ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಹಂಕ ಚನ್ನಕೇಶವ ದೇವಾಲಯ ರಕ್ಷಣೆಗೆ ನಿರ್ಲಕ್ಷ: ಅವನತಿಯತ್ತ ಐತಿಹಾಸಿಕ ಸ್ಮಾರಕ

Last Updated 8 ಸೆಪ್ಟೆಂಬರ್ 2018, 13:46 IST
ಅಕ್ಷರ ಗಾತ್ರ

ಹಳೇಬೀಡು: ಇತಿಹಾಸದ ಪೂರ್ಣ ಮಾಹಿತಿ ಈವರೆಗೂ ಲಭ್ಯವಾಗಿಲ್ಲ. ಇತಿಹಾಸದ ಅವಶೇಷಗಳನ್ನು ಹಾಳುಮಾಡದೆ ಪೋಷಿಸಬೇಕು ಎನ್ನುತ್ತಾರೆ ಇತಿಹಾಸ ತಜ್ಞರು. ಆದರೆ ಯಲಹಂಕ ಗ್ರಾಮದಲ್ಲಿರುವ ಹೊಯ್ಸಳರ ಕಾಲದ ಸ್ಮಾರಕವಾದ ಚನ್ನಕೇಶವ ದೇವಾಲಯ ಹಾಗೂ ಇತರ ಅವಶೇಷಗಳನ್ನು ಸರ್ಕಾರ ಗಮನಿಸದೆ ಅವನತಿ ಹೊಂದುತ್ತಿವೆ.

ಚನ್ನಕೇಶವ ದೇವಾಲಯದ ಮೇಲೆ ಬೃಹತ್‌ ಆಲದ ಮರ ಬೆಳೆದು ಸ್ಮಾರಕವನ್ನೇ ಅಲುಗಾಡಿಸುತ್ತಿವೆ. ಗ್ರಾಮಸ್ಥರು ಆಗಾಗ್ಗೆ ದೇವಾಲಯದ ಸುತ್ತಮುತ್ತ ಸ್ವಚ್ಛಗೊಳಿಸಿದ್ದಾರೆ. ಹೀಗಾಗಿ ದೇವಾಲಯ ಮಣ್ಣಿನಡಿ ಮುಚ್ಚಿ ಹೋಗದೆ ನಿಂತಿದೆ.

ದೇವಾಲಯದ ಅಡಿಪಾಯದಡಿ ಬೇರು ಆವರಿಸಿ ಎತ್ತರವಾಗಿ ಬೆಳೆದಿರುವ ಆಲದ ಮರವನ್ನು ತೆರವು ಮಾಡುವುದು ಸುಲಭದ ಕೆಲಸವಾಗಿಲ್ಲ. ಮರ ತೆರವು ಮಾಡುವುದಕ್ಕೆ ಸಂಪೂರ್ಣವಾಗಿ ದೇವಾಲಯದ ಕಲ್ಲುಗಳ ಜೋಡಣೆಯನ್ನೆಲ್ಲ ಕಳಚಿಡಬೇಕು. ಇಂಥ ಪರಿಸ್ಥಿತಿಯಿಂದ ಗ್ರಾಮಸ್ಥರು ಆಲದ ಮರ ತೆರವು ಮಾಡಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ.

ಗ್ರಾಮಸ್ಥರಿಗೆ ತಮ್ಮ ಊರಿನ ಸ್ಮಾರಕದ ಬಗ್ಗೆ ಕಾಳಜಿ ಇದ್ದರೂ ಸಂರಕ್ಷಿಸಲಾಗುತ್ತಿಲ್ಲ. ಇತ್ತ ಇತಿಹಾಸ ಮತ್ತು ಪುರಾತತ್ವ ಇಲಾಖೆಯವರು ಸಹ ಗ್ರಾಮದ ಸ್ಮಾರಕದತ್ತ ಮುಖ ಮಾಡುತ್ತಿಲ್ಲ. ಕೇಂದ್ರ ಪುರಾತತ್ವ ಸರ್ವೆಕ್ಷಣಾ ಇಲಾಖೆ ಹಾಗೂ ರಾಜ್ಯದ ಪರಂಪರೆ ಇಲಾಖೆಯ ಅಧಿಕಾರಿಗಳು ಸ್ಮಾರಕ ಉಳಿಸುವುದಕ್ಕೆ ಮನಸ್ಸು ಮಾಡಿಲ್ಲ. ಹೀಗಾಗಿ ಸ್ಮಾರಕ ಹಾವು. ಇಲಿ, ಹೆಗ್ಗಣಗಳ ವಾಸಸ್ಥಾನವಾಗಿದೆ.

ಸ್ಮಾರಕ ಸಿರಿಗೆರೆ ತರಳಬಾಳುಮಠದ ಶಾಖಾ ಮಠದ ಹಿಂಭಾಗದಲ್ಲಿದೆ. ಮಠದ ಆವರಣದಲ್ಲಿ ಆಗಾಗ್ಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ವಿಶೇಷ ಬೃಹತ್‌ ಕಟ್ಟಡ ಹೊಂದಿರುವ ಮಠಕ್ಕೆ ಸಂರಕ್ಷಣೆ ಇಲ್ಲದ ಸ್ಮಾರಕ ಕಪ್ಪುಚುಕ್ಕೆಯಂತಾಗಿದೆ. ಪುರಾತತ್ವ ಶಾಸ್ತ್ರಜ್ಞರು ಇತ್ತ ಗಮನಹರಿಸಿ ಸ್ಮಾರಕವನ್ನು ದುರಸ್ತಿ ಮಾಡಬೇಕು. ಇತಿಹಾಸದ ಅವಶೇಷವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಅಭಿಪ್ರಾಯ ಇತಿಹಾಸದ ಆಸಕ್ತರಾದ ಎಚ್‌.ಎಂ.ಬಸವರಾಜು ಅವರದ್ದಾಗಿದೆ.

ಮುಖ್ಯಾಂಶಗಳು
* ಸ್ಮಾರಕದ ಮೇಲೆ ಆವರಿಸಿದೆ ಬೃಹತ್‌ ಆಲದ ಮರ
* ಇಲಿಹೆಗ್ಗಣಗಳ ವಾಸಸ್ಥಾನವಾದ ಸ್ಮಾರಕ
* ಸ್ಮಾರಕ ದುರಸ್ತಿ ಮಾಡಿ ಸಂರಕ್ಷಿಸಲು ಇತಿಹಾಸ ಆಸಕ್ತರ ಒತ್ತಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT