ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ | ಲಾರಿ ಡೀಸೆಲ್‌ ಕಳವು: ಮಾಲೀಕರ ಆತಂಕ

ಸಕಲೇಶಪುರ: ಒಂದು ತಿಂಗಳಲ್ಲಿ 1 ಸಾವಿರ ಲೀಟರ್‌ ಕಳವು
Published 6 ನವೆಂಬರ್ 2023, 14:21 IST
Last Updated 6 ನವೆಂಬರ್ 2023, 14:21 IST
ಅಕ್ಷರ ಗಾತ್ರ

ಸಕಲೇಶಪುರ: ಮನೆ ಮುಂಭಾಗ, ರಸ್ತೆ ಬದಿಯಲ್ಲಿ ನಿಲ್ಲಿಸುವ ಲಾರಿಗಳಿಂದ ಸಾವಿರ ಲೀಟರ್‌ಗೂ ಹೆಚ್ಚು ಡೀಸೆಲ್‌ ಕಳವು ಮಾಡಲಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚೆಗೆ ಕಳವು ಪ್ರಕರಣ ಹೆಚ್ಚಾಗಿದ್ದು, ಲಾರಿ ಮಾಲೀಕರು ಹಾಗೂ ಚಾಲಕರು ಆತಂಕಗೊಂಡಿದ್ದಾರೆ.

ಕಳೆದ ಒಂದೂವರೆ ತಿಂಗಳಲ್ಲಿ, ಹೆಬ್ಬಸಾಲೆ, ಆನೇಮಹಲ್‌, ಬಾಳ್ಳುಪೇಟೆ, ಹೊಸೂರು ಹೋಟಲ್‌ ಬಳಿ ರಾತ್ರಿ ನಿಲ್ಲಿಸಿದ್ದ ಲಾರಿಗಳಿಂದ ಡೀಸೆಲ್‌ ಕಳ್ಳತನ ಮಾಡಿರುವ ಬಗ್ಗೆ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ತಾಲ್ಲೂಕಿನ ಹೆಬ್ಬಸಾಲೆ ಬಸವಣ್ಣ ದೇವಸ್ಥಾನ ಪಕ್ಕದಲ್ಲಿ ಅದೇ ಗ್ರಾಮದ ನವೀನ್‌ಗೌಡ ಎಂಬುವವರು ನಿಲ್ಲಿಸಿದ್ದ ಲಾರಿಯಿಂದ ಸೆ.25ರಂದು ಸುಮಾರು 280 ಲೀಟರ್‌ ಡೀಸೆಲ್‌ ಕಳ್ಳತನ ಮಾಡಲಾಗಿದೆ.

ದೇವಸ್ಥಾನದಿಂದ ಒಂದು ಕಿ.ಮೀ. ದೂರದಲ್ಲಿ ಮನೆ ಇದೆ, ಅಲ್ಲಿಗೆ ಲಾರಿ ಹೋಗಲು ರಸ್ತೆ ಇಲ್ಲದೆ ಇರುವ ಕಾರಣ ಕಳೆದ 6 ವರ್ಷಗಳಿಂದ ದೇವಸ್ಥಾನದ ಹತ್ತಿರವೇ ರಾತ್ರಿ ಲಾರಿ ನಿಲ್ಲಿಸುತ್ತಿದ್ದೇನೆ. ಯಾವತ್ತೂ ಸಹ ಲಾರಿಯಿಂದ ಯಾವುದೇ ಒಂದು ವಸ್ತು ಅಲ್ಲಿ ಕಳ್ಳತನ ಆಗಿರಲಿಲ್ಲ. ಈ ರೀತಿ ರಾಜಾರೋಷವಾಗಿ ಡೀಸೆಲ್‌ ಕಳ್ಳತನ ಮಾಡಿರುವುದರಿಂದ ಲಾರಿ ನಿಲ್ಲಿಸುವುದಕ್ಕೆ ಕಷ್ಟವಾಗುತ್ತಿದೆ ಎಂದು ನವೀನ್‌ ‘ಪ್ರಜಾವಾಣಿ’ ಗೆ ಹೇಳಿದರು.

ಅಕ್ಟೋಬರ್ 29 ರಂದು ಮಂಗಳೂರಿನಿಂದ–ಬಳ್ಳಾರಿಗೆ ಕೋಕ್‌ ಸಾಗಿಸುತ್ತಿದ್ದ ಪಟ್ಟಣದ ಕೊಪ್ಪಲು ಬಡಾವಣೆಯ ಅಮ್ಜದ್‌ ಅವರು ಆನೇಮಹಲ್‌ ಬಸವಣ್ಣ ದೇವಸ್ಥಾನ ಮುಂಭಾಗ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಸುಮಾರು 250ಕ್ಕೂ ಹೆಚ್ಚು ಲೀಟರ್ ಡೀಸೆಲ್‌ ಕಳ್ಳತನ ಮಾಡಲಾಗಿದೆ. ಮರುದಿನ ಪೊಲೀಸ್ ಇನ್‌ಸ್ಪೆಕ್ಟರ್‌ ಬಂದು ಸ್ಥಳ ಪರಿಶೀಲನೆ ನಡೆಸಿ ಹೋಗಿದ್ದರು. ಆದರೆ ಮರುದಿನವೇ ನೂರುಲ್ಲಾ ಎಂಬುವರ ಲಾರಿಯಿಂದ ಸುಮಾರು 260 ಲೀಟರ್‌ಗಿಂತ ಹೆಚ್ಚು ಡೀಸೆಲ್ ಕಳ್ಳತ ಮಾಡಲಾಗಿತ್ತು.

ಮನೆ ಬಡಾವಣೆಯ ಓಣಿಯಲ್ಲಿ ಇರುವುದರಿಂದ ಅಲ್ಲಿ ಲಾರಿ ನಿಲ್ಲಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಹೀಗಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಬೇಕು. ಈ ರೀತಿ ಲಾರಿಯಿಂದ ಡೀಸೆಲ್‌ ಕಳ್ಳತನ ಮಾಡಿದರೆ ಹೇಗೆ ವ್ಯವಹಾರ ಮಾಡುವುದು ಎಂದು ಅಮ್ಜದ್‌ ಆತಂಕ ವ್ಯಕ್ತಪಡಿಸುತ್ತಾರೆ.

ಬಾಳ್ಳುಪೇಟೆ ಹಾಗೂ ಹೊಸೂರು ಎಸ್ಟೇಟ್‌ ಬಳಿ ಚಿನ್ನಳ್ಳಿ ಗ್ರಾಮದ ನಿವಾಸಿ ಸುಹೀಲ್‌ ಅವರ ಎರಡು ಲಾರಿಗಳಿಂದಲೂ ಸಹ ಡೀಸೆಲ್‌ ಕಳ್ಳತನ ಮಾಡಲಾಗಿದೆ. ಡೀಸೆಲ್‌ ಟ್ಯಾಂಕ್‌ನ ಪ್ಲೂಡ್‌ ಓಪನ್‌ ಮಾಡಿ ಡೀಸೆಲ್‌ ತೆಗೆಯಲಾಗಿದೆ ಎಂದು ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಇದುವರೆಗೂ ಆರೋಪಿಗಳ ಸುಳಿವು ಸಿಕ್ಕಿಲ್ಲ.

ಮನೆ ಮುಂದೆ ನಿಲ್ಲಿಸುವ ದ್ವಿಚಕ್ರ ವಾಹನಗಳು, ಜೀಪು, ಕಾರುಗಳಿಂದಲೂ ಡೀಸೆಲ್‌, ಪೆಟ್ರೋಲ್‌ ಕಳ್ಳತನ ಪ್ರಕರಣಗಳು ಆಗಾಗ ನಡೆಯುತ್ತಿರುವ ದೂರುಗಳು ಪಟ್ಟಣ ಹಾಗೂ ತಾಲ್ಲೂಕಿನ ಇತರ ಪ್ರದೇಶಗಳಲ್ಲಿ ಕೇಳಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT