ನಂಜುಂಡಪ್ಪ ವರದಿ ಜಾರಿಯಾಗಲಿ: ಜಿಲ್ಲಾಧಿಕಾರಿ ಕಚೇರಿ ಎದುರು ಕರವೇ ಪ್ರತಿಭಟನೆ

7

ನಂಜುಂಡಪ್ಪ ವರದಿ ಜಾರಿಯಾಗಲಿ: ಜಿಲ್ಲಾಧಿಕಾರಿ ಕಚೇರಿ ಎದುರು ಕರವೇ ಪ್ರತಿಭಟನೆ

Published:
Updated:
Deccan Herald

ಹಾಸನ : ಸಮಗ್ರ ಕರ್ನಾಟಕ ಅಭಿವೃದ್ಧಿಗಾಗಿ ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ ವರದಿ ಜಾರಿಗೊಳಿಸಬೇಕು ಹಾಗೂ ಅಖಂಡ ಕರ್ನಾಟಕ ಉಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ.ನಾರಾಯಣಗೌಡ ಬಣದ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದರು ಪ್ರತಿಭಟನೆ ನಡೆಸಿದರು.

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಸಾರ್ವಭೌಮತೆ ಕಾಪಾಡಲು ಸಾಕಷ್ಟು ಹೋರಾಟ ನಡೆಸಲಾಗಿದೆ. ಭಾಷಾವಾರು ಪ್ರಾಂತ್ಯ ಆಧಾರದ ಮೇಲೆ ರಚನೆಯಾಗಿರುವ ರಾಜ್ಯಗಳ ಪೈಕಿ ಕೇಂದ್ರ ಸರ್ಕಾರಕ್ಕೆ ಹೆಚ್ಚು ಆದಾಯ ನೀಡುವ ದೊಡ್ಡ ರಾಜ್ಯ ಕರ್ನಾಟಕವಾಗಿದೆ. ಅಖಂಡ ಕರ್ನಾಟಕಕ್ಕಾಗಿ ಸಾಕಷ್ಟು ಜನರು ಹೋರಾಡಿ, ಪ್ರಾಣ ತ್ಯಾಗ ಮಾಡಿದ್ದಾರೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನಂಜುಂಡಪ್ಪ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮಗ್ರವಾಗಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಉತ್ತರ ಕರ್ನಾಟಕದ ಕೆಲ ಭಾಗಗಳು ಅಭಿವೃದ್ಧಿಯಲ್ಲಿ ಹಿಂದಿವೆ. ವರದಿಯಲ್ಲಿ ತಿಳಿಸಿರುವಂತೆ 119 ತಾಲ್ಲೂಕುಗಳು ಹಿಂದುಳಿದಿದೆ. ಶಿಕ್ಷಣ, ಉದ್ಯೋಗ, ಉದ್ಯಮ, ಆರೋಗ್ಯ ಸೇವೆ, ಮೂಲಭೂತ ಸೌಕರ್ಯ, ಹಣಕಾಸು ಸಂಸ್ಥೆಗಳ ಸ್ಥಾಪನೆ, ಕೃಷಿ, ನೀರಾವರಿ ಸೌಲಭ್ಯಗಳ ಕುರಿತು ಸರಿಯಾದ ಅನುದಾನ ನೀಡುವುದು ಮತ್ತು ಬಿಡುಗಡೆಯಾದ ಹಣವನ್ನು ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕಾದ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು. ಅಖಂಡ ಕರ್ನಾಟಕವೇ ನಮ್ಮ ಆಶಯವಾಗಬೇಕು. ಉತ್ತರ ಕರ್ನಾಟಕವನ್ನು ಪ್ರತ್ಯೇಕ ಗೊಳಿಸುವ ಕೆಲಸಕ್ಕೆ ಕೈ ಹಾಕಿದರೆ ರಾಜ್ಯಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಡಿನಲ್ಲಿ ಪ್ರತ್ಯೇಕತೆಯ ಧ್ವನಿ ಮೊಳಗದಂತೆ ನೋಡಿಕೊಂಡು ಕನ್ನಡಿಗರ ಐಕ್ಯತೆ ಕಾಪಾಡಬೇಕು ಎಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು.

ವೇದಿಕೆ ಜಿಲ್ಲಾಧ್ಯಕ್ಷ ಸಿ.ಡಿ.ಮನುಕುಮಾರ್, ಉಪಾಧ್ಯಕ್ಷ ಸೀತರಾಮ್, ತಾಲ್ಲೂಕು ಅಧ್ಯಕ್ಷ ಶಿವಣ್ಣಗೌಡ, ರಕ್ಷಿತ್, ಅಭಿ, ಪ್ರೀತಂ, ಹರೀಶ್, ಮಹೇಶ್, ಬೋರೇಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !