ಗುರುವಾರ , ಮೇ 26, 2022
30 °C

ತಿಂಗಳ ಮೂರನೇ ಶನಿವಾರ ಗ್ರಾಮಗಳಲ್ಲಿ ಅಧಿಕಾರಿಗಳ ವಾಸ್ತವ್ಯ: ಡಿ.ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸರ್ಕಾರದ ಸೂಚನೆಯಂತೆ ಪ್ರತಿ ತಿಂಗಳ ಮೂರನೇ ಶನಿವಾರ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’
ಕಾರ್ಯಕ್ರಮವನ್ನು ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಜಾರಿಗೆ ತರಲಾಗುತ್ತಿದ್ದು, ಫೆ. 20 ರಂದು ಪ್ರತಿ ತಾಲ್ಲೂಕು ವ್ಯಾಪ್ತಿಯ ಒಂದು ಗ್ರಾಮದಲ್ಲಿ ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

ಎರಡು ತಿಂಗಳ ಗ್ರಾಮವಾಸ್ತವ್ಯ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಕಂದಾಯ ಅದಾಲತ್‌ ಮಾದರಿಯಲ್ಲಿ
ಕಾರ್ಯಕ್ರಮ ನಡೆಸಲಾಗುವುದು. ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ, ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ, ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕುಂಚೆ, ಚನ್ನರಾಯಪಟ್ಟಣ ತಾಲ್ಲೂಕಿನ ದಡದಹಳ್ಳಿ, ಅರಕಲಗೂಡು ತಾಲ್ಲೂಕಿನ ದೊಳ್ಳೇನಹಳ್ಳಿ, ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಬೇಲೂರು ತಾಲ್ಲೂಕಿನ ಹನುಮಿಡಿ, ಅಲೂರು ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಏರ್ಪಡಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಈ ಗ್ರಾಮಗಳಲ್ಲಿ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕಂದಾಯ ಇಲಾಖೆ ಸಮಸ್ಯೆ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅಂದು ಬೆಳಿಗ್ಗೆ 10 ರಿಂದ 5ರವರೆಗೆ ಅಧಿಕಾರಿಗಳು ಸಮಸ್ಯೆ ಆಲಿಸುವರು. ಕಾರ್ಯಕ್ರಮಕ್ಕೆ ಒಂದು ವಾರ ಇರುವಾಗಲೇ ಗ್ರಾಮಸ್ಥರು ಸಮಸ್ಯೆ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ, ನಾಡಕಚೇರಿಗೆ ಅರ್ಜಿ ಸಲ್ಲಿಸಬೇಕು. ಬಗೆಹರಿಸಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗುವುದು. ಉಳಿದ ಅರ್ಜಿಗಳ ವಿಲೇವಾರಿಗೆ ಕಾಲಮಿತಿ ನೀಡಲಾಗುವುದು. ಅಂದು ಹೆತ್ತೂರು ಗ್ರಾಮಕ್ಕೆ ನಾನು ಭೇಟಿ ನೀಡಲಿದ್ದು, ಉಳಿದ ಗ್ರಾಮಗಳಿಗೆ ತಹಶೀಲ್ದಾರ್‌, ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ವಿವರಿಸಿದರು.

ಪಹಣಿ, ಪೌತಿ ಖಾತೆ, ಪಿಂಚಣಿ ಸೌಲಭ್ಯ ವಂಚಿತರು, ಸ್ಮಶಾನ ಲಭ್ಯತೆ, ಆಶ್ರಯ ಯೋಜನೆಯಲ್ಲಿ ನಿವೇಶನ, ಆಧಾರ್‌
ಕಾರ್ಡ್, ಪೋಡಿ ಮುಕ್ತ ಗ್ರಾಮ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದರ ಜತೆಗೆ ವಸತಿ ನಿಲಯ, ಶಾಲೆ ಮತ್ತು
ಅಂಗನವಾಡಿಗಳಿಗೆ ಭೇಟಿ ನೀಡಲಾಗುವುದು ಎಂದು ನುಡಿದರು.

ಮಾರ್ಚ್‌ 20ರಂದು ಹಾಸನ ತಾಲ್ಲೂಕಿನ ಬೈಲಹಳ್ಳಿ, ಅರಸೀಕೆರೆ ತಾಲ್ಲೂಕಿನ ಕೋಳಗುಂದ, ಹೊಳೆನರಸೀಪುರ
ತಾಲ್ಲೂಕಿನ ಗುಂಜೇವು, ಚನ್ನರಾಯಪಟ್ಟಣ ತಾಲ್ಲೂಕಿನ ತಾವರೆಕೆರೆ, ಅರಕಲಗೂಡು ತಾಲ್ಲೂಕಿನ ಹಂಪಾಪುರ, ಸಲೇಶಪುರ ತಾಲ್ಲೂಕಿನ ಯಸಳೂರು, ಬೇಲೂರು ತಾಲ್ಲೂಕಿನ ಲಕ್ಕುಂದ, ಆಲೂರು ತಾಲ್ಲೂಕಿನ ವೈ.ಎನ್‌.ಪುರದಲ್ಲಿ ಗ್ರಾಮವಾಸ್ತವ್ಯ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಪ್ರತಿ ತಿಂಗಳು ಜನಸಂಪರ್ಕ ಸಭೆ ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿ ಫೆ. 25ರಂದು ಬೇಲೂರು ತಾಲ್ಲೂಕಿನಲ್ಲಿ ಸಭೆ ಆಯೋಜಿಸಲಾಗಿದೆ. ತಾಲ್ಲೂಕಿನ ಜನರು ಎಲ್ಲ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ, ನಾಡಕಚೇರಿ ಹಾಗೂ ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದರು.

ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ ಗ್ರಾಮಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುವುದು.
ಚುನಾವಣಾ ಆಯೋಗದ ನಿರ್ದೇಶನಕ್ಕೆ ಕಾಯಲಾಗುತ್ತಿದೆ. ನಗರಸಭೆಗೆ ಸೇರ್ಪಡೆಗೊಂಡಿರುವ ಗ್ರಾಮ ಪಂಚಾಯಿತಿ ಆಸ್ತಿ, ಅನುದಾನ ವರ್ಗಾವಣೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ಡಿ.ಸಿ ಹೇಳಿದರು.

ಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಇದ್ದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು