ಹಾಸನ: ಅಪಾಯದಲ್ಲಿ ಸಿಲುಕಿದ್ದ ರೈಲ್ವೆ ಇಲಾಖೆಯ 12 ಸಿಬ್ಬಂದಿಗಳ ರಕ್ಷಣೆ

7
ಯಡಕುಮರಿ ಘಟನೆ ಬಿಚ್ಚಿಟ್ಟ ಸ್ಟೇಷನ್ ಮಾಸ್ಟರ್ ಗೋಪಾಲ್‌

ಹಾಸನ: ಅಪಾಯದಲ್ಲಿ ಸಿಲುಕಿದ್ದ ರೈಲ್ವೆ ಇಲಾಖೆಯ 12 ಸಿಬ್ಬಂದಿಗಳ ರಕ್ಷಣೆ

Published:
Updated:
Deccan Herald

ಹಾಸನ : ‘ಮಳೆ ನೀರು ಬಿಟ್ಟರೆ ಕುಡಿಯಲು ನೀರು ಇರಲಿಲ್ಲ. ದಿನಸಿ ಖಾಲಿಯಾಗಿತ್ತು. ಮೂರು ದಿನದಿಂದ ಯಾವುದೇ ಸಂಪರ್ಕ ಇರಲಿಲ್ಲ. ರೈಲ್ವೆ ನಿಲ್ದಾಣದ ಎದುರಿನ ಗುಡ್ಡ ಕುಸಿದು ಬಿದ್ದಾಗ ಇಲ್ಲಿಯೇ ಸಾಯುತ್ತೇವೆ ಎಂದು ಭಾವಿಸಿದ್ದೆವು..’

ಯಡಕುಮರಿ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಗೋಪಾಲ್ ಘಟನೆಯನ್ನು ಹೇಗೆ ಸ್ಮರಿಸಿದರು. ‘ ಜೀವ ಉಳಿಯುತ್ತೆ ಎಂಬ ನಂಬಿಕೆ ಇರಲಿಲ್ಲ. ಕಂದಾಯ ಇಲಾಖೆ, ಅರಣ್ಯ ಇಲಾಖೆ, ಪೊಲೀಸರು ಜೀವ ಉಳಿಸಿದರು’ ಎಂದು ಅವರ ಕಡೆ ನೋಡುತ್ತಾ ಕೃತಜ್ಞತೆಯಿಂದ ಕೈ ಮುಗಿದರು.

ಸಕಲೇಶರಪುರ–ಮಂಗಳೂರು ಮಾರ್ಗದ ರೈಲ್ವೆ ಹಳಿ ಮೇಲೆ ಕುಸಿದ ಮಣ್ಣು ತೆರವಿಗೆ ತೆರಳಿ ಅಪಾಯದಲ್ಲಿ ಸಿಲುಕಿದ್ದ ರೈಲ್ವೆ ಇಲಾಖೆಯ 12 ಸಿಬ್ಬಂದಿಯನ್ನು ಸತತ ಆರು ಗಂಟೆ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಲಾಗಿದೆ.
ಜೀವದ ಹಂಗು ತೊರೆದು ದಟ್ಟ ಕಾನನದ ನಡುವೆ ಕಾಲ್ನಡಿಗೆ ಮೂಲಕ ತೆರಳಿ ಪ್ರಾಣ ರಕ್ಷಣೆ ಮಾಡಿದ ಉಪವಿಭಾಗಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ.

ಯಡಕುಮರಿ ರೈಲ್ವೆ ನಿಲ್ದಾಣದ ಎಡ ಹಾಗೂ ಬಲ ಭಾಗದಲ್ಲಿ ಗುಡ್ಡ ಕುಸಿದು, ಇತ್ತ ಸಕಲೇಶಪುರ ಅತ್ತ ಸುಬ್ರಹ್ಮಣ್ಯಕ್ಕೂ ತೆರಳಲಾರದೆ ಸಿಬ್ಬಂದಿ ಪರದಾಡುತ್ತಿದ್ದರು. ಊಟ, ಕುಡಿಯಲು ನೀರೂ ಇಲ್ಲದೆ ರಕ್ಷಣೆಗಾಗಿ ಮೊರೆಯಿಡುತ್ತಿದ್ದ ಸಿಬ್ಬಂದಿಗಳ ರಕ್ಷಣೆಗೆ ರೈಲ್ವೆ ಇಲಾಖೆ ಮನವಿ ಮಾಡಿತ್ತು. ಬೆಳಿಗ್ಗೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ಟ್ರಕ್ಕಿಂಗ್ ಪರಿಣತರೊಂದಿಗೆ ಯಡಕುಮರಿ ಸಮೀಪದ ಕಾಗಿನೆರಿ ಮೂಲಕ ಆರು ಕಿಲೋ ಮೀಟರ್ ದುರ್ಗಮ ಹಾದಿಯಲ್ಲಿ ತೆರಳಿ  15 ಜನರ ರಕ್ಷಣಾ ತಂಡ, ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆ ತಂದಿದೆ.

ಎರಡು ದಿನಗಳಿಂದ ಯಾವುದೇ ಸಂಪರ್ಕಕ್ಕೂ ಸಿಗದೆ ರಕ್ಷಣೆಗಾಗಿ ದೇವರಿಗೆ ಮೊರೆಯಿಡುತ್ತಿದ್ದವರಿಗೆ ಎ.ಸಿ ನೇತೃತ್ವದ ಅಧಿಕಾರಿಗಳ ತಂಡ ಜೀವ ಉಳಿಸಿ ಮರುಜೀವ ನೀಡಿದೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಸಕಲೇಶಪುರ ಪೊಲೀಸ್‌ ಠಾಣೆ ಕಾನ್‌ಸ್ಟೆಬಲ್‌ ಕೀರ್ತಿ, ’ಬೆಳಿಗ್ಗೆ ಅಧಿಕಾರಿಗಳ ತಂಡದ ಜತೆ ಸ್ಥಳೀಯ ಐದು ಜನರನ್ನು ಕರೆದುಕೊಂಡು ಮಳೆಯಲ್ಲಿಯೇ ಸುಮಾರು 7 ಕಿಲೋ ಮೀಟರ್ ನಡೆದುಕೊಂಡ ಹೋದೆವು. ದಾರಿಯಲ್ಲಿ ಬಿದ್ದಿದ್ದ ದೊಡ್ಡ ಮರಗಳನ್ನು ದಾಟಿಕೊಂಡು ಹೋಗುವುದು ಸಾಹಸವೇ ಸರಿ. ಜಿಗಣೆ ಕಾಟ ಹೆಚ್ಚಿತ್ತು’ ಎಂದು ಹೇಳಿದರು.

‘ಮಾರ್ಗದಲ್ಲಿ ನಾಲ್ಕು ಕಡೆ ಗುಡ್ಡದ ಮಣ್ಣು ಕುಸಿದು ನಿಲ್ದಾಣಕ್ಕೆ ಹೋಗುವುದು ಕಷ್ಟವಾಗಿತ್ತು. ಒಂದು ಕಡೆ ಎ.ಸಿ ಲಕ್ಷ್ಮೀಕಾಂತ ರೆಡ್ಡಿ ಕೆಸರಿನಲ್ಲಿ ಸಿಲುಕಿ, ಮಂಡಿವರೆಗೂ ಹೂತುಹೋಗಿದ್ದರು. ತಕ್ಷಣವೇ ಅವರನ್ನು ಮೇಲಕ್ಕೆ ಎತ್ತಿ ಶೂಗೆ ಅಂಟಿದ್ದ ಮಣ್ಣು ಬಿಡಿಸಲಾಯಿತು’ ಎಂದು ಕೀರ್ತಿ ತಮ್ಮ ಸಾಹಸ ಯತ್ನವನ್ನು ನೆನಪಿಸಿಕೊಂಡರು.

‘ಹಲವು ಅಡೆ ತಡೆ ದಾಟಿ, ನಿಲ್ದಾಣ ತಲುಪಿ ಸಿಬ್ಬಂದಿಗೆ ಬಿಸ್ಕೆಟ್, ನೀರು ನೀಡಲಾಯಿತು. ದಣಿದಿದ್ದ ಸಿಬ್ಬಂದಿಯನ್ನು ಅದೇ ಮಾರ್ಗದಲ್ಲಿ ನಡೆಸಿಕೊಂಡು ಬರುವುದು ತ್ರಾಸದಾಯವಾಗಿತ್ತು. ಸಂಜೆ 4 ಗಂಟೆಗೆ ಕಾಗಿನೆರೆ ತಲುಪಿ, ಅಲ್ಲಿಂದ ವಾಹನದ ಮೂಲಕ ಸಕಲೇಶಪುರ ಬಂದು ತಲುಪಿದೆವು’ ಎಂದು ನಿಟ್ಟುಸಿರುಬಿಟ್ಟರು.

 

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !