ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ಜಮೀನು ಮಂಜೂರಾತಿ ರದ್ದು: ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಕುಟುಂಬ

Published 14 ಆಗಸ್ಟ್ 2024, 13:45 IST
Last Updated 14 ಆಗಸ್ಟ್ 2024, 13:45 IST
ಅಕ್ಷರ ಗಾತ್ರ

ಹೆತ್ತೂರು: ಸರ್ಕಾರದಿಂದ ಬಗರ್ ಹುಕುಂ ಸಾಗುವಳಿಯಲ್ಲಿ ನೀಡಲಾಗಿದ್ದ ಜಮೀನು ಮಂಜೂರಾತಿಯನ್ನು ಉಪ ವಿಭಾಗಾಧಿಕಾರಿ ಕೋರ್ಟ್‌ ರದ್ದುಪಡಿಸಿದ್ದು, ಯಸಳೂರು ಹೋಬಳಿ ಗೌಡರಬೈಲು ಗ್ರಾಮದ ಕುಟುಂಬವೊಂದು ದಯಾಮರಣಕ್ಕೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದೆ.

ಈ ಕುರಿತು ಸಂತ್ರಸ್ತ ಜನಾರ್ಧನ್‌ ಆಚಾರ್ ಮಾತನಾಡಿ, ‘ಯಸಳೂರು ಹೋಬಳಿ ಗೌಡರಬೈಲು ಗ್ರಾಮದ ಸರ್ವೆ ನಂಬರ್‌ 1 ರಲ್ಲಿ ಅಕ್ರಮ - ಸಕ್ರಮದಡಿ 1.02 ಎಕರೆ ಜಮೀನು ಮಂಜೂರಾಗಿತ್ತು. ಈ ಜಮೀನಿಗೆ ಸಂಬಂಧಿಸಿದಂತೆ ಸಂತೋಷ್ ಎಂಬುವರು ದೂರು ನೀಡಿದ್ದರಿಂದ ಈ ವರ್ಷ ಜೂನ್‌ 13 ರಂದು ಉಪ ವಿಭಾಗಾಧಿಕಾರಿ ಕೋರ್ಟ್‌ನಲ್ಲಿ ಜಮೀನಿನ ಮಂಜೂರಾತಿ ರದ್ದಾಗಿದೆ’ ಎಂದು ವಿವರಿಸಿದರು.

‘ಜುಲೈ 25 ರಂದು ಕುರುಭತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮನೆಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದಾರೆ. 1.02 ಎಕರೆ ಜಮೀನು ಖಾಲಿ ಮಾಡುವಂತೆ ಯಸಳೂರು ಉಪ ತಹಶೀಲ್ದಾರ್ ಕಚೇರಿಯಿಂದಲೂ ನೋಟಿಸ್‌ ನೀಡಲಾಗಿದೆ’ ಎಂದರು.

‘ನಮಗೆ ಗೌಡರಬೈಲು ಗ್ರಾಮದ ಜಮೀನು ಹೊರತುಪಡಿಸಿ, ಬೇರೆಲ್ಲೂ ಜಮೀನಿಲ್ಲ. ಈ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದು, ಕೂಲಿ ಕೆಲಸ ಮಾಡಿಕೊಂಡು ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದೇನೆ. ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೂ, ದಬ್ಬಾಳಿಕೆಯಿಂದ ನಮ್ಮ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಬೇಸತ್ತು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆದಿದ್ದೇವೆ’ ಎಂದು ಹೇಳಿದರು.

Quote - ಜಾಗ ಮಂಜೂರಾದ ಸಮಯದಲ್ಲಿ ಅಂದಿನ ಅಧಿಕಾರಿಗಳು ಪಾಳು ಜಮೀನು ಎಂದು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಮೀನು ಮಂಜೂರಾತಿ ರದ್ದುಪಡಿಸಲಾಗಿದೆ. ಡಾ. ಎಂ.ಕೆ. ಶ್ರುತಿ ಸಕಲೇಶಪುರ ಉಪ ವಿಭಾಗಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT