ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಅಪಘಾತ ಕೂಪವಾದ ಮಂಗಳೂರು– ಚೆನ್ನೈ ರಾಷ್ಟ್ರೀಯ ಹೆದ್ದಾರಿ, ಸಂಚಾರ ಕಷ್ಟಕರ

ಐದು ವರ್ಷಕ್ಕೆ ಕೇವಲ ಶೇ 35ರಷ್ಟು ಕಾಮಗಾರಿ ಪ್ರಗತಿ
Last Updated 27 ಮೇ 2022, 7:06 IST
ಅಕ್ಷರ ಗಾತ್ರ

ಹಾಸನ: ಮಂಗಳೂರು– ಚೆನ್ನೈ ಸಂಪರ್ಕಿಸುವ ರಸ್ತೆ ಮಾರ್ಗ ಉನ್ನತೀಕರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ ರಾಷ್ಟ್ರೀಯ ಹೆದ್ದಾರಿ 75ರ ಹಾಸನ– ಬಿ.ಸಿ.ರೋಡ್‌ ಚತುಷ್ಪಥ ಕಾಂಕ್ರೀಟ್‌ ರಸ್ತೆ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದ್ದು, ಗುಂಡಿ ಮತ್ತು ದೂಳಿನ ನಡುವೆ ಪ್ರಯಾಣಿಕರು ಪ್ರಯಾಸದಿಂದ ಪ್ರಯಾಣಿಸಬೇಕಾಗಿದೆ.

2018ರಲ್ಲಿ ಆರಂಭವಾಗಿರುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಶೇಕಡಾ 35ರಷ್ಟು ಪ್ರಗತಿಯಾಗಿದೆ. ಪ್ರಯಾಣಿಕರು ಅನುಭವಿಸುತ್ತಿರುವ ನರಕಯಾತನೆಗೆ ಮುಕ್ತಿ ಸಿಕ್ಕಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೆದ್ದಾರಿಯಲ್ಲಿ ಹೊಂಡಗಳು ಬಾಯ್ತೆರೆ ದಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ವಾಹನ ಹೊಂಡಕ್ಕೆ ಬೀಳುವುದು ಖಚಿತ.

ನಿತ್ಯ ಈ ಮಾರ್ಗದಲ್ಲಿ ಸರಕು ಸಾಗಣೆ, ಸಾರಿಗೆ ಬಸ್‌, ಲಾರಿ, ಟ್ಯಾಂಕರ್ ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕೆಲವೆಡೆ ಡಾಂಬರ್‌ ಕಿತ್ತು ಇಡೀ ರಸ್ತೆಯೇ ಗುಂಡಿ ಬಿದ್ದಿದೆ. ಬೈಕ್, ಕಾರು, ಟ್ಯಾಂಕರ್‌ಗಳು ಗುಂಡಿಗಳಲ್ಲಿ ಸಿಲುಕಿ ಪರದಾಡುವಂತಾಗಿದೆ. ಸವಾರರು ಕೈಯಲ್ಲಿ ಜೀವವನ್ನು ಹಿಡಿದು ಪ್ರಯಾಣಿಸಬೇಕಾಗಿದೆ.

ಹೆದ್ದಾರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಬಾಳ್ಳುಪೇಟೆಯಲ್ಲಿ ಸ್ಥಳೀಯರು, ನಾನಾ ಸಂಘಟನೆಗಳು ಅಹೋರಾತ್ರಿ ಧರಣಿ ನಡೆಸಿದವು. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತು ಹೆದ್ದಾರಿ ಅಧಿಕಾರಿಗಳು ಭರವಸೆ ನೀಡಿದರಾದರೂ ಅದರಂತೆ ನಡೆದುಕೊಳ್ಳಲಿಲ್ಲ.

ಯುಪಿಎ ಸರ್ಕಾರದ ಅವಧಿಯಲ್ಲಿ ಅಂದು ಕೇಂದ್ರ ಭೂ–ಸಾರಿಗೆ ಸಚಿವರಾ ಗಿದ್ದ ಆಸ್ಕರ್‌ ಫ‌ರ್ನಾಂಡೀಸ್‌ ಹಾಸನ-ಸಕಲೇಶಪುರ- ಬಿ.ಸಿ.ರೋಡ್‌ (ಮಂಗಳೂರು) ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದರು.

ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿಕೊಂಡ ಒಪ್ಪಂದ ದಂತೆ ರಸ್ತೆ ನಿರ್ಮಾಣದ ಅವಧಿ ಮುಗಿದಿದೆ. 2019ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ, ಐದು ವರ್ಷವಾದರೂ ಹಾಸನದ ದೇವರಾಯಪಟ್ಟಣದಿಂದ ಹೆಗ್ಗದ್ದೆವರೆಗಿನ ಕಾಮಗಾರಿ ಶೇ 35ರಷ್ಟು ಮಾತ್ರ ನಡೆದಿದೆ.

ಎರಡು, ಮೂರು ವರ್ಷಗಳಿಂದ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಿರುವ ಕಾರಣ ರಸ್ತೆ ಉದ್ದಕ್ಕೂ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದೆ. ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ಬಿದ್ದು ಮೃತಪಟ್ಟಿರುವ ಉದಾಹರಣೆ ಇದೆ. ಹಾಸನದಿಂದ ಸಕಲೇಶಪುರವರೆಗಿನ ರಸ್ತೆ ಸಾವಿನ ರಹದಾರಿಯಾಗಿ ಮಾರ್ಪಟ್ಟಿದೆ.

‘ಗುಂಡಿಮಯ ರಸ್ತೆಯಿಂದಾಗಿ ಟ್ರಾಫಿಕ್‌ ಜಾಮ್ ಉಂಟಾಗುತ್ತಿದೆ. ಪೆಟ್ರೋಲ್, ಡೀಸೆಲ್ ಹೆಚ್ಚು ವ್ಯಯವಾಗುತ್ತಿದೆ. ವಾಹನಗಳ ಟೈರು ಬಹು ಬೇಗನೆ ಹಾಳಾಗುತ್ತಿವೆ. ಬಿಡಿ ಭಾಗಗಳಿಗೆ ಧಕ್ಕೆಯಾಗುತ್ತಿದೆ. ಹೆಚ್ಚಿನ ಒತ್ತಡದಿಂದ ಬೆನ್ನು ನೋವಿಗೆ ತುತ್ತಾಗುತ್ತಿದ್ದಾರೆ. ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸುವುದು ಹರಸಾಹಸವೇ ಸರಿ. ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಈ ರಸ್ತೆಯಲ್ಲಿ ವಾಹನ ದಟ್ಟಣೆ ದುಪ್ಪಟ್ಟು ಇರುತ್ತದೆ. ಧರ್ಮಸ್ಥಳ ಸೇರಿದಂತೆ ಸಾಕಷ್ಟು ಧಾರ್ಮಿಕ ಸ್ಥಳಗಳಿಗೆ ಈ ರಸ್ತೆಯಲ್ಲಿ ಪ್ರಯಾಣಿಸುವವರು ಹೆಚ್ಚು’ ಎಂದು ಟ್ಯಾಂಕರ್ ಚಾಲಕ ರಮೇಶ್ ತಿಳಿಸಿದರು.

ಗುತ್ತಿಗೆ ಕಂಪನಿ ದಿವಾಳಿ
2016ರಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಹಾಸನ ಬೈಪಾಸ್‌ನಿಂದ ಸಕಲೇಶಪುರದ ಹೆಗ್ಗದ್ದೆವರೆಗಿನ 45 ಕಿ.ಮೀ. ರಸ್ತೆ ಕಾಮಗಾರಿ ಗುತ್ತಿಗೆಯನ್ನು ಬಹುರಾಷ್ಟ್ರೀಯ ಕಂಪನಿ ಐಸೋಲೆಕ್ಸ್‌ಗೆ ವಹಿಸಲಾಗಿತ್ತು. ಕಂಪನಿ ಕೆಲಸ ಪೂರ್ಣಗೊಳಿಸದೆ ದಿವಾಳಿಯಾಯಿತು. ಬಳಿಕ ₹ 573 ಕೋಟಿ ವೆಚ್ಚದ ಕಾಮಗಾರಿಯನ್ನು ರಾಜ್‌ಕಮಲ್‌ ಬಿಲ್ಡರ್ಸ್‌ ಪ್ರೈವೇಟ್‌ ಕಂಪನಿಗೆ ವಹಿಸಲಾಯಿತು. ಆದರೆ, ಕಂಪನಿಯು ಅನೇಕ ತಿಂಗಳು ನಾನಾ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಕಾಮಗಾರಿ ಆರಂಭಿಸಿದ್ದು, ಆಮೆ ವೇಗದಲ್ಲಿ ಸಾಗುತ್ತಿದೆ.

*
ರಾಜಕಮಲ್‌ ಕಂಪನಿಗೆ ಹೆದ್ದಾರಿ ಗುತ್ತಿಗೆ ಕಾಮಗಾರಿ ವಹಿಸಲಾಗಿದೆ. ಶೇ 35 ರಷ್ಟು ಪೂರ್ಣ ಗೊಂಡಿದ್ದು, ಮಾರ್ಚ್‌ ವೇಳೆಗೆ ಕಾಮ ಗಾರಿ ಪೂರ್ಣಗೊಳಿಸಲಾಗುವುದು
-ಎ.ಕೆ.ಜಾನ್‌ ಬಜ್ಹ್‌, ಯೋಜನಾ ನಿರ್ದೇಶಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನ ವಿಭಾಗ

*
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಭೂ–ಸಾರಿಗೆ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲಾಗುವುದು.
-ಎಚ್‌.ಕೆ. ಕುಮಾರಸ್ವಾಮಿ, ಶಾಸಕ, ಸಕಲೇಶಪುರ ವಿಧಾನಸಭಾ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT