ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಸಂಕಷ್ಟದಲ್ಲಿ ಬೆಣ್ಣೆ ವ್ಯಾಪಾರಿಗಳು

ಅರಕಲಗೂಡಿನಲ್ಲಿ ಬೆಣ್ಣೆ ಉತ್ಪಾದಕರ ಅಳಲು; ನಡೆಯದ ವಾರದ ಸಂತೆ
Last Updated 19 ಮೇ 2021, 4:27 IST
ಅಕ್ಷರ ಗಾತ್ರ

ಅರಕಲಗೂಡು: ಲಾಕ್‌ಡೌನ್ ಚಾಲ್ತಿಯಲ್ಲಿರುವುದರಿಂದ ತಾಲ್ಲೂಕಿನ ಬೆಣ್ಣೆ ಉತ್ಪಾದಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ತಾಲ್ಲೂಕಿನ ಕಸಬಾ, ಮಲ್ಲಿಪಟ್ಟಣ, ದೊಡ್ಡಮಗ್ಗೆ ಹೋಬಳಿಗಳ ಗ್ರಾಮೀಣ ಭಾಗದ ಹಲವು ರೈತರು ಹಾಲನ್ನು ಮಾರಾಟ ಮಾಡದೆ ಬೆಣ್ಣೆ ತಯಾರಿಸಿ ಮಾರಾಟ ಮಾಡುತ್ತಾರೆ. ಎಮ್ಮೆ ಮತ್ತು ನಾಟಿ ಹಸು ಸಾಕಣೆ ಮಾಡುವವರು ಹಾಲು ಮಾರಾಟಕ್ಕಿಂತ ಬೆಣ್ಣೆ ಉತ್ಪಾದನೆಯಲ್ಲಿ ಹೆಚ್ಚು ಆದಾಯ ಗಳಿಸುತ್ತಾರೆ.

ಬೆಣ್ಣೆ ಉತ್ಪಾದನೆ ಮಾಡುವುದರಿಂದ ಕುಟುಂಬದ ಸದಸ್ಯರಿಗೆ ಅಗತ್ಯವಾದಷ್ಟು ಪ್ರಮಾಣದಲ್ಲಿ ಹಾಲು, ಮೊಸರು, ಮಜ್ಜಿಗೆ ದೊರೆಯುತ್ತದೆ. ಮೊಸರನ್ನು ಕಡೆದು ಬೆಣ್ಣೆ ತೆಗೆದ ನಂತರ ಉಳಿಯುವ ಮಜ್ಜಿಗೆ ದನಕರುಗಳಿಗೆ ಉತ್ತಮವಾಗಿದೆ. ಹೀಗಾಗಿ ಬಹುತೇಕ ರೈತ ಕುಟುಂಬಗಳು, ಮಹಿಳೆಯರು ಬೆಣ್ಣೆ ಮಾರಾಟವನ್ನೇ ಕಸುಬಾಗಿಸಿಕೊಂಡಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿಯ ಹೊನ್ನವಳ್ಳಿ, ಚಿಕ್ಕಗಾವನಹಳ್ಳಿ, ನರಸಿನ ಕುಪ್ಪೆ, ದೊಡ್ಡಗಾವನಹಳ್ಳಿ, ಬೈಚನಹಳ್ಳಿ, ಹೆತ್ತಗೌಡನಹಳ್ಳಿ, ಗೊರವನಹಳ್ಳಿ, ನೆಲಮನೆ, ದೇವರಹಳ್ಳಿ ಭಾಗದ ಗ್ರಾಮಗಳಲ್ಲಿ ತಯಾರಾಗುವ ಬೆಣ್ಣೆ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿ ಯಾಗಿದ್ದು, ಬೇಡಿಕೆ ಹೊಂದಿದೆ. ಬೆಣ್ಣೆ ಉತ್ಪಾದಕರಿಗೆ ಪಟ್ಟಣದಲ್ಲಿ ಶುಕ್ರವಾರ ನಡೆಯುವ ವಾರದ ಸಂತೆ ಬಹುದೊಡ್ಡ ಮಾರುಕಟ್ಟೆಯಾಗಿದೆ.

ಪ್ರತಿವಾರ ಕನಿಷ್ಠ 100ಕ್ಕೂ ಹೆಚ್ಚು ರೈತರು ಇಲ್ಲಿ ಬೆಣ್ಣೆ ಮಾರಾಟ ಮಾಡುತ್ತಿದ್ದು, ಸುಮಾರು 500 ಸೇರಿಗಿಂತಲೂ (300 ಗ್ರಾಂ ಬೆಣ್ಣೆ ಒಂದು ಸೇರಿನ ಅಳತೆ) ಹೆಚ್ಚು ಮಾರಾಟವಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಸೇರು ಬೆಣ್ಣೆ ₹ 150 ರಿಂದ 180ರ ದರದಲ್ಲಿ ಮಾರಾಟವಾದರೆ ಬೇಸಿಗೆ, ಮದುವೆ, ಹಬ್ಬಗಳ ಸಮಯದಲ್ಲಿ ₹ 200 ರಿಂದ 230ಕ್ಕೆ ಖರೀದಿಯಾಗುತ್ತದೆ.

ಲಾಕ್‌ಡೌನ್ ಘೋಷಣೆಯಾಗಿರುವ ಕಾರಣ ಸಂತೆ ರದ್ದಾಗಿದೆ. ಹೀಗಾಗಿ ಹೊರ ಊರಿನ ವರ್ತಕರು ಬರುತ್ತಿಲ್ಲ, ಸ್ಥಳೀಯವಾಗಿಯೂ ಹೆಚ್ಚಿನ ಮಾರಾಟವಾಗುತ್ತಿಲ್ಲ. ಮದುವೆ ಶುಭ ಸಮಾರಂಭಗಳು ನಡೆಯದ ಕಾರಣ ಬೆಣ್ಣೆ ಕೊಳ್ಳುವವರಿಲ್ಲದ ಕಾರಣ ತೊಂದರೆಯಾಗಿದೆ. ಪಟ್ಟಣಕ್ಕೆ ಬಂದು ಮನೆ, ಮನೆ ತಿರುಗಿ ಮಾರಾಟ ಮಾಡಿದರೂ ಅತಿ ಕಡಿಮೆ ಬೆಲೆಗೆ ಗ್ರಾಹಕರು ಕೇಳುತ್ತಾರೆ. ವಾಹನ ಸಂಚಾರ ರದ್ದುಗೊಳಿಸಿರುವ ಕಾರಣ ಗ್ರಾಮೀಣ ಭಾಗದಿಂದ ನಡೆದುಕೊಂಡೇ ಬರಬೇಕಿದೆ ಹೀಗಾಗಿ ಬೆಣ್ಣೆ ಉತ್ಪಾದಕರಿಗೆ ಸಂಕಷ್ಟ ಎದುರಾಗಿದೆ ಎಂದು ಚಿಕ್ಕಗಾವನಹಳ್ಳಿಯ ರೈತಶಿವಣ್ಣ ಅಳಲು ತೋಡಿಕೊಳ್ಳುತ್ತಾರೆ.

ಕಷ್ಟಪಟ್ಟು ಜಾನುವಾರುಗಳ ಸಾಕಣೆ ನಡೆಸಿ ಬೆಣ್ಣೆ ತಯಾರಿಸಿ ಮಾರಾಟಕ್ಕೆ ತಂದರೆ ಕೇಳುವವರೇ ಇಲ್ಲವಾಗಿದೆ. ಬೆಣ್ಣೆ ಮಾರಾಟದಿಂದ ಬಂದ ಹಣದಿಂದ ಕುಟುಂಬದ ಅಗತ್ಯ ಹಾಗೂ ದನಗಳ ಸಾಕಣೆ ನಡೆಯಬೇಕು. ಲಾಕ್‌ಡೌನ್‌ನಿಂದ ಆರ್ಥಿಕ ತೊಂದರೆಗೆ ಒಳಗಾಗಿದ್ದೇವೆ ಎಂದು ‌ರೈತ ಮಹಿಳೆ ರಾಧಮ್ಮ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT