ನಗರದಲ್ಲಿ ಸರಣಿ ಪ್ರತಿಭಟನೆ

7
ಬೇಡಿಕೆ ಈಡೇರಿಕೆಗೆ ಮೀಸಲಾತಿ ಸಂರಕ್ಷಣಾ ಸಮಿತಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆಗ್ರಹ

ನಗರದಲ್ಲಿ ಸರಣಿ ಪ್ರತಿಭಟನೆ

Published:
Updated:
Deccan Herald

ಹಾಸನ: ನಗರದಲ್ಲಿ ಶನಿವಾರ ಸರಣಿ ಪ್ರತಿಭಟನೆಗಳು ನಡೆದವು. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಂಘ, ಸಂಸ್ಥೆಗಳು ಧರಣಿ ನಡೆಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಮನವಿ ಸಲ್ಲಿಸಿದವು.

ಮೀಸಲಾತಿ ರಕ್ಷಣಾ ಸಮಿತಿ: ಪಿಯು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಎಸ್ ಸಿ,ಎಸ್‍ಟಿ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಅರ್ಹತೆಯನ್ನು ಶೇಕಡಾ 55ಕ್ಕೆ ಏರಿಸಿರುವುದನ್ನು ವಿರೋಧಿಸಿ ಓಬಿಸಿ, ಎಸ್ ಸಿ ಮತ್ತು ಎಸ್ ಟಿ ಮೀಸಲಾತಿ ಸಂರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಶೇಕಡಾ 55 ಅಂಕ ನಿಗದಿಪಡಿಸಿದ್ದು, ಅಂಗವಿಕಲ ಹಾಗೂ ಹಿಂದುಳಿದ ವರ್ಗಗಳಿಗೂ ಅದೇ ಮಾನದಂಡ ಅನುಸರಿಸುತ್ತಿರುವುದು ಸರಿಯಲ್ಲ. ನೇಮಕಾತಿ ಅರ್ಹತೆಯ ಅಂಕವನ್ನು ಶೇಕಡಾ 55 ರಿಂದ 50ಕ್ಕೆ ಇಳಿಸುವಂತೆ ಅನೇಕ ಬಾರಿ ಮನವಿ ಮಾಡಲಾಗಿತ್ತು. ಆದರೆ ಈಗ ಶೇಕಡಾ 55ಕ್ಕೆ ಏರಿಸಿರುವುದು ಖಂಡನೀಯ ಎಂದರು.

ಯುಜಿಸಿ ಅಂತಹ ಸ್ವಾಯತ್ತ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಶೇಕಡಾ 50 ಎಂದು ನಿಗದಿಪಡಿಸಿದೆ. ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನೇಮಕಾತಿ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಸಮಿತಿ ಗೌರವಾಧ್ಯಕ್ಷ ಕೆ.ಕೆ. ರುದ್ರಯ್ಯ, ಉಪಾಧ್ಯಕ್ಷ ರಂಗಸ್ವಾಮಿ, ಖಜಾಂಚಿ ಮಲ್ಲಯ್ಯ, ಸಂಚಾಲಕ ಎಂ.ಎಸ್. ಯೋಗೇಶ್, ಮಾನವ ಹಕ್ಕುಗಳ ವೇದಿಕೆಯ ಆರ್. ಮರಿಜೋಸೆಫ್, ಆರ್ ಪಿಐ ಸತೀಶ್, ನಾಗರಾಜ್ ಹೆತ್ತೂರು ಇದ್ದರು.

ಸರ್ಕಾರಿ ಭೂಮಿ ರಕ್ಷಣೆಗೆ ಆಗ್ರಹ: ಗ್ರಾಮದ ಆಂಜನೇಯ ಸ್ವಾಮಿ ದೇವಾಲಯಕ್ಕೆ ಮೀಸಲಿಟ್ಟಿರುವ ಸರ್ಕಾರಿ ಜಮೀನನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಚನ್ನರಾಯಪಟ್ಟಣ ತಾಲ್ಲೂಕಿನ ಬಿ. ಹೊನ್ನೇನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ಸರ್ವೆ ನಂ. 30ರ 9 ಗುಂಟೆ, 31ರ 3.14 ಎಕರೆ, 25ರ 14 ಗುಂಟೆ ಜಮೀನನ್ನು ಭೂನ್ಯಾಯ ಮಂಡಳಿ ಹಾಗೂ ಜಿಲ್ಲಾಧಿಕಾರಿ ಅಧಿಕೃತ ಜ್ಞಾಪನಾ ಪತ್ರದ ಅನ್ವಯ ಆಂಜನೇಯ ಸ್ವಾಮಿ ದೇವಾಲಯ, ಅಂಗನವಾಡಿ ಕೇಂದ್ರ, ಸಮುದಾಯ ಭವನ ಹಾಗೂ ಆಶ್ರಯ ಯೋಜನೆಗಳಿಗೆ ಮೀಸಲಿಡಲಾಗಿದೆ. ಆದರೆ ಗ್ರಾಮದ ಮುಖಂಡರೊಬ್ಬರು ಈ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವುದು ಮಾತ್ರವಲ್ಲದೆ ದೇವಸ್ಥಾನ ನಾಶಕ್ಕೆ ಮುಂದಾಗಿದ್ದಾರೆ. ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಾಲ್ಕು ಎಕರೆ ಜಮೀನನ್ನು ಗ್ರಾಮದ ಒಳಿತಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥರಾದ ಶಂಕರೇಗೌಡ, ಎಚ್.ಎಂ.ಲೋಕೇಶ್, ಜಯಮ್ಮ, ಶಾಂತಮ್ಮ, ಸಾವಿತ್ರಮ್ಮ ಇದ್ದರು.

ವರ್ಗಾವಣೆ ನೀತಿಗೆ ಖಂಡನೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ವರ್ಗಾವಣೆ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಗರದ ಕೆಎಸ್‍ಆರ್‍ಟಿಸಿ ವಿಭಾಗೀಯ ಕಚೇರಿ ಎದುರು ಕೆಎಸ್‍ಆರ್‍ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್‌ ಫೆಡರೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

2016ರ ಜುಲೈ 25, 26 ಹಾಗೂ 27 ರಂದು ಮುಷ್ಕರ ನಡೆದ ವೇಳೆ ರಾಜ್ಯ ಸರ್ಕಾರ ಅಂತರ ನಿಗಮಗಳ ವರ್ಗಾವಣೆಗಳ ಕುರಿತ ಸಿಬ್ಬಂದಿ ನಿರ್ಧಾರಕ್ಕೆ ಒಪ್ಪಿತ್ತು. ಈ ಪ್ರಕ್ರಿಯೆ ನಡೆದು 26 ತಿಂಗಳು ಕಳೆದರೂ ವರ್ಗಾವಣೆಯಾದವರನ್ನು ಅವರವರ ಸ್ಥಳಗಳಿಗೆ ಕಳುಹಿಸಿಲ್ಲ. ಸಾರಿಗೆ ನಿಗಮ ಬಂದ ನಂತರ ಒಂದೇ ಬಾರಿಗೆ ನಾಲ್ಕು ಸಾವಿರ ನೌಕರರ ವರ್ಗಾವಣೆಯಾಗಿಲ್ಲ. 2009 ರಿಂದ 2016ರ ವರೆಗೆ ಹೈಕೋರ್ಟ್‍ನ ಆದೇಶ ಮುಂದಿಟ್ಟುಕೊಂಡು ನೌಕರರಿಗೆ ಸರ್ಕಾರ ತೊಂದರೆ ನೀಡಿತು. ಈ ತಾರತಮ್ಯದ ವಿರುದ್ಧ ನಿರಂತರ ಹೋರಾಟ ಮಾಡಿದ ಪರಿಣಾಮ ವರ್ಗಾವಣೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ಹೇಳಿಕೊಂಡು ಬಂದಿತು. ಆದರೆ ಆ ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಅವಲತ್ತುಕೊಂಡರು.

ವರ್ಗಾವಣೆಯಾಗಿರುವ ಬಹಳಷ್ಟು ನೌಕರರು ಈಗಾಗಲೇ ತಮ್ಮ ಕುಟುಂಬದವರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದು, ಸ್ಥಳ ನಿಯುಕ್ತಿಯಾಗದೆ ತೊಂದರೆ ಅನುಭವಿಸುವಂತಾಗಿದೆ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು, ' ಚರ್ಚಿಸಿದ ನಂತರ ವರ್ಗಾವಣೆ ಆದೇಶ ಹೊರಡಿಸಬೇಕಾಗಿದೆ' ಎಂಬ ಹೇಳಿಕೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಚಿವರು, ಶಾಸಕರು ಪ್ರತಿನಿತ್ಯ ಸಾರಿಗೆ ಇಲಾಖೆಗೆ ವರ್ಗಾವಣೆ ಬಗ್ಗೆ ಶಿಫಾರಸ್ಸು ಪತ್ರಗಳನ್ನು ನೀಡುತ್ತಿದ್ದಾರೆ. ನೌಕರರ ವರ್ಗಾವಣೆಗಳು ನೀತಿ, ನಿಯಮ ಪ್ರಕಾರ ನಡೆಯಬೇಕೆ ಹೊರತು ಪ್ರಭಾವಿಗಳ ಶಿಫಾರಸ್ಸು ಮೂಲಕ ಅಲ್ಲ ಎಂದರು.

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಹಣಕಾಸಿನ ಪರಿಸ್ಥಿತಿ ಗಂಭೀರವಾಗಿದೆ. ಬಿಎಂಟಿಸಿ ಮತ್ತು ವಾಯವ್ಯ ಸಾರಿಗೆ ನಿಗಮಗಳಲ್ಲಿ ₹ 400 ಕೋಟಿ ವೇತನ ಬಾಕಿ ಇದೆ. ನೌಕರರ ಭವಿಷ್ಯ ನಿಧಿ, ಆರೋಗ್ಯ ಸೌಲಭ್ಯ, ಜೀವವಿಮೆ ಪ್ರೀಮಿಯಂ, ವೈದ್ಯಕೀಯ ವೆಚ್ಚಗಳ ಮರು ಪಾವತಿ ಪಾರದರ್ಶಕವಾಗಿ ನಡೆಯದೆ ಆತಂಕ ಸೃಷ್ಟಿಸಿದೆ. ಆದ್ದರಿಂದ ಈ ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ವರ್ಗಾವಣೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು ವದಂತಿ ಹರಡಿದ್ದು, ಅಂತರ ನಿಗಮ ವರ್ಗಾವಣೆಯಾದವರನ್ನು ವಿಮುಕ್ತಿ ಮಾಡಬೇಕು. ಬಿಎಂಟಿಸಿ ಮತ್ತು ವಾಯವ್ಯ ನಿಗಮಗಳಲ್ಲಿ ಕಾರ್ಮಿಕರಿಗೆ ಬರಬೇಕಾದ ಬಾಕಿ ವೇತನ ಪಾವತಿಸಬೇಕು. ಸಾರಿಗೆ ನಿಗಮಗಳಿಗೆ ತೆರಿಗೆ ರಿಯಾಯಿತಿ ಹಾಗೂ ಇತರೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಫೆಡರೇಷನ್ ಜಿಲ್ಲಾಧ್ಯಕ್ಷ ಶಿವನಂಜೇಗೌಡ, ಕಾರ್ಯದರ್ಶಿ ರಂಗೇಗೌಡ ಹಾಗೂ ನೌಕರರು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !