ಹಾಸನ: 2021-22ನೇ ಸಾಲಿನಲ್ಲಿ ಕಾವೇರಿ ನೀರಾವರಿ ನಿಗಮದ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಅನುದಾನ ದುರ್ಬಳಕೆಯಾಗಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದುಶಾಸಕ ಎಚ್.ಡಿ.ರೇವಣ್ಣ ಅವರು ಸರ್ಕಾರವನ್ನು ಆಗ್ರಹಿಸಿದರು.
ಕ್ಷೇತ್ರವಾರು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ನೀರಾವರಿ ಅಚ್ಚುಕಟ್ಟುಪ್ರದೇಶಕ್ಕೆ ಮಾತ್ರ ಅನುದಾನ ಬಳಸಬೇಕು. ಆದರೆ ಕಾನೂನು ಉಲ್ಲಂಘಿಸಿ ಬೇಕಾಬಿಟ್ಟಿ ಹಣಖರ್ಚು ಮಾಡಲಾಗಿದೆ. ಕಾವೇರಿ ನೀರಾವರಿ ನಿಗಮವನ್ನು ಜನರ ತೆರಿಗೆ ಹಣದಲ್ಲಿಸ್ಥಾಪಿಸಲಾಗಿದೆ. ಬಿಜೆಪಿಗೆ ಸೇರಿದ್ದಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶವ್ಯಕ್ತಪಡಿಸಿದರು.
ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಸಿ.ಟಿ. ರವಿ ಕ್ಷೇತ್ರಗಳಿಗೆ ತಲಾ ₹8 ಕೋಟಿ ನೀಡಲಾಗಿದೆ. ಜೆಡಿಎಸ್ ಶಾಸಕರಿರುವ ಶ್ರವಣಬೆಳಗೊಳ, ಅರಸೀಕೆರೆ, ಸಕಲೇಶಪುರ, ಹೊಳೆನರಸೀಪುರ, ಬೇಲೂರು ಕ್ಷೇತ್ರಗಳಿಗೆ ತಲಾ ₹3.50ಕೋಟಿ ನೀಡಲಾಗಿದೆ. ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಕ್ಷೇತ್ರಕ್ಕೆ ₹3.50 ಕೋಟಿ ಹಾಗೂಸಂಸದೆ ಸುಮಲತಾ ಅಂಬರೀಷ್ ಕ್ಷೇತ್ರಕ್ಕೆ ₹2.50 ಕೋಟಿ ನೀಡಿದರೆ, ಬಿಜೆಪಿ ಸಂಸದೆಶೋಭಾ ಕರಂದ್ಲಾಜೆ ಕ್ಷೇತ್ರಕ್ಕೆ ₹8 ಕೋಟಿ ಅನುದಾನ ನೀಡಲಾಗಿದೆ ಎಂದುಆರೋಪಿಸಿದರು.
ನೀರಾವರಿ ಯೋಜನೆಗಳಲ್ಲಿ ಲೂಟಿ ನಡೆಯುತ್ತಿದೆ. ಹೇಳುವವರು ಕೇಳುವವರು ಯಾರೂ ಇಲ್ಲ. ಸಕಲೇಶಪುರ ಮೀಸಲು ಕ್ಷೇತ್ರಕ್ಕೆ ನೀಡಬೇಕಾದ ಅನುದಾನವನ್ನು ಬಿಜೆಪಿ ಶಾಸಕರ ಕ್ಷೇತ್ರಕ್ಕೆವರ್ಗಾಯಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಮಾನ ನಿಲ್ದಾಣ ಸಂಬಂಧಪಟ್ಟಂತೆ 2008 ರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಾಸನಕ್ಕೆ ಏನೇನು ಅನ್ಯಾಯ ಮಾಡಿದ್ದಾರೆ ಎಂಬ ದಾಖಲೆಗಳನ್ನು ಜುಲೈ 19ರಂದು ಬಿಡುಗಡೆ ಮಾಡಲಾಗುವುದು. ವಿಮಾನ ನಿಲ್ದಾಣಕ್ಕೆ 448 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಭೂ ಪರಿಹಾರ ₹ 38 ಕೋಟಿ ತಡೆಹಿಡಿಯಲಾಗಿದೆ. ನೂರಾರು ಪತ್ರ ಬರೆದರೂ ಹಣ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೂಲ ಯೋಜನೆಯನ್ವಯವೇ ಹಾಸನ ವಿಮಾನ ನಿಲ್ದಾಣ ಯೋಜನೆ ಅನುಷ್ಠಾನಗೊಳಿಸಬೇಕು ಎನ್ನುವ ಬೇಡಿಕೆಗೆ ರಾಜ್ಯ ಸರ್ಕಾರ ಜುಲೈ 20ರೊಳಗೆ ಸಕಾರಾತ್ಮಕವಾಗಿ ನಿರ್ಧಾರಕೈಗೊಳ್ಳದಿದ್ದರೆ ಮುಂದಿನ ಹೋರಾಟ ಬಗ್ಗೆ ಜಿಲ್ಲೆಯ ಶಾಸಕರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಯೋಜನೆಗೆ ತಜ್ಞರ ಸಮಿತಿ ತೀರ್ಮಾನವೇ ಅಂತಿಮ ಎಂಬ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, "ವಿಮಾನದಲ್ಲಿ ರೇವಣ್ಣ, ಕುಮಾರಸ್ವಾಮಿ ಓಡಾಡುವುದಿಲ್ಲ. ವಿಮಾನ ನಿಲ್ದಾಣ ನಿರ್ಮಿಸುವುದರಿಂದ ಸ್ಥಳೀಯ ಬೆಳೆಗಳಾದ ಆಲೂಗಡ್ಡೆ, ಕಾಫಿ, ಜೋಳ, ತೆಂಗು ವಿದೇಶಕ್ಕೆ ರಪ್ತು ಮಾಡಲು ಸಹಕಾರಿಯಾಗುತ್ತದೆ. ಎಂಟು ವರ್ಷ ಸಚಿವನಾಗಿದ್ದವನಿಗೆ ಕ್ಯಾಬಿನೆಟ್ ಸಭೆ ಎಂದರೇನು ಎಂಬುದು ಗೊತ್ತಿದೆ. ಹಿಂದೆ ತಾಂತ್ರಿಕ ಸಮಿತಿ ನೀಡಿದ ವರದಿ ಪ್ರಕಾರವೇ ಯೋಜನೆ ರೂಪಿಸಲಾಗಿದೆ. ಅವರಷ್ಟು (ಪ್ರೀತಂ ಗೌಡ) ಟೆಕ್ನಿಕಲ್ ಸೌಂಡ್ ಅಲ್ಲ' ಎಂದು ತಿರುಗೇಟು ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.