ಶನಿವಾರ, ಮೇ 28, 2022
31 °C
ಒಕ್ಕಲಿಗರ ಸಂಘದ ಚುನಾವಣೆಗೆ ಸಕಲ ಸಿದ್ಧತೆ: ದಯಾನಂದ್

ಮತದಾನಕ್ಕೆ ಸಂಘದ ಗುರುತಿನ ಚೀಟಿ ಕಡ್ಡಾಯ: ದಯಾನಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಸ್ಥಾನಕ್ಕೆ ಡಿ.12 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಸಂಘದ ಗುರುತಿನ ಚೀಟಿ ಕಡ್ಡಾಯ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಕೆ.ದಯಾನಂದ್ ತಿಳಿಸಿದರು.

ಸಂಘದ ಗುರುತಿನ ಚೀಟಿ ಹೊರತು ಪಡಿಸಿ ಬೇರೆ ಯಾವುದೇ ಐಡಿ ಕಾರ್ಡ್ ತಂದರೂ ಮತ ಹಾಕಲು ಮಾಡಲು ಅವಕಾಶ ನೀಡುವುದಿಲ್ಲ. ಒಟ್ಟು 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಜಿಲ್ಲೆಯಲ್ಲಿರುವ 53,076 ಮತದಾರರು ಮೂರು ನಿರ್ದೇಶಕರನ್ನು ಆಯ್ಕೆ ಮಾಡಬೇಕಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮತದಾನಕ್ಕೆ ಅನುಕೂಲವಾಗುವಂತೆ ನಗರ ಹಾಗೂ ಜಿಲ್ಲಾದಾದ್ಯಂತ 107 ಮತಗಟ್ಟೆಗಳನ್ನು ತೆರೆಯಲಾಗಿದೆ. ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು 19,925 ಮತದಾರರಿದ್ದರೆ, ಹಾಸನ ತಾಲೂಕಿನಲ್ಲಿ 16,075, ಅರಕಲಗೂಡು 2915, ಆಲೂರು 1061, ಹೊಳೆನರಸೀಪುರ 2716, ಅರಸೀಕೆರೆ 4053, ಸಕಲೇಶಪುರ 3637 ಮತ್ತು ಬೇಲೂರಿನಲ್ಲಿ 2694 ಮತದಾರರಿದ್ದಾರೆ. ಮತದಾನಕ್ಕಾಗಿ ಚನ್ನರಾಯಪಟ್ಟಣದಲ್ಲಿ 40 ಮತಗಟ್ಟೆ ತೆರೆಯಲಾಗಿದೆ. ಉಳಿದಂತೆ ಹಾಸನ 32, ಹೊಳೆನರಸೀಪುರ, ಬೇಲೂರು ಮತ್ತು ಅರಕಲಗೂಡು ತಲಾ 6, ಅರಸೀಕೆರೆ ಮತ್ತು  ಸಕಲೇಶಪುರದಲ್ಲಿ ತಲಾ 7 ಹಾಗೂ ಆಲೂರಿನಲ್ಲಿ 2 ಮತಕೇಂದ್ರ ತೆರೆಯಲಾಗಿದೆ ಎಂದು ಮಾಹಿತಿ
ನೀಡಿದರು.

ಚುನಾವಣೆ ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತವಾಗಿ ನಡೆಯಲು 10 ಜನ ಸಹಾಯಕ ಚುನಾವಣಾ ಅಧಿಕಾರಿಗಳು ಮತ್ತು ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಚುನಾವಣಾ ಕಾರ್ಯಕ್ಕೆ 500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅರ್ಹ ಮತದಾರರು ನಿರ್ಭಯದಿಂದ ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿ ಹಕ್ಕು ಚಲಾಯಿಸುವಂತೆ ಮನವಿ ಮಾಡಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಮಾರ್ಗಸೂಚಿಯನ್ನೂ ಪಾಲನೆ ಮಾಡಲಾಗುತ್ತಿದೆ. ಒಂದು ವೇಳೆ ಸೋಂಕು ಇರುವ ಮತದಾರರಿದ್ದರೆ ಅವರಿಗೆ ಅವರ ವ್ಯಾಪ್ತಿಯ ಮತಕೇಂದ್ರದಲ್ಲೇ ಸಂಜೆ 4 ರಿಂದ 5 ಗಂಟೆವರೆಗೆ ಪ್ರತ್ಯೇಕ ಮತದಾನದ ವ್ಯವಸ್ಥೆ ಮಾಡಲಾಗಿದ್ದು, ಪಾರದರ್ಶಕ ಚುನಾವಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮತ ಎಣಿಕೆ ಕಾರ್ಯ ಡಿ.15 ರಂದು ಬೆಳಗ್ಗೆ 9 ರಿಂದ ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿಸಿದರು. 

ನೋಡಲ್ ಅಧಿಕಾರಿಗಳಾದ ತೇಜಸ್ವಿನಿ, ಶೀಲಾ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು