ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರದಿಂದ ಸ್ಪರ್ಧಿಸಲ್ಲ

ಪ್ರಚಾರಕ್ಕೆ ಬಾರದ ರಾಜ್ಯ ನಾಯಕರು : ಬಿ.ಪಿ.ಮಂಜೇಗೌಡ ಬೇಸರ
Last Updated 27 ಜನವರಿ 2021, 15:28 IST
ಅಕ್ಷರ ಗಾತ್ರ

ಹಾಸನ: 2023ರ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದು, ಹೊಳೆನರಸೀಪುರ ಕ್ಷೇತ್ರಕ್ಕೆ ಯಾವ ಕಾರಣಕ್ಕೂ ಹೋಗುವುದಿಲ್ಲ. ಈ ಸಂಬಂಧ ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿದ್ದೇನೆ ಎಂದು ಕಾಂಗ್ರೆಸ್‌ ಮುಖಂಡ ಬಿ.ಪಿ. ಮಂಜೇಗೌಡ ಹೇಳಿದರು.

ಹೊಳೆನರಸೀಪುರದ 418 ಹಳ್ಳಿಗಳನ್ನು ಸುತ್ತಾಡಿದ್ದೇನೆ. ಅಲ್ಲಿನ ಜನರ ಸಾಮಾಜಿಕ ಸ್ವಾತಂತ್ರ‍್ಯವನ್ನು
ಕಿತ್ತುಕೊಳ್ಳಲಾಗಿದೆ. ಮತಗಟ್ಟೆ ಬಳಿ ಅವರ (ಜೆಡಿಎಸ್) ವ್ಯಕ್ತಿಗಳು ಕೈ ಕಟ್ಟಿ ನಿಂತಿರುತ್ತಾರೆ. ಯಾರು ಯಾರಿಗೆ
ಮತ ಹಾಕಿದ್ದಾರೆಂಬುದನ್ನು ಪರಿಶೀಲಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು
ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಳೆದ ಚುನಾವಣೆಯಲ್ಲಿ ಹೊಳೆನರಸೀಪುರದಿಂದ ಸ್ಪರ್ಧಿಸಿದ ವೇಳೆ ರಾಜ್ಯ ನಾಯಕರು ಪ್ರಚಾರಕ್ಕೆ ಬರಲಿಲ್ಲ. ಆದ್ದರಿಂದ ಆ ಕ್ಷೇತ್ರ ಬಿಟ್ಟು ಹಾಸನದಿಂದ ಸ್ಪರ್ಧಿಸಲು ಬಯಸಿದ್ದೇನೆ. ಪಕ್ಷ ಸಂಘಟನೆಗೆ ಕಾಂಗ್ರೆಸ್ ವರಿಷ್ಠರು ಸೂಚಿಸಿದ್ದು, ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದರು.

ಹೊಳೆನರಸೀಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕದಿದ್ದರೆ
ಮುಂದೆ ಸಂಕಷ್ಟ ಎದುರಿಸಬೇಕಾಗುತ್ತದೆ. ಶಾಸಕ ಎಚ್.ಡಿ. ರೇವಣ್ಣ ಅವರ ಬೆಂಬಲಿತರು ಕಾನೂನು ಮೀರಿ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಹೊಳೆನರಸೀಪುರ ತಾಲ್ಲೂಕಿನ ಬಸವನಾಯಕನಹಳ್ಳಿ, ಹಂಗರಹಳ್ಳಿ, ನ್ಯಾಮನಹಳ್ಳಿ, ಮಲ್ಲಪನಹಳ್ಳಿ, ಹಾಸನ
ತಾಲ್ಲೂಕಿನ ಕಟ್ಟಾಯ, ಹನುಮಂತಪುರ ವ್ಯಾಪ್ತಿಯಲ್ಲಿ ಹತ್ತಾರು ಕಲ್ಲು ಕ್ವಾರಿಗಳಿವೆ. ಹೇಮಾವತಿ ಜಲಾಶಯ
ಸುತ್ತಲಿನ 20 ಕಿ.ಮೀ. ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಸಿಡಿಮದ್ದುಗಳ ಸ್ಫೋಟದಿಂದ ಡ್ಯಾಂಗೆ
ಹಾನಿಯಾಗುವ ಸಾಧ್ಯತೆಯಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಅವನತಿ ಹಾದಿ ಹಿಡಿದಿದೆ ಎಂಬ ಆರೋಪ ಸುಳ್ಳು. ಕಾಂಗ್ರೆಸ್‍ಗೆ ಜೆಡಿಎಸ್
ಪೈಪೋಟಿಯೇ ಹೊರತು ಬಿಜೆಪಿಯಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಪಕ್ಷಕ್ಕೆ ಸ್ವಲ್ಪ ಹಿನ್ನಡೆ ಆಗಿದೆ ಎಂದು ವಿಶ್ಲೇಷಿಸಿದರು.

ಜಿಲ್ಲೆಯ ಸಾವಿರಾರು ಸರ್ಕಾರಿ ನೌಕರರು ರೇವಣ್ಣ ಅವರ ತೋಟದ ಮನೆಗೆ ಹೋಗಿ ಊಟ ಮಾಡಿಕೊಂಡು ಬಂದಿದ್ದಾರೆ. ಸರ್ಕಾರದ ಸಂಬಳ ಪಡೆಯುವ ಅಧಿಕಾರಿಗಳು ರಾಜಕೀಯ ನಾಯಕರ ಮರ್ಜಿಯಲ್ಲಿರುವುದು ಒಳ್ಳೆಯದಲ್ಲ. ಇಂತಹ ಪ್ರವೃತ್ತಿಗೆ ಅಂತ್ಯ ಹಾಡಬೇಕು ಎಂದು ಸಲಹೆ ನೀಡಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವಿಶ್ವನಾಥ್, ಕೃಷ್ಣಕುಮಾರ್, ಶಬ್ಬೀರ್, ಅಬ್ದುಲ್ ಹಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT