ಗುರುವಾರ , ಆಗಸ್ಟ್ 22, 2019
21 °C

ಜಲಾಶಯಕ್ಕೆ ಮುತ್ತಿಗೆ ಯತ್ನ, ಬಂಧನ

Published:
Updated:

ಹಾಸನ: ಹೇಮಾವತಿ ಜಲಾಶಯದಿಂದ ತಮಿಳು ನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ, ನಾಲೆಗಳಿಗೆ ಹರಿಸಿ ಎಂದು ಪ್ರತಿಭಟನೆ ನಡೆಸಿ ಡ್ಯಾಂ ಒಳ ಪ್ರವೇಶಿಸಿ ಮುತ್ತಿಗೆ ಹಾಕಲು ಯತ್ನಿಸಿದ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

"ಕೃಷಿಗೆ ನೀರು ಕೇಳುತ್ತಿಲ್ಲ, ಜನ-ಜಾನುವಾರು ಕುಡಿಯಲು ನೀರು ಹರಿಸಿ ಎಂದು ಅನೇಕ ಸಲ ಮನವಿ ಮಾಡಿದ್ದರೂ, ಯಾರೊಬ್ಬರೂ ಸ್ಪಂದಿಸಿಲ್ಲ' ಎಂದು ಪ್ರತಿಭಟನಾಕಾರರು ಆರೋಪಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ‘ಇನ್ನಾದರೂ ನಮ್ಮನ್ನು ಸಾಯಿಸಿ, ಪ್ರಾಧಿಕಾರದ ಆದೇಶ ಪಾಲನೆಗೆ ಮುಂದಾದರೆ ಹೋರಾಟ ತೀವ್ರಗೊಳಿಸಲಾಗುವುದು. ನದಿಗೆ ನೀರು ಹರಿಸುವುದನ್ನು ನಿಲ್ಲಿಸಿ, ಅದೇ ನೀರನ್ನು ಬಲ ಮೇಲ್ದಂಡೆ ಸೇರಿ ಎಲ್ಲಾ ಅಚ್ಚುಕಟ್ಟು ನಾಲೆಗಳಿಗೆ ಹರಿಸಿ, ಆ ಮೂಲಕ ಜನ-ಜಾನುವಾರುಗಳ ನೀರಡಿಕೆ ನೀಗಿಸಬೇಕು’ ಎಂದು ಒತ್ತಾಯಿಸಿದರು.

"ಕಾವೇರಿ ನೀರು ಹಂಚಿಕೆ ಪ್ರಾಧಿಕಾರದ ಆದೇಶ ಪಾಲಿಸಲು ನಮ್ಮ ರೈತರನ್ನು ತಮಿಳುನಾಡಿಗೆ ನೀರು ಹರಿಸುವುದು ಯಾವ ನ್ಯಾಯ' ಎಂದು ಪ್ರಶ್ನಿಸಿದ ರಾಮಸ್ವಾಮಿ ಎಟಿಆರ್, ‘ 2922 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು 2892.33 ಅಡಿ ನೀರಿದೆ. ನೀರಿನ ಮಟ್ಟ ಇದಕ್ಕಿಂತ ಕೆಳಗಿಳಿದರೆ, ಅರಕಲಗೂಡು, ಹಳ್ಳಿಮೈಸೂರು, ಕೆ.ಆರ್.ನಗರ, ಕೆ.ಆರ್.ಪೇಟೆ ಭಾಗಗಳಿಗೆ ನೀರು ಹರಿಸುವ ಬಲ ಮೇಲ್ದಂಡೆ ನಾಲೆಗೆ ನೀರು ಹತ್ತುವುದಿಲ್ಲ. ಹೀಗಾಗಿ ನದಿಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಿ, ನಾಲೆಗಳಿಗೆ ಬಿಡಿ, ಇಲ್ಲವಾದರೆ ಆ ಕೆಲಸ ನಾವೇ ಮಾಡುತ್ತೇವೆ' ಎಂದು ಎಚ್ಚರಿಸಿದರು.

Post Comments (+)