ಮಂಗಳವಾರ, ನವೆಂಬರ್ 24, 2020
26 °C
ವರ್ಷದಲ್ಲಿ ₹1,450 ಕೋಟಿ ವಹಿವಾಟು: ಎಚ್‌.ಡಿ.ರೇವಣ್ಣ

ಹಾಮೂಲ್‌ಗೆ ₹36 ಕೋಟಿ ನಿವ್ವಳ ಲಾಭ: ಎಚ್‌.ಡಿ.ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾಮೂಲ್ ) 2019–20ನೇ ಸಾಲಿನಲ್ಲಿ ₹1450 ಕೋಟಿ ವಹಿವಾಟು ನಡೆಸುವ ಮೂಲಕ ₹36 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಒಕ್ಕೂಟ ಅಧ್ಯಕ್ಷ ಎಚ್‌.ಡಿ.ರೇವಣ್ಣ ತಿಳಿಸಿದರು.

ಸಹಕಾರ ಸಂಘಗಳ ಕಾಯ್ದೆ ಅನ್ವಯ ಡಿವಿಡೆಂಡ್‌ ಮತ್ತು ಬೋನಸ್‌ ಅನ್ನು ಸಂಘಗಳಿಗೆ ಪಾವತಿಸಲಾಗುವುದು. ಈಗಾಗಲೇ ಶೇಕಡಾ 5 ಬೋನಸ್‌ ಹಾಗೂ ಶೇ 10 ಡಿವಿಡೆಂಡ್‌ ಸೇರಿ ₹50 ಕೋಟಿ ರೈತರಿಗೆ ನೀಡಲಾಗಿದೆ. ಪ್ರಸ್ತುತ 11 ಲಕ್ಷ ಲೀಟರ್‌ ಶೇಖರಣೆಯೊಂದಿಗೆ ಹಾಸನ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಸೇನೆಗೆ ವರ್ಷಕ್ಕೆ 80 ಲಕ್ಷ ಲೀಟರ್‌ ಯುಎಚ್‌ಟಿ ಹಾಲನ್ನು ಶ್ರೀನಗರ, ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶಕ್ಕೆ ಪೂರೈಕೆ ಮಾಡಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ನಿತ್ಯ 5 ಲಕ್ಷ ಲೀಟರ್‌ ಹಾಲು ಮಾರಾಟಕ್ಕೆ ಅವಕಾಶ ನೀಡುವಂತೆ ಕೆಎಂಎಫ್‌ಗೆ ಪತ್ರ ಬರೆಯಲಾಗಿದೆ. ಹೊರ ರಾಜ್ಯದ ಖಾಸಗಿ ಸಂಸ್ಥೆಗಳ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ದಶಕಗಳಿಂದ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಕೋವಿಡ್‌ನಿಂದಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕುಸಿದು ಹಾಲಿನ ಪೌಡರ್‌, ಬೆಣ್ಣೆ, ತುಪ್ಪ ಸೇರಿ ₹206 ಕೋಟಿ ದಾಸ್ತಾನು ಇದೆ ಎಂದರು.

ಅಲ್ಲದೇ ಮಹತ್ವಾಕಾಂಕ್ಷಿ ಯೋಜನೆಯಾದ ₹400 ಕೋಟಿ ವೆಚ್ಚದ ಮೆಗಾ ಡೇರಿ ನಿರ್ಮಾಣ ಕಾರ್ಯ ಮುಂದಿನ ವರ್ಷ ಪ್ರಾರಂಭಿಸಲಾಗುವುದು. 15 ಲಕ್ಷ ಲೀಟರ್ ಸಾಮರ್ಥ್ಯ, 60 ಮೆಟ್ರಿಕ್‌ ಟನ್‌ ಹಾಲಿನ ಪುಡಿ ಘಟಕ, ಹಾಲಿನ ಪುಡಿ ಮತ್ತು ಬೆಣ್ಣೆ ಬ್ಲಿಸ್ಟರ್‌ ಪ್ಯಾಕ್‌ ಮಾಡುವ ರೀಟೆಲ್‌ ಪ್ಯಾಕಿಂಗ್ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ ಎಂದು ವಿವರಿಸಿದರು.

ಸಿಎಸ್‌ಆರ್‌ ನಿಧಿಯಿಂದ ₹1.25 ಕೋಟಿ ವೆಚ್ಚದಲ್ಲಿ ಶಾಲಾ, ಕಾಲೇಜುಗಳಿಗೆ ಕಂಪ್ಯೂಟರ್‌ ನೀಡಲಾಗಿದೆ. ಪ್ರಸಕ್ತ ವರ್ಷ ಮತ್ತೆ ₹ 50 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ, ಕಾಲೇಜುಗಳಿಗೆ ಕಂಪ್ಯೂಟರ್‌ ನೀಡಲಾಗುವುದು ಎಂದರು.

ಕೋವಿಡ್‌ ಪೀಡಿತರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಜಿಲ್ಲೆಯಲ್ಲಿ 48 ಸಾವಿರ ಕುಟುಂಬಗಳಿಗೆ ವೃದ್ಧಾಪ್ಯ ವೇತನ ಬಿಡುಗಡೆ ಆಗಿಲ್ಲ. ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಒಕ್ಕೂಟದ ವ್ಯವಸ್ಥಾಪಕ ಗೋಪಾಲಯ್ಯ ಇದ್ದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು