ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತನ ದೇಗುಲಗಳ ಸಂರಕ್ಷಣೆ ಅವಶ್ಯ

ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿದ ಡಾ. ಗವಿಸಿದ್ದಯ್ಯ
Last Updated 15 ಜೂನ್ 2022, 3:00 IST
ಅಕ್ಷರ ಗಾತ್ರ

ಹಾಸನ: ಇತಿಹಾಸವನ್ನು ಬಿಂಬಿಸುವ ಹಾಗೂ ಧಾರ್ಮಿಕ ತಳಹದಿಯ ಪ್ರಾಚೀನ ದೇಗುಲಗಳ ಶಿಲ್ಪಕಲೆಗಳು, ವಿಗ್ರಹಗಳು ಭಕ್ತರನ್ನು, ಪ್ರವಾಸಿಗರನ್ನು ಸೆಳೆಯುವುದರ ಜೊತೆಗೆ ಗತಕಾಲದ ವೈಭವವನ್ನು ಸಾರುತ್ತಿವೆ. ಇಂತಹ ದೇಗುಲಗಳ ಸಂರಕ್ಷಣೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣೆ, ಅಭಿವೃದ್ಧಿ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ಪತ್ರಾಗಾರ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ ಹೇಳಿದರು.

ನಗರದ ಎಂ.ಜಿ. ರಸ್ತೆಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ, ರಾಜ್ಯ ಪತ್ರಾಗಾರ ಇಲಾಖೆ, ವಿಭಾಗೀಯ ಕಚೇರಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜು ಶಿಕ್ಷಣ ಇಲಾಖೆ ಮೈಸೂರು ಪ್ರಾದೇಶಿಕ ವಿಭಾಗದ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ರೂಪ್‍ರಾಜ್ ಚಂದನ್ ಮಾತನಾಡಿ, ‘ಮಕ್ಕಳು ಐತಿಹಾಸಿಕ ಪ್ರಜ್ಞೆ ಬೆಳೆಸಿಕೊಳ್ಳುವುದರಿಂದ ಜೀವನದಲ್ಲಿ ಉತ್ತಮ ನಾಗರಿಕರಾಗಲು ಸಹಾಯವಾಗುತ್ತದೆ. ನಮ್ಮ ಇತಿಹಾಸಕಾರರು ರಚಿಸಿ ಹೋದ ಪುರಾತನ ಕಾಲದ ಅನೇಕ ವಿಷಯಗಳು ನಮ್ಮ ಭವಿಷ್ಯದ ಮಕ್ಕಳ ಅಧ್ಯಯನಕ್ಕೆ ಹೆಚ್ಚು ಸಹಕಾರಿಯಾಗಿವೆ’ ಎಂದರು.

ಗಂಧದ ಕೋಠಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ. ಕವಿತಾ ಮಾತನಾಡಿ, ‘ಸಾಹಿತ್ಯ ಹಾಗೂ ರಾಜರ ನಡುವೆ ಅವಿನಾಭಾವ ಸಂಬಂಧ ಇತ್ತು. ಮೈಸೂರಿನ ಒಡೆಯರ್ ಕಾಲದಲ್ಲೂ ವಿದ್ವಾಂಸರು ಹಾಗೂ ಸಾಹಿತಿಗಳು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ್ದಾರೆ. ಇದರಿಂದ ನಮ್ಮ ಹಿಂದಿನ ಕಲೆ, ಸಾಹಿತ್ಯ, ಸಂಸ್ಕೃತಿ ಅರಿಯಲು ಸಹಕಾರಿಯಾಗುತ್ತಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಟಿ. ಕೃಷ್ಣೇಗೌಡ ಮಾತನಾಡಿ, ‘ಹಾಸನ ಜಿಲ್ಲೆಯು ಐತಿಹಾಸಿಕ ಪ್ರಾಮುಖ್ಯತೆ ಹೊಂದಿದೆ. ಕಲೆ-ಸಾಹಿತ್ಯ ಹಾಗೂ ಅದ್ಭುತವಾದ ಕೆತ್ತನೆಗಳು ನಮ್ಮ ಜಿಲ್ಲೆಯಲ್ಲಿದ್ದು, ನಮ್ಮ ಜಿಲ್ಲೆಯ ಅನೇಕ ಮಂದಿಗೆ ಇಲ್ಲಿನ ಪುರಾತನ ಸ್ಥಳಗಳೇ ತಿಳಿದಿಲ್ಲ. ಇತಿಹಾಸ ಎಂಬುದು ನಮ್ಮ ಮುಂದೆ ಇರುವ ಕನ್ನಡಿ. ನಮ್ಮ ಜಿಲ್ಲೆಯಲ್ಲಿ ಏನೇನಿದೆ? ಏನೇನು ಬೆಳೆ ಬೆಳೆಯಲಾಗುತ್ತದೆ? ಯಾವ ಯಾವ ಸ್ಥಳಗಳು, ದೇವಾಲಯ, ಕೋಟೆಗಳಿವೆ? ಅವುಗಳಿಂದ ಆಗುವ ಪ್ರಯೋಜನಗಳೇನು? ಎಂಬುದನ್ನು ವಿದ್ಯಾರ್ಥಿಗಳು ತಿಳಿಯಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಲ್. ಮಂಜುನಾಥ್ ಮಾತನಾಡಿದರು. ಮಂಗಳವಾರ ವಿವಿಧ ವಿಷಯಗಳ ಕುರಿತಾಗಿ ಮೂರು ಗೋಷ್ಠಿಗಳು ನಡೆದವು. ಡಾ.ಶಶಿಕಲಾ, ಎನ್. ಶಂಕರಪ್ಪ, ಎಚ್.ವಿ. ಪುರುಷೋತ್ತಮ್, ಉಪನ್ಯಾಸಕ ಯೋಗೇಶ್, ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT