ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ–75 ಕಾಮಗಾರಿ ಗುತ್ತಿಗೆಯೇ ಅವೈಜ್ಞಾನಿಕ

ಕೇಂದ್ರ ಸರ್ಕಾರದಿಂದಲೇ ಸಂಪೂರ್ಣ ಅನುದಾನ: ಆದ್ಯತೆ ನೀಡದ ಕಂಪನಿ
Last Updated 23 ಜುಲೈ 2022, 7:51 IST
ಅಕ್ಷರ ಗಾತ್ರ

ಹಾಸನ: ರಾಷ್ಟ್ರೀಯ ಹೆದ್ದಾರಿ–75 ರಲ್ಲಿ ಹಾಸನ ಬೈಪಾಸ್‌ನಿಂದ ಸಕಲೇಶಪುರ ಬೈಪಾಸ್‌ ಹಾಗೂ ಅಲ್ಲಿಂದ ಹೆಗ್ಗದ್ದೆವರೆಗಿನ ಚತುಷ್ಪಥ ಕಾಮಗಾರಿಗೆ ಗುತ್ತಿಗೆ ನೀಡಿರುವ ವಿಧಾನವೇ ಅವೈಜ್ಞಾನಿಕ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಒಂದು ಕಂಪನಿ ದಿವಾಳಿಯಾದ ನಂತರ, ಮತ್ತೊಮ್ಮೆ ಟೆಂಡರ್‌ ಕರೆದು ಬೇರೆ ಕಂಪನಿಗೆ ಗುತ್ತಿಗೆ ನೀಡಬೇಕು. ಆದರೆ, ಇಲ್ಲಿ ಮತ್ತೆ ಟೆಂಡರ್‌ ಕರೆಯದೇ ರಾಜಕಮಲ್‌ ಕಂಪನಿಗೆ ಕಾಮಗಾರಿ ವಹಿಸಲಾಗಿದೆ ಎಂದು ಜಿಲ್ಲೆಯ ಶಾಸಕರು, ಸಂಸದರೇ ಹೇಳುತ್ತಿದ್ದಾರೆ.

ಹೆದ್ದಾರಿ ಇಲಾಖೆಯಿಂದ ಮೂರು ರೀತಿಯ ಗುತ್ತಿಗೆ ನೀಡಲಾಗುತ್ತಿದೆ. ಮೊದಲನೇಯದ್ದು ಸಂಪೂರ್ಣ ಖಾಸಗಿ ಕಂಪನಿಯೇ ಅನುದಾನ ಹಾಕಿ ಕಾಮಗಾರಿ ನಡೆಸಲಿದ್ದು, ನಂತರ ಟೋಲ್‌ ಮೂಲಕ ಹಣ ಸಂಗ್ರಹಿಸುತ್ತದೆ. ಎರಡನೇಯದ್ದು ಇಪಿಸಿ (ಎಂಜಿನಿಯರಿಂಗ್, ಪ್ರೊಕ್ಯುರ್‌ಮೆಂಟ್ ಆಂಡ್ ಕನ್‌ಸ್ಟ್ರಕ್ಷನ್‌) ಮಾದರಿ. ಇಲ್ಲಿ ಶೇ 100 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ಮೂರನೇಯದ್ದು ಹೈಬ್ರಿಡ್ ಮಾದರಿ ಇದರಲ್ಲಿ ಶೇ 60 ಗುತ್ತಿಗೆದಾರ ಕಂಪನಿ, ಶೇ 40 ಕೇಂದ್ರ ಸರ್ಕಾರ ಅನುದಾನ ಭರಿಸುತ್ತವೆ.

ಚನ್ನರಾಯಪಟ್ಟಣದವರೆಗಿನ ಕಾಮಗಾರಿಯನ್ನು ಮೊದಲನೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ್ದು, ಗುತ್ತಿಗೆ ಕಂಪನಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಟೋಲ್ ಸಂಗ್ರಹ ಆರಂಭಿಸಿದೆ. ಅರಸೀಕೆರೆ ಭಾಗದ ಹೆದ್ದಾರಿ ಕಾಮಗಾರಿಯನ್ನು ಹೈಬ್ರಿಡ್ ಮಾದರಿಯ ಗುತ್ತಿಗೆ ನೀಡಲಾಗಿದೆ. ಅಲ್ಲಿಯೂ ಕುಂಟುತ್ತಲೇ ಸಾಗಿದೆ. ಇನ್ನು ಹಾಸನ ಬೈಪಾಸ್‌ನಿಂದ ಹೆಗ್ಗದ್ದೆವರೆಗಿನ ಕಾಮಗಾರಿ ಇಪಿಸಿ ಮಾದರಿಯದ್ದಾಗಿದೆ.

ಗುತ್ತಿಗೆ ಹಾಗೂ ದಿನಗೂಲಿ ಮಾದರಿಯ ಕೆಲಸ ಇದಾಗಿದ್ದು, ಗುತ್ತಿಗೆ ನೀಡಿದಲ್ಲಿ ಗುತ್ತಿಗೆದಾರ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತಾರೆ. ಆದರೆ, ದಿನಗೂಲಿಯಲ್ಲಿ ದಿನ ಕಳೆದಂತೆ ಕಾರ್ಮಿಕರಿಗೆ ಸಂಬಳ ಬರುತ್ತದೆ. ಈ ಹೆದ್ದಾರಿಯ ಕತೆಯೂ ಅದೇ ರೀತಿಯಾಗಿದೆ. ಇದರಿಂದಾಗಿ ಐದು ವರ್ಷ ಕಳೆದರೂ ಹೆದ್ದಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನುವ ಆರೋಪ ಜನಪ್ರತಿನಿಧಿಗಳದ್ದು.

ಕಂಪನಿ ದಿವಾಳಿ: 2017 ರ ಮಾರ್ಚ್‌ನಲ್ಲಿ ಈ ಕಾಮಗಾರಿಯನ್ನು ಐಸೋಲೆಕ್ಸ್ ಕಂಪನಿಗೆ ವಹಿಸಲಾಗಿತ್ತು. ಒಟ್ಟು ₹576 ಕೋಟಿ ಮೊತ್ತದೆ ಯೋಜನೆಯನ್ನು ಎರಡು ವರ್ಷದಲ್ಲಿ ಪೂರ್ಣ ಮಾಡಬೇಕಿತ್ತು. ಆದರೆ ಐಸೋಲೆಕ್ಸ್‌ ಕಂಪನಿ ಕೇವಲ ₹3.30 ಕೋಟಿ ಮೊತ್ತದ ಕಾಮಗಾರಿ ನಿರ್ವಹಿಸಿದ್ದು, ಅನುದಾನ ಬಿಡುಗಡೆಯಾಗಿದೆ. ನಂತರ ಕಂಪನಿ ದಿವಾಳಿಯಾಗಿದ್ದು, ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ.

ಅದಾದ ಬಳಿದ 2020 ರ ಮಾರ್ಚ್‌ 6 ರಂದು ರಾಜ್‌ಕಮಲ್‌ ಕಂಪನಿಗೆ ಕಾಮಗಾರಿಯನ್ನು ವಹಿಸಲಾಯಿತು. ಆದರೆ, ಕಾಮಗಾರಿಯ ಮೊತ್ತ ಮಾತ್ರ ₹576 ಕೋಟಿಯೇ ಉಳಿದಿದೆ. ಅಲ್ಲಿಂದ ಇಲ್ಲಿಯವರೆಗೆ ₹303 ಕೋಟಿ ಮೊತ್ತದ ಕಾಮಗಾರಿ ನಿರ್ವಹಿಸಿರುವುದಾಗಿ ಹೆದ್ದಾರಿ ಅಧಿಕಾರಿಗಳು ತಿಳಿಸಿದ್ದು, ಈಗಾಗಲೇ ಅನುದಾನವನ್ನು ಕಂಪನಿಗೆ ನೀಡಲಾಗಿದೆ.

ಆದರೆ, ₹300 ಕೋಟಿ ವೆಚ್ಚದ ಕಾಮಗಾರಿ ಆಗಿದೆಯೇ ಎನ್ನುವುದು ಮಾತ್ರ ಭೌತಿಕವಾಗಿ ಗೋಚರ ಆಗುತ್ತಿಲ್ಲ. ಕೇವಲ ದಾಖಲೆಗಳಲ್ಲಿ ಕಾಮಗಾರಿ ಆದಂತೆ ಕಾಣುತ್ತಿದೆ. ಒಂದು ಬದಿಯ ಕಾಮಗಾರಿ ಪೂರ್ಣವಾಗಿದ್ದರೆ, ಸಾಕಷ್ಟು ಅನುಕೂಲ ಆಗುತ್ತಿತ್ತು ಎನ್ನುವುದು ಜನರ ಮಾತು.

ಬೆಂಗಳೂರು–ಮಂಗಳೂರು ಹೆದ್ದಾರಿ ಕಾಮಗಾರಿ

ಬೆಂಗಳೂರು–ಮಂಗಳೂರು ಚತುಷ್ಪಥ ಕಾಮಗಾರಿಗೆ 2007 ರಲ್ಲಿಯೇ ಆಗಿನ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. 2007 ರಲ್ಲಿ ಆಗಿ ಕೇಂದ್ರ ಹೆದ್ದಾರಿ ಸಚಿವ ಎ. ರಾಜಾ ಅವರು ₹2,700 ಕೋಟಿ ವೆಚ್ಚದಲ್ಲಿ ಬೆಂಗಳೂರು–ಹಾಸನ 200 ಕಿ.ಮೀ. ಹೆದ್ದಾರಿ ಕಾಮಗಾರಿಗೆ ಮಂಜೂರಾತಿ ನೀಡಿದ್ದರು.

ನಂತರ ಆಸ್ಕರ್ ಫರ್ನಾಂಡಿಸ್ ಹೆದ್ದಾರಿ ಸಚಿವರಾಗಿದ್ದಾಗ ಹಾಸನ–ಬಿ.ಸಿ. ರೋಡ್‌ ಕಾಮಗಾರಿಗೆ ಅನುಮೋದನೆ ನೀಡಿದ್ದರು. ಬೆಂಗಳೂರಿನಿಂದ ಹಾಸನದವರೆಗೆ ಚತುಷ್ಪಥ ಕಾಮಗಾರಿ ಪೂರ್ಣವಾಗಿದೆ. ಹಾಸನ– ಮಂಗಳೂರು ನಡುವಿನ ಹಾಸನ ಬೈಪಾಸ್– ಹೆಗ್ಗದ್ದೆವರೆಗೆ ಒಂದು ಪ್ಯಾಕೇಜ್, ಗುಂಡ್ಯದಿಂದ ಪೆರಿಯಾಶಾಂತಿವರೆಗೆ ಇನ್ನೊಂದು ಪ್ಯಾಕೇಜ್‌ನಲ್ಲಿ ಗುತ್ತಿಗೆ ವಹಿಸಲಾಗಿದೆ. 6 ತಿಂಗಳು ಹೆದ್ದಾರಿ ಬಂದ್‌ ಮಾಡಿ, ಮಧ್ಯದ ಶಿರಾಡಿ– ಗುಂಡ್ಯದವರೆಗೆ ಕಾಂಕ್ರೀಟ್‌ ರಸ್ತೆಯನ್ನು ನಿರ್ಮಿಸಲಾಗಿದೆ.

₹317 ಕೋಟಿ ಗುಂಡ್ಯ– ಪೆರಿಯಾಶಾಂತಿ ರಸ್ತೆ ಕಾಮಗಾರಿಯೂ ಇಪಿಸಿ ಮಾದರಿಯಲ್ಲಿಯೇ ಇದ್ದು, ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಆದರೆ, ಹಾಸನ ಬೈಪಾಸ್‌ನಿಂದ ಹೆಗ್ಗದ್ದೆವರೆಗಿನ ಕಾಮಗಾರಿ ಇನ್ನೂ ವೇಗವನ್ನು ಪಡೆಯುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT