ಕೆಲಸ ವಿಳಂಬ: ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

ಗುರುವಾರ , ಜೂಲೈ 18, 2019
29 °C
ಬಾಕಿ ಕಾಮಗಾರಿ ಪೂರ್ಣಗೊಳಿಸಲು ತಿಂಗಳ ಗಡುವು: ಸಚಿವ ರೇವಣ್ಣ‌

ಕೆಲಸ ವಿಳಂಬ: ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

Published:
Updated:
Prajavani

ಹಾಸನ: ಜಿಲ್ಲೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಶಾಸಕರ ನಿಧಿ ಯೋಜನೆಗಳ ಕಾಮಗಾರಿಗಳನ್ನು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸಚಿವ ಎಚ್.ಡಿ. ರೇವಣ್ಣ ಸೂಚನೆ ನೀಡಿದರು.

ಶಾಸಕರ ನಿಧಿ ಯೋಜನೆಗಳ ಅನುಷ್ಠಾನ ಕುರಿತು ಸಭೆ ನಡೆಸಿದ ಸಚಿವರು, ಕೆಲಸದಲ್ಲಿ ವಿಳಂಬ ಮತ್ತು ನಿರ್ಲಕ್ಷ ತೋರುವ ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಲವು ವರ್ಷಗಳಿಂದ ಕಾಮಗಾರಿ ಬಾಕಿ ಉಳಿದಿವೆ. ಅನೇಕ ಕಾಮಗಾರಿಗಳಿಗೆ ಇನ್ನು ಕ್ರಿಯಾ ಯೋಜನೆ ತಯಾರಿ ಮಾಡಿ ಆಡಳಿತಾತ್ಮಕ ಅನುಮೋದನೆ ಪಡೆದಿಲ್ಲ. ಎಂಜಿನಿಯರ್‌ಗಳು ಆಸಕ್ತಿ ವಹಿಸುತ್ತಿಲ್ಲ, ನಿಯಮಗಳಲ್ಲಿ ಹಲವು ನ್ಯೂನ್ಯತೆಗಳಿವೆ ಎಂದು ಶಾಸಕರಾದ ಎ.ಟಿ. ರಾಮಸ್ವಾಮಿ, ಎಚ್.ಕೆ. ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಪ್ರೀತಂ ಜೆ ಗೌಡ, ಸಿ.ಎನ್. ಬಾಲಕೃಷ್ಣ, ಕೆ.ಎಸ್. ಲಿಂಗೇಶ್, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಮುಂದಿನ 15 ದಿನದೊಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ತುಂಡು ಗುತ್ತಿಗೆಗೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದಲ್ಲಿ ಅವಕಾಶ ಇಲ್ಲದಿದ್ದಲ್ಲಿ ಎಲ್ಲಾ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ ₹ 5 ಲಕ್ಷದ ವರೆಗಿನ ಕಾಮಗಾರಿಗೆ ಶೀಘ್ರವೇ ಅನುಮೋದನೆ ದೊರಕಿಸಿಕೊಡುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಭೂ ಮಂಜೂರಾತಿ ವೇಳೆ ಹಲವು ವ್ಯತ್ಯಾಸಗಳಾಗಿವೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅಲ್ಲದೇ ಬಾಕಿ ಉಳಿದಿರುವ ಹಕ್ಕು ಪತ್ರ ವಿತರಣೆಯನ್ನು ತ್ವರಿತವಾಗಿ ಮುಕ್ತಾಯಗೊಳಿಸಬೇಕು. ಮುಜರಾಯಿ ದೇವಸ್ಥಾನಗಳ ದುರಸ್ತಿಗೆ ಅಗತ್ಯವಿರುವ ದಾಖಲೆಗಳನ್ನು ಕಂದಾಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಹಶೀಲ್ದಾರರು ತಕ್ಷಣ ನೀಡಬೇಕು ಎಂದು ಅವರು ಹೇಳಿದರು.

ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿಗೆ ₹ 280 ಕೋಟಿ ವೆಚ್ಚದ ಜಲಧಾರೆ ಯೋಜನೆ ಸಿದ್ಧವಾಗಿದೆ. ಅದೇ ರೀತಿ ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಯೋಜನೆಗಳನ್ನು ಶಾಸಕರೊಂದಿಗೆ ಚರ್ಚಿಸಿ ಕೂಡಲೇ ಸಲ್ಲಿಸಿದಲ್ಲಿ ಸರ್ಕಾರದಿಂದ ಅನುಮೋದನೆ ಹಾಗೂ ಅನುದಾನ ಒದಗಿಸಿ ಕೊಡುವುದಾಗಿ ಸಚಿವರು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಬರನಿರ್ವಹಣೆ ಯಶಸ್ವಿಯಾಗಿ ನಡೆಯಬೇಕು. ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಶು ಪಾಲನೆ, ಕೃಷಿ, ತೋಟಗಾರಿಕೆ, ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.‌

ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಈ ವರ್ಷ ಮಳೆಗಾಲ ನಿರೀಕ್ಷಿತ ಮಟ್ಟದಲ್ಲಿ ಕಾಣುತ್ತಿಲ್ಲ. ಈಗಲೇ ಮುಂಬರುವ ಗಂಭೀರ ಪರಿಸ್ಥಿತಿ ನಿಭಾಯಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತದ ಗಮನಕ್ಕೆ ತಂದರು.

ಅತಿವೃಷ್ಟಿ ಪರಿಹಾರ ಹಣದಲ್ಲಿ ಅರಕಲಗೂಡು, ಸಕಲೇಶಪುರ, ಆಲೂರು ಮತ್ತು ಹೊಳೆನರಸೀಪುರಗಳಲ್ಲಿ ಹಾನಿಗೀಡಗಿರುವ ವಿದ್ಯಾರ್ಥಿ ನಿಲಯ ದುರಸ್ತಿಪಡಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆ ಇಲಾಖೆಗಳ ಯೋಜನೆಗಳನ್ನು ಸಂಯೋಜಿಸಿ ಪ್ರತಿ ತಾಲ್ಲೂಕಿಗೆ ಕನಿಷ್ಠ 100 ಎಕರೆ ಮಾದರಿ ಬೇಸಾಯ ತಾಕುಗಳ ಅಭಿವೃದ್ಧಿ ಯೋಜನೆ ರೂಪಿಸಬೇಕು. 25 ಸಾವಿರ ತೆಂಗಿನ ಸಸಿ, 10 ಸಾವಿರ ಮಾವು, ಸಪೋಟ ಬೆಳೆಸಬೇಕು ಎಂದು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ಶಾಸಕರ ನಿಧಿ ಹಾಗೂ ಮುಜರಾಯಿ ಅನುದಾನದಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಭೂ ಸ್ವಾಧೀನ ಪರಿಹಾರ ಬಾಕಿ ₹ 242 ಕೋಟಿ ಇದೆ. ಸರ್ಕಾರಿ ವಕೀಲರು ಹಾಗೂ ಅಧಿಕಾರಿಗಳು ಶಾಮೀಲಾಗಿ ಅಧಿಕ ಪಟ್ಟು ಪರಿಹಾರ ಕೊಡಿಸಿದ್ದಾರೆ. ಇದರ ಬಗ್ಗೆ ವರದಿ ನೀಡುವಂತೆ ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಒಂದು ಸಾವಿರ ಎಕರೆಗೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ರೇವಣ್ಣ ವಿವರಿಸಿದರು.

ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರನ್ನು ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಬೇಕು. ಸೇವೆ ಸಲ್ಲಿಸಲು ಮುಂದೆ ಬಂದರೆ ಖಾಸಗಿ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು. ಅದೇ ರೀತಿ ಖಾಲಿ ಇರುವ 57 ನರ್ಸ್‌ಗಳ ಹುದ್ದೆಯನ್ನು ಶೀಘ್ರ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಸತೀಶ್‌ ಗೆ ಸೂಚನೆ ನೀಡಿದರು.

ಐಎಎಸ್‌ ಅಧಿಕಾರಿಯನ್ನು ತೋಟಗಾರಿಕೆ ಇಲಾಖೆ ಆಯುಕ್ತರನ್ನಾಗಿ ಮಾಡದಂತೆ ಸಿ.ಎಂ ಗೆ ಮನವಿ ಮಾಡಲಾಗಿದ್ದು, ಕೃಷಿ ಬಗ್ಗೆ ಅನುಭವ ಇರುವ ಅಧಿಕಾರಿಯನ್ನು ಆಯುಕ್ತರನ್ನಾಗಿ ನೇಮಿಸಬೇಕು. ಮುಂದಿನ ವಾರ ಕೃಷಿ ಅಧಿಕಾರಿಯೊಬ್ಬರನ್ನು ಇಸ್ರೇಲ್‌ಗೆ ಅಧ್ಯಯನ ಪ್ರವಾಸ ಕರೆದೊಯ್ಯಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎನ್. ವಿಜಯಪ್ರಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !