ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನರಾಯಪಟ್ಟಣ: ನೊಂದವರ ನೆಲೆ ‘ಮಾತೃಭೂಮಿ’

ಚನ್ನರಾಯಪಟ್ಟಣ ವೃದ್ಧಾಶ್ರಮದಲ್ಲಿ 60, ಕೆ.ಆರ್‌.ಪೇಟೆಯಲ್ಲಿ 75 ಜನರಿಗೆ ಆಶ್ರಯ
ಸಿದ್ದರಾಜು
Published 8 ಜುಲೈ 2024, 6:08 IST
Last Updated 8 ಜುಲೈ 2024, 6:08 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದ ಹೊರವಲಯದಲ್ಲಿರುವ ‘ಮಾತೃಭೂಮಿ’ ವೃದ್ಧಾಶ್ರಮದಲ್ಲಿ  60 ಜನರಿಗೆ  ಆಶ್ರಯ ನೀಡಲಾಗಿದೆ. 

2009ರಲ್ಲಿ ಬರಾಳು ಗ್ರಾಮದ ಬಳಿ ವೃದ್ಧಾಶ್ರಮ ಆರಂಭಿಸಲಾಯಿತು. ಕೆಲವರ್ಷಗಳ ನಂತರ ಅದನ್ನು ಪಟ್ಟಣದ ಮೈಸೂರು ರಸ್ತೆಯ ಪಕ್ಕದಲ್ಲಿರುವ ಜಾಗಕ್ಕೆ ಸ್ಥಳಾಂತರಿಸಿದ್ದು, 60 ಮಂದಿಗೆ ಆಶ್ರಯ ಕಲ್ಪಿಸಲಾಗಿದೆ. 

ಮಾತೃಭೂಮಿ ವೃದ್ಧಾಶ್ರಮದ ಸಂಸ್ಥಾಪನಾ ಅಧ್ಯಕ್ಷೆ ವಿಜಯಾ, ಕಾರ್ಯದರ್ಶಿ ಪುತ್ರ ವಿಕ್ರಂ, ಸೊಸೆ ಸುಮಾ, ನೊಂದವರ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ 15 ವರ್ಷಗಳಿಂದ ಹಿರಿಯ ಜೀವಗಳಿಗೆ ಮತ್ತು ನಿರ್ಗತಿಕರಿಗೆ ನಿಸ್ವಾರ್ಥ ಸೇವೆ ಮಾಡುತ್ತಿರುವ ಹೆಗ್ಗಳಿಕೆ ಇವರದ್ದು.

ಮಕ್ಕಳುಪೋಷಕರನ್ನು ದೂರ ಮಾಡಿದರೆ, ವಯೋವೃದ್ಧರು ಮತ್ತು ನೊಂದವರಿಗೆ ದಿಕ್ಕು ತೋಚದಂತಾಗುತ್ತದೆ. ಅಂಥವರಿಗೆ ಆಶ್ರಯ ನೀಡುವ ತಾಣ ಇದಾಗಿದೆ. ಬೀದಿಯಲ್ಲಿ ಸುತ್ತುವ ನಿರ್ಗತಿಕರು, ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರುವ ಅನಾಥರನ್ನು ವೃದ್ದಾಶ್ರಮಕ್ಕೆ ಕರೆತಂದು ಆಸರೆ ನೀಡಲಾಗುತ್ತಿದೆ. ತಿಂಡಿ, ಊಟ, ಬಟ್ಟೆ ಇನ್ನಿತರೆ ಸೌಲಭ್ಯ ನೀಡುತ್ತಿದ್ದಾರೆ. ನಿರ್ಗತಿಕರ ಬಟ್ಟೆ ತೊಳೆಯುವುದು, ಅವರಿಗೆ ಸ್ನಾನ ಮಾಡಿಸುವುದು. ನಿತ್ರಾಣಗೊಂಡಿರುವರಿಗೆ ನಿತ್ಯ ಕರ್ಮ ಮಾಡಿ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.

ವಿಜಯಾ ಅವರ ಪತಿ ನಾಗಣ್ಣ, ಚನ್ನರಾಯಪಟ್ಟಣದಲ್ಲಿ  ಸರ್ಕಾರಿ ಉದ್ಯೋಗದಲ್ಲಿದ್ದಾರೆ. ರಜೆ ದಿನಗಳಲ್ಲಿ ಆಶ್ರಮಕ್ಕೆ ತೆರಳಿ ಕುಟುಂಬದ ಸದಸ್ಯರೊಂದಿಗೆ ನೊಂದವರ ಸೇವೆ ಮಾಡಲು ಕೈ ಜೋಡಿಸುತ್ತಾರೆ. ನಾಲ್ಕು ವರ್ಷದಿಂದ ಕೆ.ಆರ್. ಪೇಟೆಯಲ್ಲಿ ಮತ್ತೊಂದು ವೃದ್ಧಾಶ್ರಮ ತೆರೆಯಲಾಗಿದ್ದು, 75 ಮಂದಿ ಇದ್ದಾರೆ.

ಸರ್ಕಾರದಿಂದ ಆರ್ಥಿಕ ನೆರವು, ಅನುದಾನ ಲಭ್ಯವಿಲ್ಲದಿದ್ದರೂ, ದಾನಿಗಳು, ಸಂಘ, ಸಂಸ್ಥೆಗಳ ನೆರವಿನೊಂದಿಗೆ ನಿರ್ವಹಣೆ ಮಾಡಲಾಗುತ್ತಿದೆ. ಜನ್ಮದಿನ, ವಿವಾಹ ವಾರ್ಷಿಕೋತ್ಸವ, ವರ್ಷದ ತಿಥಿ ಸೇರಿ ಇನ್ನಿತರೆ ಕಾರ್ಯಕ್ರಮದ ಸಂದರ್ಭದಲ್ಲಿ ಜನರು ಆಶ್ರಮಕ್ಕೆ ಬಂದು ಊಟ ನೀಡುತ್ತಾರೆ. ಕೆಲವರು ದವಸ, ಧಾನ್ಯ  ನೀಡುತ್ತಾರೆ. ಮತ್ತೆ ಕೆಲವರು ಆಶ್ರಮಕ್ಕೆ ಚಾಪೆ, ಹೊದಿಕೆ, ಸೊಳ್ಳೆ ಪರದೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

‘ತಿಂಡಿ, ಊಟಕ್ಕೆ ಸಮಸ್ಯೆ ಇಲ್ಲ. ಆದರೆ ಎರಡೂ ಆಶ್ರಮಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.  ಪ್ರತಿ ತಿಂಗಳು ಬಾಡಿಗೆ ಮತ್ತು ವಿದ್ಯುತ್ ಬಿಲ್ ಪಾವತಿಸಲು ₹50 ಸಾವಿರ ಬೇಕಾಗುತ್ತದೆ. ಪುತ್ರ ವಿಕ್ರಂ ಸ್ಟುಡಿಯೊ ನಡೆಸುತ್ತಿದ್ದಾರೆ. ಅದರಲ್ಲಿ ಬರುವ ಆದಾಯ ಮತ್ತು ನೌಕರಿಯಲ್ಲಿರುವ ನಾಗಣ್ಣ ಅವರ ವೇತನದಲ್ಲಿ  ಬಾಡಿಗೆಯನ್ನು ಸರಿದೂಗಿಸಿಕೊಂಡು ಹೋಗಲಾಗುತ್ತಿದೆ. ಹಾಸನ, ಮಂಡ್ಯ, ತುಮಕೂರು, ಕೊಡಗು, ಶಿವಮೊಗ್ಗ, ಹುಬ್ಬಳ್ಳಿ, ಚಾಮರಾಜನಗರ ಸೇರಿ ನೆರೆರಾಜ್ಯಗಳಾದ ತಮಿಳುನಾಡು, ಉತ್ತರಪ್ರದೇಶ, ಆಂಧ್ರಪ್ರದೇಶದ ಜನತೆ ವೃದ್ದಾಶ್ರಮದಲ್ಲಿದ್ದಾರೆ ಎನ್ನುತ್ತಾರೆ ವಿಜಯಾ.

ಕುಟುಂಬದಲ್ಲಿ  ಹೊಂದಾಣಿಕೆಯ ಕೊರತೆ, ಮಕ್ಕಳಿಲ್ಲದವರು ಹೆಚ್ಚು ಮಂದಿ ಇದ್ದಾರೆ. ಅನಾಥರು ನಿಧನರಾದಾಗ ಅವರ ಅಂತ್ಯಕ್ರಿಯೆ ನೆರವೇರಿಸಿ ತಿಥಿ ಕಾರ್ಯವನ್ನು ಮಾಡುತ್ತಾರೆ. ಆಶ್ರಮದಲ್ಲಿರುವ ಆನಾರೋಗ್ಯಕ್ಕೀಡಾದರೆ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಾರೆ. ಮಕ್ಕಳು ಹೆತ್ತವರನ್ನು ಕಡೆಗಣಿಸುತ್ತಿರುವ  ‌ಸಂದರ್ಭದಲ್ಲಿ, ಅಂಥವರನ್ನು ಸಾಕಿ, ಆರೈಕೆ ಮಾಡುತ್ತಿರುವ ವಿಜಯಾ ಅವರ ಕುಟುಂಬದ ಕೆಲಸಕ್ಕೆ ವೃದ್ಧಾಶ್ರಮದ ಹಿರಿಯ ಜೀವಿಗಳಲ್ಲಿ ಧನ್ಯತಾಭಾವ ಇದೆ.

ವಿಜಯಾ ಅವರ ಕಾರ್ಯವನ್ನು ಮೆಚ್ಚಿ ವಿವಿಧ ಸಂಘ, ಸಂಸ್ಥೆಗಳು ಸನ್ಮಾನಿಸಿವೆ. 

ಚನ್ನರಾಯಪಟ್ಟಣದಲ್ಲಿ ವೃದ್ದಾಶ್ರಮಕ್ಕೆ ಹೊಂದಿಕೊಂಡಂತೆ ಗೋಶಾಲೆ ಇದೆ. 12 ಹಸುಗಳಿವೆ. ಆಶ್ರಮದಲ್ಲಿ ದೈಹಿಕವಾಗಿ ಗಟ್ಟಿಮುಟ್ಟಾಗಿರುವರು ಹಸುಗಳನ್ನು ಮೇಯಿಸುತ್ತಾರೆ.

ಉಚಿತ ಆಂಬುಲೆನ್ಸ್ ಸೇವೆ

ಚನ್ನರಾಯಪಟ್ಟಣ ಮತ್ತು ಕೆ.ಆರ್. ಪೇಟೆ ವೃದ್ಧಾಶ್ರಮದಲ್ಲಿ ಎರಡು ಆಂಬುಲೆನ್ಸ್ ಸೇವೆ ಇದೆ. ಬೆಂಗಳೂರಿನ ಸಿಎನ್‍ಸಿ ಟೂಲ್ಸ್ ಸರ್ವಿಸ್ ಹಾಗೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಲಕ್ಷ್ಮಿ ಎಂಬವರು ಈ ಆಂಬುಲೆನ್ಸ್ ಗಳನ್ನು ಒದಗಿಸಿದ್ದಾರೆ. ಅನಾರೋಗ್ಯಕ್ಕೀಡಾದವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮತ್ತು  ಅನಾಥ ಶವವನ್ನು ಸಾಗಿಸಲು ಈ ಆಂಬುಲೆನ್ಸ್‌ಗಳನ್ನು ಉಪಯೋಗಿಸಲಾಗುತ್ತಿದೆ. ಸಂಕಷದಲ್ಲಿರುವರು ಉಚಿತವಾಗಿ ಇದರ ಸೌಲಭ್ಯ  ಪಡೆದುಕೊಳ್ಳಬಹುದು.  ದೂರವಾಣಿ ಸಂಖ್ಯೆ 8277003888 ರಲ್ಲಿ ಸಂಪರ್ಕಿಸಬಹುದು. ಕೋವಿಡ್ ಸಂದರ್ಭದಲ್ಲಿ ಪಟ್ಟಣದಲ್ಲಿ ನಿರ್ಗತಿಕರು ಇರುವ ಕಡೆಗೆ ವೃದ್ಧಾಶ್ರಮದ ಉದ್ತುವಾರಿಗಳು ವಾಹನದಲ್ಲಿ ತೆರಳಿ ಪ್ರತಿದಿನ ಆಹಾರ ವ್ಯವಸ್ಥೆ ಕಲ್ಪಿಸಿ ಉದಾರತೆ ಮೆರೆದಿದ್ದರು.

ಅನುದಾನ ಮತ್ತು ನಿವೇಶನ ನೀಡುವಂತೆ ಅಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಅನುದಾನ ಮತ್ತು 2 ಎಕರೆ ಜಾಗ ದೊರೆತರೆ ಸ್ವಂತ ವೃದ್ದಾಶ್ರಮ ನಿರ್ಮಿಸಲು ಸಹಕಾರಿಯಾಗಲಿದೆ.
ವಿಕ್ರಂ, ವೃದ್ಧಾಶ್ರಮದ ಕಾರ್ಯದರ್ಶಿ
ನೊಂದವರ ಆರೈಕೆಯಲ್ಲಿ ತೊಡಗಿರುವ ವಿಜಯಾ
ನೊಂದವರ ಆರೈಕೆಯಲ್ಲಿ ತೊಡಗಿರುವ ವಿಜಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT