ್ಣು ಮಕ್ಕಳ ಬಸ್ ಪ್ರಯಾಣಕ್ಕೆ ಈ ಯೋಜನೆ ಸಹಕಾರಿಯಾಗಲಿದೆ. ಹಳ್ಳಿಗಾಡು ಪ್ರದೇಶದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಅವರನ್ನು ಸಮಾಜದ ಆಸ್ತಿಯನ್ನಾಗಿ ಪರಿವರ್ತಿಸಿ ಎಂದು ತಿಳಿಸಿದರು. ಹಾಸನ ಜಿಲ್ಲೆಯ ಉಸ್ತುವಾರಿ ನೀಡಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಅವರು ಜನಪರವಾದ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಅಧಿಕಾರಿಗಳು ಅಸಹಾಯಕರಿಗೆ ಸ್ಪಂದಿಸಿ ನ್ಯಾಯುತವಾಗಿ ಕೆಲಸ ಮಾಡುವಂತೆ ತಿಳಿಸಿದರು.

ಒಂದು ದಾಖಲೆ ತೋರಿಸಿದರೆ ಸಾಕು

ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯದೊಳಗೆ ಎಲ್ಲಿಂದ ಎಲ್ಲಿಗೆ ಬೇಕಾದರೂ ರಾಜ್ಯದ ಒಳಗೆ ಸಂಚಾರ ಮಾಡುವ ಎಲ್ಲ ವೇಗದೂತ ಸೇರಿದಂತೆ ಸಾಮಾನ್ಯ ಬಸ್‍ಗಳಲ್ಲಿ ಪ್ರಯಾಣ ಮಾಡಬಹುದಾಗಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್‌. ಅರುಣ ತಿಳಿಸಿದರು. ಉಚಿತ ಪ್ರಯಾಣಕ್ಕೆ ಆಧಾರ್ ಕಾರ್ಡ್ ಮತದಾರ ಗುರುತಿನ ಚೀಟಿ ಡ್ರೈವಿಂಗ್ ಲೈಸನ್ಸ್ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ನೀಡಿರುವ ವಾಸಸ್ಥಳದ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೂ ಒಂದು ದಾಖಲೆ ತೋರಿಸಿ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದಾಗಿದೆ ಎಂದು ತಿಳಿಸಿದರು. ನಗರಸಭೆ ಅಧ್ಯಕ್ಷ ಮೋಹನ್ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ ಉಪಸ್ಥಿತರಿದ್ದರು.

ಸಚಿವರ ಎದುರೇ ಕಾರ್ಯಕರ್ತರ ಆಕ್ರೋಶ

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಭೇಟಿ ನೀಡಿದ್ದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ಎದುರೇ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣರಾದವರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ಪಟ್ಟು ಹಿಡಿದ ಕಾರ್ಯಕರ್ತರು ಸಭೆಯಲ್ಲಿ ಗದ್ದಲ ಆರಂಭಿಸಿದರು. ಚುನಾವಣೆಯಲ್ಲಿ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕೆಲ ಮುಖಂಡರು ಸೋಲಿಸಿದ್ದಾರೆ. ಅಂಥವರನ್ನು ವೇದಿಕೆ ಮೇಲೆ ಕೂರಿಸಿದ್ದೀರಿ. ಮೊದಲು ಅವರನ್ನು ವೇದಿಕೆಯಿಂದ ಕೆಳಗಿಳಿಸಿ. ನಂತರ ಸಭೆಯನ್ನು ಮುಂದುವರಿಸಿ ಎಂದು ಒತ್ತಾಯಿಸಿದರು. ಇದರಿಂದ ಸಿಡಿಮಿಡಿಗೊಂಡ ಸಚಿವ ಕೆ.ಎನ್. ರಾಜಣ್ಣ ‘ನಾನು ಈ ರೀತಿ ಗಲಾಟೆ ಮಾಡಿಯೇ ರಾಜಕಾರಣ ಮಾಡಿ ಇಲ್ಲಿ ಬಂದು ನಿಂತಿದ್ದಿನಿ. ನನ್ನ ಹತ್ತಿರ ಇದೆಲ್ಲ ಇಟ್ಟುಕೊಳ್ಳಬೇಡಿ ನನ್ನ ಹತ್ತಿರ ಇದೆಲ್ಲಾ ನಡೆಯಲ್ಲ. ಏನೇ ಇದ್ದರೂ ಇಲ್ಲಿ ಬಂದು ಹೇಳಿ ಪಕ್ಷದ ಸೋಲಿಗೆ ಕಾರಣರಾದವರು ಇದ್ದರೆ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುತ್ತದೆ. ಸಭೆಯಲ್ಲಿ ಈ ರೀತಿಯ ವರ್ತನೆ ತೋರಬಾರದು. ಇದೇ ಕಡೆ’ ಎಂದು ಎಚ್ಚರಿಕೆ ನೀಡಿದರು.

ಹಾಸನದಲ್ಲಿ ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಚಿವ ಕೆ.ಎನ್‌. ರಾಜಣ್ಯ ಮಹಿಳೆಯರೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದರು.
ಹಾಸನದಲ್ಲಿ ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಚಿವ ಕೆ.ಎನ್‌. ರಾಜಣ್ಯ ಮಹಿಳೆಯರೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT