ಶನಿವಾರ, ಡಿಸೆಂಬರ್ 5, 2020
25 °C
ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್‌ ಎಚ್ಚರಿಕೆ

ಚಳಿಗಾಲದಲ್ಲಿ ಸೋಂಕು ಹೆಚ್ಚಳ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌ ಪ‍್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಒಳ್ಳೆಯ ವಿಚಾರ. ಆದರೆ, ಚಳಿಗಾಲದಲ್ಲಿ
ಸೋಂಕು ಏರಿಕೆಯಾಗುವ ಸಾಧ್ಯತೆ ಇರುವುದರಿದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎಸ್‌. ಶ್ವೇತಾ ದೇವರಾಜ್ ಆರೋಗ್ಯ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌ ಮಾತನಾಡಿ, ವಾರದಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ರ‍್ಯಾಪಿಡ್‌ ಹಾಗೂ ಆರ್‌ಟಿಪಿಸಿಆರ‍್ ಸೇರಿ ಈವರೆಗೂ ಜಿಲ್ಲೆಯಲ್ಲಿ 2.48 ಲಕ್ಷ ಜನರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದೆ. ಮೊದಲು ಶೇಕಡಾ 17 ರಿಂದ 21 ಜನರಿಗೆ ಪಾಸಿಟಿವ್‌ ಬರುತ್ತಿತ್ತು. ಈಗ ಶೇಕಡಾ 2.5 ಜನರಿಗೆ ಮಾತ್ರ ಪಾಸಿಟಿವ್‌ ಬರುತ್ತಿದೆ. 5 ಲಕ್ಷ ಜನರಿಗೆ ಕೋವಿಡ್‌ ಬಂದು ಹೋಗಿರಬಹುದು ಎಂದು ಅಂದಾಜಿಸಲಾಗಿದೆ ಎಂದರು.

ಕೋವಿಡ್‌ನಿಂದ ಜಿಲ್ಲೆಯಲ್ಲಿ ಇತರೆ ಕಾಯಿಲೆಗಳು ಕಡಿಮೆಯಾಗಿವೆ. ಎರಡು ಮಲೇರಿಯಾ ಹಾಗೂ 56 ಡೆಂಗಿ ಪ್ರಕರಣಗಳಿವೆ. ಕಳೆದ ವರ್ಷ ಇದೇ ಸಮಯದಲ್ಲಿ 260 ಡೆಂಗಿ ಪ್ರಕರಣಗಳು ಇದ್ದವು. ಈವರೆಗೆ 5.84 ಲಕ್ಷ ಜನರಿಗೆ ಹೆಲ್ತ್‌ ಕಾರ್ಡ್ ವಿತರಿಸಲಾಗಿದೆ. ಹಾಸನ ರಾಜ್ಯಕ್ಕೆ 7ನೇ ಸ್ಥಾನದಲ್ಲಿದೆ ಎಂದರು.

ಕಳೆದ ಎರಡು, ಮೂರು ವರ್ಷಗಳಿಂದ ರೈತರಿಗೆ ಬೆಳೆ ವಿಮೆ ಪರಿಹಾರ ಸರಿಯಾಗಿ ಸಿಗುತ್ತಿಲ್ಲ ಎಂಬ ಅಧ್ಯಕ್ಷೆ ಆರೋಪಕ್ಕೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ರವಿ, ಕಳೆದ ವರ್ಷ 18 ಸಾವಿರ ಜನ ರೈತರು ಬೆಳೆ ವಿಮೆಗೆ ಹಣ ಕಟ್ಟಿದ್ದರು. ಪ್ರಸಕ್ತ ಸಾಲಿನಲ್ಲಿ 24061 ಜನರು ಬೆಳೆ ವಿಮೆ ಹಣ ಕಟ್ಟಿದ್ದಾರೆ. ಕಳೆದ ಸಾಲಿನ ಪರಿಹಾರ ಹಣ ಇನ್ನೂ ಬಂದಿಲ್ಲ. ದಾಖಲೆಗಳನ್ನು ಪರಿಶೀಲಿಸಿ ಮತ್ತೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಹಿಂಗಾರು ಹಂಗಾಮಿನಲ್ಲಿ 19,780 ಹೆಕ್ಟೇರ್‌ ಬಿತ್ತನೆ ಗುರಿ ಪೈಕಿ 7,619 ಹೆಕ್ಟೇರ್‌ ಬಿತ್ತನೆ ಮಾಡಲಾಗಿದ್ದು, ಶೇಕಡಾ
39 ರಷ್ಟು ಗುರಿ ಸಾಧಿಸಲಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇದ್ದು, ಯಾವುದೇ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

ಬೆಳಕು ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಪೂರ್ಣಗೊಳಿಸಲಾಗಿರುವ ಕಾಮಗಾರಿಗಳ ವರದಿ ಪಡೆದ ಅಧ್ಯಕ್ಷೆ, ನಿರಂತರ ಜ್ಯೋತಿ ಯೊಜನೆಯಡಿ ಬಾಕಿ ಇರುವ ಎಲ್ಲಾ ಮನೆಗಳಿಗೆ ಹಾಗೂ ಗಂಗಾ ಕಲ್ಯಾಣ ಯೋಜನೆ, ಕುಡಿಯುವ ನೀರಿನ ಯೋಜನೆಗಳಿಗೆ ತಕ್ಷಣವೇ ವಿದ್ಯುತ್ ಸಂಪರ್ಕ ಒದಗಿಸಲು ಶ್ವೇತಾ ಹೇಳಿದರು.

ಚಿರತೆ, ಆನೆಗಳಂತಹ ಕಾಡು ಪ್ರಾಣಿಗಳು ಇತ್ತೀಚೆಗೆ ಗ್ರಾಮಗಳತ್ತ ನುಗ್ಗುತ್ತಿವೆ. ಅವುಗಳಿಗೆ ಆಹಾರ ಅಥವಾ ನೀರಿನ
ಅಭಾವವಾಗದಂತೆ ಅರಣ್ಯದೊಳಗೆ ನೀರಿನ ಸೌಲಭ್ಯ ಸಿಗುವಂತೆ ಮಾಡಬೇಕು. ವಿಧವಾ ವೇತನ ಹಾಗೂ ಇತರೆ ಸೌಲಭ್ಯಗಳೂ ಸಹ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಈ ಬಗ್ಗೆ ಇರುವ ತೊಡಕುಗಳನ್ನು ಸರಿಪಡಿಸುವಂತೆ ನಿರ್ದೇಶನ ನೀಡಿದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಮಾತನಾಡಿ, ಆರೋಗ್ಯ ಇಲಾಖೆಯಿಂದ ನೀಡಲಾಗುವ ಜನನಿ ಸುರಕ್ಷಾ ಯೋಜನೆ ಹೆಚ್ಚು ಫಲಾನುಭವಿಗಳಿಗೆ ಸಿಗುತ್ತಿಲ್ಲ. ಹಾಗಾಗಿ ಹೆರಿಗೆ ಸಂದರ್ಧದಲ್ಲಿ ಈ ಸೌಲಭ್ಯ ಒದಗಿಸಿದ ನಂತರವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂದರು.

ಮುಂದಿನ ದಿನಗಳಲ್ಲಿ ಎರಡನೇ ಹಂತದಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ
ತಿಂಗಳಿಗೊಮ್ಮೆಯಾದರೂ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎಚ್.ವಿ. ನಾಗರಾಜ್, ಉಪಕಾರ್ಯದರ್ಶಿ ಮಹೇಶ್, ಚಂದ್ರಶೇಖರ್ ಹಾಗೂ ಇತರರು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.