ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿ ಕಾರ್ಮಿಕರಿಗೆ ಹಕ್ಕುಪತ್ರ ನೀಡಿ: ಜಿಲ್ಲಾಧಿಕಾರಿ ಆರ್‌.ಗಿರೀಶ್‌ಗೆ ಮನವಿ

Last Updated 13 ಸೆಪ್ಟೆಂಬರ್ 2021, 13:48 IST
ಅಕ್ಷರ ಗಾತ್ರ

ಹಾಸನ: ನಾಲ್ಕು ದಶಕಗಳಿಂದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಬೇಲೂರು ತಾಲ್ಲೂಕು ಅರೇಹಳ್ಳಿ ಹೋಬಳಿ ಹೆಗ್ಗಡಿಹಳ್ಳಿ ಗ್ರಾಮದ 40 ಮಂದಿ ಕೂಲಿ ಕಾರ್ಮಿಕರಿಗೆ ಮನೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹೆಗ್ಗಡಿಹಳ್ಳಿ ಗ್ರಾಮದ ಸರ್ವೆ ನಂ 46 ರಲ್ಲಿ ಸುಮಾರು 40 ಕೃಷಿ ಕೂಲಿಗಾರರ ಕುಟುಂಬ ಮನೆ ನಿರ್ಮಿಸಿ ಕೊಂಡು ವಾಸ ಮಾಡುತ್ತಿವೆ. ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ಸರ್ವೆ ನಂ. 46 ಹೇಮಾವತಿ ಹಾಗೂ ಯಗಚಿ ಜಲಾಶಯ ಮುಳುಗಡೆ ನಿರಾಶ್ರಿತರಿಗೆ ಕಾಯ್ದಿರಿಸಿರುವ ಜಮೀನು ಎಂದು ಕಾರಣ ಹೇಳಿ ಇದುವರೆಗೂ ಹಕ್ಕುಪತ್ರ ನೀಡಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ವಾಸವಿರುವ ಮನೆಗಳಿಗೆ ಗ್ರಾಮ ಪಂಚಾಯಿತಿಗೆ ಕಂದಾಯ, ನೀರಿನ ತೆರಿಗೆಯನ್ನು ಕಟ್ಟಲಾಗಿದೆ. ನಿವೇಶನಗಳಲ್ಲಿ ಮನೆ ನಿರ್ಮಿಸಲು ಪಂಚಾಯಿತಿ ವತಿಯಿಂದಲೇ ಅನುಮತಿ ನೀಡಲಾಗಿದೆ. 94ಸಿ, 94 ಸಿಸಿ ಅಡಿಯಲ್ಲಿ ಹಕ್ಕುಪತ್ರ ನೀಡಿ ಎಂದು ಅರ್ಜಿ ಸಲ್ಲಿಸಲಾಗಿದೆ. ಆದರೂ ಹಕ್ಕುಪತ್ರ ನೀಡಿಲ್ಲ. ಇದರಿಂದ ಸರ್ಕಾರದ ಸೌಲಭ್ಯ ಪಡೆಯಲು ಸಮಸ್ಯೆ ಉಂಟಾಗುತ್ತಿದೆ ಎಂದು ಅಲವತ್ತುಕೊಂಡರು.

ತಾಲ್ಲೂಕಿನಲ್ಲಿ ನೂರಾರು ಎಕರೆ ಸರ್ಕಾರಿ ಜಮೀನನ್ನು ಬಡಾವಣೆ ನಿರ್ಮಾಣಕ್ಕೆ ಮಂಜೂರಾತಿಮಾಡಿಕೊಡಲಾಗುತ್ತಿದೆ. ಆದರೆ, ಬಡ ಜನರಿಗೆ ಅತ್ಯಗತ್ಯ ಮನೆ ಹಕ್ಕುಪತ್ರ ನೀಡದಿರುವುದು ದುರಂತ.ಕೂಡಲೇ ಬಡ ಕಾರ್ಮಿಕರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡ ಬಳ್ಳೂರು ಸ್ವಾಮಿಗೌಡ, ರೈತ ಸಂಘದ ಬೇಲೂರು ತಾಲ್ಲೂಕು ಘಟಕದ ಅಧ್ಯಕ್ಷ ಬೋಗ ಮಲ್ಲೇಶ್‌, ಬಸವರಾಜ್‌, ಹೆಗ್ಗಡಿಹಳ್ಳಿ ಗ್ರಾಮಸ್ಥರಾದ ಕೃಷ್ಣ, ಸಂತೋಷ್‌, ಪ್ರಕಾಶ್‌, ಅಣ್ಣಪ್ಪ, ಸಚಿನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT