ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಲೆನಾಡಿನಲ್ಲಿ ಸಿಗದ ಮೊಬೈಲ್ ನೆಟ್‍ವರ್ಕ್: ಜನರಿಗೆ ಸಂಕಷ್ಟ  

ಸಂತೋಷ್‌ ಸಿ.ಬಿ.
Published 1 ಜುಲೈ 2024, 7:30 IST
Last Updated 1 ಜುಲೈ 2024, 7:30 IST
ಅಕ್ಷರ ಗಾತ್ರ

ಹಾಸನ: ಜಗತ್ತು ಡಿಜಿಟಲ್ ಯುಗದತ್ತ ಅತೀವೇಗವಾಗಿ ಸಾಗುತ್ತಿದೆ. 4 ಜಿ ನಂತರ ಈಗ 5 ಜಿ ಅಂತರ್ಜಾಲ ಪರಿಚಯವಾಗಿದೆ. ಇಂತಹ ಅತ್ಯಾಧುನಿಕ ಕಾಲದಲ್ಲೂ ಜಿಲ್ಲೆಯ ಮಲೆನಾಡು ಭಾಗದ ಜನರು ಮೊಬೈಲ್‌ನಲ್ಲಿ ಮಾತನಾಡಲು ಮರ, ಗುಡ್ಡ, ಎತ್ತರದ ಪ್ರದೇಶವನ್ನು ಅವಲಂಬಿಸಿದ್ದಾರೆ ಇಲ್ಲಿ ಸಾಮಾನ್ಯ ಮೊಬೈಲ್ ನೆಟ್‍ವರ್ಕ್ ಸೇವೆ ಯೂ ಇಲ್ಲದಂತಾಗಿದೆ ಎನ್ನುವ ದೂರು ಗ್ರಾಮಗಳ ಜನರದ್ದಾಗಿದೆ.

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಗರವಳ್ಳಿ, ಆಳುವಳ್ಳಿ ಸೇರಿದಂತೆ ಸುತ್ತಲಿನ ಹಳ್ಳಿಯ ಜನರಿಗೆ ಆನ್‍ಲೈನ್‍ನಲ್ಲಿ ನಡೆಯುವ ಎಲ್ಲ ಸೇವೆಗಳು ಮರೀಚಿಕೆಯಾಗಿವೆ. ವಿದ್ಯಾರ್ಥಿಗಳು, ಸಾರ್ವಜನಿಕರು, ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿಗೆ ಸೇರಿದಂತೆ ಈ ಭಾಗದ ಬಹುತೇಕ ಜನರಿಗೆ ಮೊಬೈಲ್ ನೆಟ್‍ವರ್ಕ್ ಇಲ್ಲದೇ ತುರ್ತು ಸಂಧರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಕಡಗರವಳ್ಳಿ, ಆಳುವಳ್ಳಿ, ಹೊಸಗದ್ದೆ, ಅರ್ಧಮಾರನಹಳ್ಳಿ, ಕರೆನರಿ, ಸೇರಿದಂತೆ ಸಮೀಪದ ಐದಾರು ಗ್ರಾಮಗಳಲ್ಲಿ 300 ಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಈ ಊರುಗಳಲ್ಲಿ ವಿದ್ಯಾರ್ಥಿಗಳು, ವ್ಯಾಪಾರಸ್ಥರು ಅಧಿಕ ಸಂಖ್ಯೆಯಲ್ಲಿದ್ದಾರೆ. ಗುಡ್ಡಗಾಡು ಪ್ರದೇಶಗಳಿಂದ ಸುತ್ತುವರಿದ ಕಾರಣ, ಈ ಗ್ರಾಮಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಉಂಟಾಗಿದ್ದು, ಈ ಭಾಗದ ಜನರು ನರಕಯಾತನೆ ಅನುಭವಿಸುವಂತಾಗಿದೆ.

ತಪ್ಪದ ಸಮಸ್ಯೆ: ಗ್ರಾಮದಲ್ಲಿ ಸುಂದರವಾದ ಪ್ರವಾಸಿ ತಾಣಗಳೂ ಇದ್ದು, ಬೇರೆ ರಾಜ್ಯ, ಜಿಲ್ಲೆ, ತಾಲ್ಲೂಕಿನಿಂದ ಪ್ರವಾಸಿಗಳು ಇಲ್ಲಿಗೆ ಬರುತ್ತಾರೆ. ಇಲ್ಲಿನ ರಮಣೀಯ ಪ್ರದೇಶ, ಚಾರಣ ಸ್ಥಳವನ್ನು ನೋಡಿ ಮನ ಮೆಚ್ಚಿದ್ದಾರೆ. ಆದರೆ ಇಲ್ಲಿ ನೆಟ್ ವರ್ಕ್ ಇಲ್ಲದೇ ಇರುವುದೇ ದೊಡ್ಡ ಸಮಸ್ಯೆಯಾಗಿದೆ.

ಲೋಕೇಶನ್ ನೋಡಿಕೊಳ್ಳಲು, ಕೆಲ ಅಂಗಡಿಗಳಲ್ಲಿ ಆನ್‍ಲೈನ್ ಪಾವತಿ ಮಾಡಲು ಹಾಗೂ ದೂರದ ಊರಿಂದ ಬಂದವರು ಸ್ನೇಹಿತರಿಗೆ, ಸಂಬಂಧಿಕರಿಗೆ ವಿಚಾರಗಳ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ‘ಇದ್ಯಾವ ಊರಪ್ಪ ನೆಟ್‍ವರ್ಕ್ ಇಲ್ಲದ ಕಾಡೂರು’ ಎಂದು ಹಿಡಿಶಾಪ ಹಾಕುತ್ತಿದ್ದಾರೆ ಎಂದು ಗ್ರಾಮಗಳ ಜನರು ಹೇಳುತ್ತಿದ್ದಾರೆ.

ತುರ್ತು ಸಂದರ್ಭದಲ್ಲಿ ಸಿಗದ ನೆಟ್‍ವರ್ಕ್: ಈ ವ್ಯಾಪ್ತಿಯಲ್ಲಿ ಬಹುತೇಕ ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿ ಕಾಡುಪ್ರಾಣಿಗಳ ದಾಳಿ, ಗುಡ್ಡ ಕುಸಿತ, ಅತಿ ಹೆಚ್ಚು ಮಳೆಯಿಂದ ಮನೆ ಕುಸಿತ ಹೀಗೆ ನಾನಾ ಸಮಸ್ಯೆಗಳಿವೆ.

ಇಂತಹ ಸ್ಥಿತಿ ಇದ್ದರೂ ಜನರು ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ ಏನಾದರೂ ಅವಘಡಗಳು ಸಂಭವಿಸಿದರೆ, ಅಥವಾ ಆರೋಗ್ಯದಲ್ಲಿ ಏರುಪೇರು ಕಂಡರೆ, ಗರ್ಭಿಣಿಯರನ್ನು, ರೋಗಿಗಳನ್ನು ತುರ್ತು ಸಂಧರ್ಭದಲ್ಲಿ ಆಸ್ಪತ್ರೆಗೆ ರವಾನಿಸಬೇಕು ಎಂದು ಆಂಬುಲೆನ್ಸ್‌ಗೆ ಕರೆ ಮಾಡಲು ಸಹ ಇಲ್ಲಿ ನೆಟ್‍ವರ್ಕ್ ಸಿಗಲಾರದಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ದೂರು ಜನರದ್ದು.

ಸಾಮಾಜಿಕ ಜಾಲತಾಣ ಬಳಕೆ ಮಾಡಬೇಕೆಂದರೆ ಊರ ಹೊರಗಿನ ಗುಡ್ಡ ಬೆಟ್ಟ ಎತ್ತರದ ಮರ ಏರಬೇಕು. ಅಲ್ಪಸ್ವಲ್ಪ ಸಿಗ್ನಲ್ ಸಿಕ್ಕಿ ಕರೆ ಮಾಡಿ ಮಾತನಾಡಬಹುದು ಅಷ್ಟೆ.
ಮಂಜುನಾಥ್ ಆಳುವಳ್ಳಿ ಗ್ರಾಮದ ಯುವಕ
ವಿದ್ಯಾರ್ಥಿಗಳಿಗೆ ಪ್ರವಾಸಿಗರಿಗೆ ನೆಟ್ ವರ್ಕ್ ಅವಶ್ಯಕತೆ ಹೆಚ್ಚಾಗಿ ಇರುತ್ತದೆ. ಆದಷ್ಟು ಬೇಗ ಯಾವುದಾದರೂ ಒಂದು ಗ್ರಾಮದಲ್ಲಿ ಖಾಸಗಿ ನೆಟ್ವರ್ಕ್ ಟವರ್ ನಿರ್ಮಾಣ ಆಗಬೇಕು.
ಜ್ಞಾನೇಶ್ ಕಡಗರಹಳ್ಳಿ ಗ್ರಾಮದ ಯುವಕ
ಊರು ತೊರೆಯುತ್ತಿರುವ ಯುವಕರು
ಎಷ್ಟೇ ದುಬಾರಿ ಮೊಬೈಲ್‌ ತೆಗೆದುಕೊಂಡರೂ ನೆಟ್‍ವರ್ಕ್ ಇಲ್ಲ. ಯಾವುದೇ ಮಾಹಿತಿ ಸಂಗ್ರಹಕ್ಕೆ ಸಾಧ್ಯವಾಗುತ್ತಿಲ್ಲ. ವಿದ್ಯಾಭ್ಯಾಸ ಮುಗಿಸಿದ ನಂತರ ಉದ್ಯೋಗ ಹುಡುಕಾಟ ಸ್ನೇಹಿತರ ಬಳಿ ಮಾತನಾಡಲು ಸಮಾಜದಲ್ಲಿ ಆಗುತ್ತಿರುವ ಆಗುಹೋಗುಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಗದೆ ಊರನ್ನೇ ಬಿಟ್ಟು ಬೇರೆ ಊರಿಗೆ ಹೋಗಬೇಕು ಎಂದು ಐದಾರು ಗ್ರಾಮಗಳ ಯುವಕರು ಚಿಂತನೆ ನಡೆಸಿದ್ದಾರೆ. ಈಗಾಗಲೇ ಕೆಲ ಯುವಕರು ಊರನ್ನೇ ಬಿಟ್ಟು ಪಟ್ಟಣದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಹೆಗ್ಗದ್ದೆ ಬಳಿ ನಿರ್ಮಿಸಿರುವ ಮೊಬೈಲ್ ಟವರ್‌ನಿಂದ ಈ ಹಳ್ಳಿಗಾಡಿನ ಪ್ರದೇಶಕ್ಕೆ ಕೇವಲ ಒಂದು ಪಾಯಿಂಟ್ ನೆಟ್‍ವರ್ಕ್ ಸಿಗುತ್ತಿದೆ. ಮನೆ ಒಳಗೆ ಹೋದರೆ ಆ ನೆಟ್‍ವರ್ಕ್ ಕೂಡ ಹೊರಟು ಹೋಗುತ್ತದೆ. ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸಲು ಆಗುತ್ತಿಲ್ಲ. ಆಗುತ್ತಿರುವ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಲೂ ಆಗುತ್ತಿಲ್ಲ. ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಲ್ಯಾಂಡ್ ಫೋನ್‌ಗಳ ಬಳಕೆ ಕಡಿಮೆಯಾಗಿದ್ದು ಅವನ್ನು ತೆಗೆದು ಹಾಕಲಾಯಿತು. ಆದರೆ ಇತ್ತ ಮೊಬೈಲ್ ನೆಟ್‍ವರ್ಕ್ ಕೂಡ ಬಳಕೆಯಾಗುತ್ತಿಲ್ಲ. ಲ್ಯಾಂಡ್ ಲೈನ್ ಕೂಡ ಇಲ್ಲದಂತಾಗಿದೆ ಎಂದು ಜನರು ಹೇಳುತ್ತಿದ್ದಾರೆ.

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT