ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಸುಳ್ಳು ಆರೋಪ ಸಹಿಸಲ್ಲ: ಶಿವಲಿಂಗೇಗೌಡ

Last Updated 19 ಸೆಪ್ಟೆಂಬರ್ 2020, 2:31 IST
ಅಕ್ಷರ ಗಾತ್ರ

ಅರಸೀಕೆರೆ: ‘ಅರಸೀಕೆರೆ ನಗರವನ್ನು ಮಾದರಿ ನಗರವನ್ನಾಗಿಸಲು ಶ್ರಮಿಸಿದ್ದೇನೆ. ನಗರಸಭೆ ಹಾಳು ಬಿದ್ದಿದೆ ಎಂದು ಸ್ಥಳೀಯ ಹಾಗೂ ಆಮದು ಬಿಜೆಪಿಯವರ ಆರೋಪ ಸುಳ್ಳು. ಇದನ್ನು ಸಹಿಸುವುದಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಕಣ್ಣೀರು, ರಕ್ತ ಬಸಿದಿದ್ದೇನೆ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಗರಸಭೆಗೆ ಚುನಾವಣೆ ನಡೆದು 2 ವರ್ಷ ಕಳೆದಿವೆ. ಆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಬಿಡುಗಡೆಗೆ ಸಂಬಂಧಿಸಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಬಿಜೆಪಿಯಯವರು ಸಲ್ಲದ ಆರೋಪ ಮಾಡುವ ಬದಲು ಈ ಬಗ್ಗೆ ಅವರದೇ ಸರ್ಕಾರವನ್ನು ಏಕೆ ಒತ್ತಾಯಿಸುತ್ತಿಲ್ಲ? ನ್ಯಾಯಾಲಯದಲ್ಲಿರುವ ಪ್ರಕರಣದ ಇತ್ಯರ್ಥಕ್ಕೆ ಪ್ರಯತ್ನಿಸದೆ ಇರುವುದು ಸರ್ಕಾರದ ವೈಫಲ್ಯ’ ಎಂದು ದೂರಿದರು.

ಪ್ರಸ್ತುತ ಅರಸೀಕೆರೆ ನಗರದ ಯುಜಿಡಿ ಕಾಮಗಾರಿಗೆ ₹ 3 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ನಗರಸಭೆಯಲ್ಲಿದ್ದ ಸಕ್ಕಿಂಗ್‌ ಯಂತ್ರ ದುರಸ್ತಿಗೊಂಡು ಶೀಘ್ರದಲ್ಲೇ ಸೇವೆಗೆ ಲಭ್ಯವಾಗಲಿದೆ. 15ನೇ ಹಣಕಾಸು ಯೋಜನೆಯಡಿ 4 ಟ್ರಾಕ್ಟರ್, 8 ಕಸ ವಿಲೇವಾರಿ ಆಟೊ ಖರೀದಿಸಲಾಗಿದೆ. ನಗರದಲ್ಲಿ ಯುಜಿಡಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿದೆ. ನಗರಸಭೆಯ 80 ಪೌರಕಾರ್ಮಿಕರ ಜತೆಗೆ ಹೆಚ್ಚುವರಿಯಾಗಿ 50 ಪೌರಕಾರ್ಮಿಕರನ್ನು ಮಂಜೂರು ಮಾಡಿಸಲಾಗಿದೆ. ನಗರಸಭೆ ಸದಸ್ಯರು ಅವರವರ ವಾರ್ಡ್‌ಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಅನುದಾನವನ್ನೂ ಪೂರ್ಣವಾಗಿ ವಿನಿಯೋಗಿಸಬೇಕು. ಸ್ವಚ್ಛತೆ ಕಾರ್ಯ ಸಮರ್ಪಕವಾಗ ಇರಬೇಕು ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿಯವರು ನಗರದ ಎಲ್ಲೆಡೆ ಜೆಸಿಬಿ ಯಂತ್ರದ ಮೂಲಕ ಮನಸೋ ಇಚ್ಛೆ ಗಿಡ ಗಂಟಿ ತೆರವುಗೊಳಿಸಿದ್ದಾರೆ. ಅಲ್ಲಲ್ಲೇ ಮಣ್ಣಿನ ರಾಶಿ ಹಾಕಿದ್ದಾರೆ. ಈ ಮಣ್ಣು ಚರಂಡಿಗೆ ಕೊಚ್ಚಿ ಹೋಗಿ ತೊಂದರೆ ಆದರೆ ಯಾರು ಹೊಣೆ ಎಂದ ಅವರು, ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆಯ ರೀತಿಯೇ ಎಂದು ಪ್ರಶ್ನಿಸಿದರು.

‘ಮಂತ್ರಿಗಳ ಮನೆ ಬಾಗಿಲಲ್ಲಿ ಕಾದು, ಕಾಡಿ ಬೇಡಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈ ನಿಟ್ಟಿನಲ್ಲಿ ರಕ್ತ, ಕಣ್ಣೀರು ಬಸಿದಿದ್ದೇನೆ. ನಿನ್ನೆ ಮೊನ್ನೆ ಎಲ್ಲಿಂದಲೋ ಬಂದವರು ನನ್ನ ಬಗ್ಗೆ ಹಾಗೂ ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಸಹಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಸದಸ್ಯ ಜಿ.ಟಿ.ಗಣೇಶ್, ಜೆಡಿಎಸ್ ಮುಖಂಡರಾದ ಧರ್ಮಶೇಖರ್, ಸಿಖಂದರ್ ಪಾಷಾ, ಸುಬ್ರಹ್ಮಣ್ಯ ಬಾಬು, ನಗರಸಭೆ ಸದಸ್ಯರಾದ ಚಂದ್ರಶೇಖರ್, ಹರ್ಷವರ್ಧನ್, ಪುಟ್ಟಸ್ವಾಮಿ, ದಾಸ್, ಈಶ್ವರ್, ಮನೋಹರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT