ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಳ

ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ‌, ಹಲವು ರಸ್ತೆಗಳು ಕೆಸರುಮಯ
Last Updated 22 ಜುಲೈ 2021, 13:28 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಗುರುವಾರ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಹಾಸನ, ಬೇಲೂರು, ಆಲೂರು, ಅರಕಲಗೂಡು, ಸಕಲೇಶಪುರ, ಹೆತ್ತೂರು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹಳ್ಳ, ಕೊಳ್ಳ ಹಾಗೂ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಸಕಲೇಶಪುರ, ಹೆತ್ತೂರು ಹೋಬಳಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 126 ಮಿ.ಮೀ. ಮಳೆಯಾಗಿದೆ. ಅಡಿಕೆ, ಕಾಫಿ, ಭತ್ತದ ಗದ್ದೆಗಳು ಜಲಾವೃತಗೊಂಡು, ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗಿದೆ.

‌ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ, ಚರಂಡಿಗಳು ತುಂಬಿ ಹರಿದವು. ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಹಾಸನ ನಗರದಲ್ಲಿ ದಿನವಿಡೀ ಜಿಟಿಜಿಟಿ ಮಳೆಯಾಗಿದೆ. ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕಿದರು. ತರಕಾರಿ, ಹೂವು ಮತ್ತು ಮಾಂಸದ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಹಲವು ರಸ್ತೆಗಳು ಕೆಸರುಮಯವಾಗಿದೆ. ಕೆಸರಿನ ರಸ್ತೆಯಲ್ಲಿ ವಾಹನಗಳು ಮತ್ತು ಸಾರ್ವಜನಿಕರುಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಶ್ರವಣಬೆಳಗೊಳ, ಹಿರೀಸಾವೆ, ನುಗ್ಗೇಹಳ್ಳಿ, ಹಳೇಬೀಡು, ಕೊಣನೂರು ಭಾಗದಲ್ಲಿ ಜಿಟಿಜಿಟಿ ಮಳೆ ಸುರಿದಿದೆ. ಜಲಾನಯನ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಜಲಾಶಯಗಳ ಒಳ ಹರಿವು ಹೆಚ್ಚಾಗಿದೆ. ಹೇಮಾವತಿ ಜಲಾಶಯಕ್ಕೆ 10,786 ಕ್ಯುಸೆಕ್‌ ಒಳ ಹರಿವು, 300 ಕ್ಯುಸೆಕ್ ಹೊರ ಹರಿವು ಇದೆ. ಜಲಾಶಯದ ಮಟ್ಟ 2908.32 ಅಡಿಗಳಿಷ್ಟಿದೆ.

ಹಾಸನದ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಾಲ್ ಬಳಿ ಧಾರಾಕಾರ ಮಳೆಗೆ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು, ಶಿರಾಡಿ ಘಾಟ್ ರಸ್ತೆ ಬಂದ್ ಮಾಡಲಾಗಿದೆ. ಧರ್ಮಸ್ಥಳ, ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭೂಕುಸಿತವಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಸಂಚಾರ ಬಂದ್‌ ಮಾಡಲಾಗಿದೆ.

ಕುಸಿತ ತಡೆದು ಸಂಚಾರ ಮಾರ್ಗವನ್ನು ತುರ್ತಾಗಿ ದುರಸ್ತಿ ಪಡಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್‌ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT