ರಜೆ ಮೇಲೆ ತೆರಳಲು ಇಒಗೆ ಸೂಚನೆ

ಆಲೂರು: ತಾಲ್ಲೂಕಿನ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ ಅವರನ್ನು ರಜೆ ಮೇಲೆ ತೆರಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜ್ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾ ಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ಆಯಾ ಕಟ್ಟಿನ ಜಾಗದಲ್ಲಿ ಬೇರೂರಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಪಟ್ಟಿ ಸಿದ್ಧಪಡಿಸುವಂತೆ ಆಡಳಿತ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್‌ಗೆ ಸೂಚಿಸಿದರು.
ಪಂಚಾಯಿತಿ ವ್ಯಾಪ್ತಿಗೊಳಪಡುವ ಬಹುತೇಕ ಇಲಾಖೆಗಳ ಪ್ರಗತಿ ಸಾಧನೆ ಶೂನ್ಯ ಎಂದ ಅವರು, ‘ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆಯೂ ತೀವ್ರ ಅಸಮಾಧಾನ’ ವ್ಯಕ್ತಪಡಿಸಿದರು.
‘ಹೈಕೋರ್ಟ್ ಆದೇಶದಂತೆ ವಾರದೊಳಗೆ ಅಭಿವೃದ್ಧಿ ಯೋಜನೆ ಗಳನ್ನು ಪೂರ್ಣಗೊಳಿಸಿ ವರದಿ ನೀಡ ಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ಅನಿವಾರ್ಯ’ ಎಂದು ಎಚ್ಚರಿಸಿದರು.
ನರೇಗಾ ಯೋಜನೆಯಲ್ಲಿ ಭೈರಾಪುರ ಗ್ರಾಮ ಪಂಚಾಯಿತಿ ಪ್ರಗತಿ ಬಗ್ಗೆ ಸಂತಸ ವ್ಯಕ್ತಪಡಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭವ್ಯಾ ಅವರನ್ನು ಅಭಿನಂದಿಸಿದರು.
ತಾಲ್ಲೂಕು ಕೇಂದ್ರದಲ್ಲಿ ಸಭೆ ನಡೆಸಲು ವಿಶಾಲವಾದ ಸಭಾ ಭವನವಿಲ್ಲದಿರುವುದಕ್ಕೆ ಬೇಸರಗೊಂಡ ಸಿಇಒ, ಕೂಡಲೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.