ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳೆ ರೋಗಿಗಳ ಚಿಕಿತ್ಸೆ ಕೊಠಡಿ ಹೆಚ್ಚಿಸಿ

ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಿ: ರೇವಣ್ಣ
Last Updated 26 ಜೂನ್ 2019, 18:11 IST
ಅಕ್ಷರ ಗಾತ್ರ

ಹಾಸನ: ಬಡ ಸಮುದಾಯಕ್ಕೆ ಉತ್ತಮ ಆರೋಗ್ಯ ಚಿಕಿತ್ಸೆ ದೊರೆಯಲೇಬೇಕು. ಅದಕ್ಕಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಸಚಿವ ಎಚ್.ಡಿ. ರೇವಣ್ಣ ಸೂಚನೆ ನೀಡಿದರು.

ಹಾಸನ ವೈದ್ಯಕೀಯ ಆಸ್ಪತ್ರೆಯ ಮೂಲಭೂತ ಸೌಕರ್ಯ ಅಭಿವೃದ್ಧಿ ಕುರಿತು ಸಭೆ ನಡೆಸಿದ ಸಚಿವರು, ಜಿಲ್ಲೆಯಲ್ಲಿ ಸುಸಜ್ಜಿತ ವೈದ್ಯಕೀಯ ಕಾಲೇಜು ಆಸ್ಪತ್ರೆ ಇದ್ದರೂ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣಗಳನ್ನು ಅರಿಯಬೇಕು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸಾ ಸೇವೆ ನೀಡಬೇಕು ಎಂದು ಹೇಳಿದರು.

108 ಆಂಬುಲೆನ್ಸ್‌ಗಳು ಕರೆ ಬಂದ ತಕ್ಷಣ ರೋಗಿಗಳನ್ನು ಸಮೀಪದ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಬೇಕು. ಅಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದ ಪಕ್ಷದಲ್ಲಿ ಜಿಲ್ಲೆ ಆಸ್ಪತ್ರೆಗೆ ಕರೆತರಬೇಕು. ಖಾಸಗಿ ಆಸ್ಪತ್ರೆಗೆ ಕರೆದೊಯ್ಯದ ಆಂಬುಲೆನ್ಸ್‌ ವಾಹನಗಳ ಚಾಲಕರ ವಿರುದ್ಧ ಕ್ರಮ ವಹಿಸಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ಮೂಳೆ ಮುರಿತ ಪ್ರಕರಣಗಳು ಬರುತ್ತಿರುವುದರಿಂದ, ಇನ್ನೂ ನಾಲ್ಕು ಹೆಚ್ಚುವರಿ ವೈದ್ಯರನ್ನು ಸೇವೆಗೆ ತೆಗೆದುಕೊಳ್ಳಬೇಕು. ಇಂತಹ ರೋಗಿಗಳ ಚಿಕಿತ್ಸೆಗೆ ಕೊಠಡಿ ಸಂಖ್ಯೆಗಳನ್ನು ಹೆಚ್ಚಿಸಬೇಕೆಂದು ರೇವಣ್ಣ ತಿಳಿಸಿದರು.

ಹಾಸನ ವೈದ್ಯಕೀಯ ಕಾಲೇಜು ಪ್ರಾರಂಭವಾಗಿ 13 ವರ್ಷಗಳಾಗಿವೆ. ಇನ್ನೂ 15 ಪಿ.ಜಿ. ಸೀಟುಗಳ ಪ್ರವೇಶಕ್ಕೆ ಅವಕಾಶವಿದೆ. ಇದನ್ನು ಬೆಂಗಳೂರು ಹಾಗೂ ಹುಬ್ಬಳ್ಳಿ ಕಾಲೇಜಿನಂತೆ 35 ಸೀಟುಗಳನ್ನು ಏರಿಕೆ ಮಾಡಬೇಕಿದೆ ಎಂದು ಅವರು ಹೇಳಿದರು.

ಅದೇ ರೀತಿ ಹಾಲಿ ಹಾಸನ ವೈದ್ಯಕೀಯ ಕಾಲೇಜಿನಲ್ಲಿ 150 ಎಂಬಿಬಿಎಸ್ ವಿದ್ಯಾರ್ಥಿಗಳು ಪ್ರತಿ ವರ್ಷ ಪದವಿ ಪಡೆಯುತ್ತಿದ್ದಾರೆ. ಆದರೆ ಈ ಹಿಂದೆ ಕಾಲೇಜು ಪ್ರಾರಂಭದ ವೇಳೆ ಕೇವಲ 100 ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ತಕ್ಕಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳಿದ್ದು, 200 ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ತಕ್ಕಂತೆ ಉಪನ್ಯಾಸಕರು ಹಾಗೂ ಇತರೆ ಸಿಬ್ಬಂದಿ ನೇಮಕ ಅಗತ್ಯವಿದೆ. ಇದೆಲ್ಲವುಗಳಿಗೆ ತಕ್ಷಣವೇ ಪ್ರಸ್ತಾವ ಸಲ್ಲಿಸಿದ್ದಲ್ಲಿ ತಾವು ಅನುಮೋದನೆ ದೊರಕಿಸಿಕೊಡುವುದಾಗಿ ತಿಳಿಸಿದರು.

ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿವರ್ಷ 150 ವಿದ್ಯಾರ್ಥಿಗಳು ಎಂ.ಬಿ.ಬಿ.ಎಸ್ ಪದವಿ ಮುಗಿಸುತ್ತಿದ್ದಾರೆ. ಇತರೆ ವೈದ್ಯಾಧಿಕಾರಿಗಳ ಜೊತೆಗೆ 4ನೇ ವರ್ಷದಲ್ಲಿ ಪ್ರತಿ ವಿದ್ಯಾರ್ಥಿ 4 ಜನ ಒಳರೋಗಿಗಳ ತಪಾಸಣೆ, ಆರೋಗ್ಯ ಚಿಕಿತ್ಸೆ ಒದಗಿಸಿದಲ್ಲಿ 600 ರೋಗಿಗಳಿಗೆ ಉತ್ತಮ ಸೇವಾ ಸೌಲಭ್ಯ ದೊರೆತಂತಾಗುತ್ತದೆ. ಈ ಬಗ್ಗೆ ಹಾಸನ ವೈದ್ಯಕೀಯ ಕಾಲೇಜು ನಿರ್ದೆಶಕರು, ಆಡಳಿತಾಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರು ಗಮನ ಹರಿಸಬೇಕು ಎಂದರು.

ಜಿಲ್ಲಾ ಆಸ್ಪತ್ರೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಗಳು ಬೇಗ ಮುಗಿಯಬೇಕಿದ್ದು, ಶೀಘ್ರವಾಗಿ ಇದಕ್ಕೆ ಅಗತ್ಯ ಅನುದಾನ ಒದಗಿಸುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಶಾಸಕ ಬಾಲಕೃಷ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಗೌಡ, ಹಿಮ್ಸ್ ನಿರ್ದೇಶಕ ಡಾ. ಬಿ.ಆರ್. ರವಿಕುಮಾರ್, ಹಿಮ್ಸ್ ಆಡಳಿತಾಧಿಕಾರಿ ಕಲ್ಪಶ್ರೀ, ಜಿಲ್ಲಾ ಶಸ್ತ್ರ ಚಿಕಿತ್ಸಕ ಕೃಷ್ಣಮೂರ್ತಿ, ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ವಿಶೇಷ ಭೂಸ್ವಾಧೀನಾಧಿಕಾರಿ ಗಿರೀಶ್ ನಂದನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT