ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಖಾಲಿಯಾದ ಮೇಲೆ ಹೇಮೆಯ ಹೊರಹರಿವು ಸ್ಥಗಿತ

Published 20 ಸೆಪ್ಟೆಂಬರ್ 2023, 13:53 IST
Last Updated 20 ಸೆಪ್ಟೆಂಬರ್ 2023, 13:53 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯ ಜೀವನಾಡಿ ಎನಿಸಿರುವ ಗೊರೂರಿನ ಹೇಮಾವತಿ ಜಲಾಶಯದಿಂದ ನೀರು ಹರಿಸುವುದನ್ನು ಬುಧವಾರದಿಂದ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಸುಮಾರು 16 ಟಿಎಂಸಿಯಷ್ಟು ನೀರು ಖಾಲಿಯಾಗಿದ್ದು, ಇದೀಗ ಕೇವಲ 13 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಾಗಿದೆ. ಈ ಹಂತದಲ್ಲಿ ಹೊರಹರಿವು ಸ್ಥಗಿತಗೊಳಿಸಿದ್ದು, ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸ್ಥಿತಿ ಹೇಗಿರಲಿದೆ ಎನ್ನುವ ಆತಂಕ ಜನರನ್ನು ಕಾಡುತ್ತಿದೆ.

ರೈತರು, ಜನಪ್ರತಿನಿಧಿ, ಕನ್ನಡಪರ ಹೋರಾಟಗಾರರ ಎಚ್ಚರಿಕೆ ಹಾಗೂ ನೀರಾವರಿ ಸಲಹಾ ಸಮಿತಿ ನಿರ್ದೇಶನದಂತೆ ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.

ಈ ಬಾರಿಯ ಮುಂಗಾರು ಮಳೆ ವೈಫಲ್ಯದಿಂದಾಗಿ ಜಲಾಶಯ ಭರ್ತಿಯಾಗಿರಲಿಲ್ಲ. ತುಮಕೂರು, ಕೆಆರ್‌ಎಸ್ ಜಲಾಶಯಕ್ಕೆ ಕಾಲುವೆ ಹಾಗೂ ನದಿಗಳ ಮೂಲಕ ನಿರಂತರ ನೀರು ಹರಿಸಲಾಗುತ್ತಿತ್ತು. ನಿತ್ಯ 6ಸಾವಿರ ಕ್ಯುಸೆಕ್‌ ನೀರನ್ನು ಜಲಾಶಯದಿಂದ ಹೊರಗೆ ಬಿಡಲಾಗಿತ್ತು. ಇದರಿಂದಾಗಿ ಜಲಾಶಯದ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದೆ ಎನ್ನುವ ಆರೋಪ ಜಿಲ್ಲೆಯ ರೈತ ಮುಖಂಡರದ್ದು.

ವಿದ್ಯುತ್ ಉತ್ಪಾದನೆ ನದಿಗೆ ಒಟ್ಟು 1300 ಕ್ಯುಸೆಕ್‌ ನೀರನ್ನು ಮಾತ್ರ ಹರಿಸಲಾಗುತ್ತಿದೆ. ಉಸ್ತುವಾರಿ ಸಚಿವ ನೀರಾವರಿ ಸಲಹ ಸಮಿತಿ ಅಧ್ಯಕ್ಷ ಕೆ.ಎನ್ ರಾಜಣ್ಣ ನಿರ್ದೇಶನದ ಮೇರೆಗೆ 2 ದಿನದಿಂದ ನಾಲೆಗಳಿಗೆ ನೀರು ನಿಲ್ಲಿಸಲಾಗಿದೆ.
ಅರುಣ್, ಎಂಜಿನಿಯರ್, ಹೇಮಾವತಿ ಜಲಾಶಯ

ರೈತರ ಬೆಳೆಗಳಿಗೆ ಸಿಗದ ನೀರು, ನದಿಯ ಮೂಲಕ ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಸೇರಿದೆ. ಜಿಲ್ಲೆಯ ರೈತರು ಮಾತ್ರ ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಬೇಕಾಗಿದೆ. ಸದ್ಯಕ್ಕೆ 13 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಾಗಿದ್ದು, ಇರುವ ನೀರನ್ನು ಮುಂದಿನ ಮಳೆಗಾಲದವರೆಗೆ ಪೂರೈಸಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಮುಖಂಡರು ಕೇಳುತ್ತಿದ್ದಾರೆ.

ಜಲಾಶಯದಿಂದ ನೀರನ್ನು ಬೇಕಾಬಿಟ್ಟಿ ಬಿಡಲಾಗುತ್ತಿದೆ. ಯಾವ ಉದ್ದೇಶಕ್ಕೆ ನೀರು ಹರಿಬಿಡಲಾಗಿದೆ? ಎಲ್ಲಿಗೆ ಎಷ್ಟು ಬಿಡಲಾಗುತ್ತಿದೆ ಎಂಬ ಮಾಹಿತಿ ತಿಳಿಯುತ್ತಿಲ್ಲ ಎಂದು ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದ್ದರು. ಜಲಾಶಯದಲ್ಲಿ ನೀರು ಖಾಲಿಯಾಗುತ್ತಿದ್ದು, ಯಾವುದೇ ಕಾರಣಕ್ಕೂ ಹೇಮಾವತಿ ಜಲಾಶಯದ ಮೂಲಕ ಕೆಆರ್‌ಎಸ್‌ಗೆ ನೀರು ಹರಿಸದಂತೆ  ಒತ್ತಾಯಿಸಿದ್ದರು. ಇತ್ತೀಚಿಗೆ ರೈತ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಹೇಮಾವತಿ ಜಲಾಶಯದಿಂದ ನೀರು ಹರಿಸುವುದನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದರು.

ಜಿಲ್ಲೆಯ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೇಮಾವತಿ ನೀರನ್ನು ತಮಿಳುನಾಡಿಗೆ ಹರಿಸುವುದು ಸರಿಯಲ್ಲ. ಜಲಾಶಯದ ಹೊರಹರಿವು ಸ್ಥಗಿತಗೊಳಿಸದಿದ್ದರೆ ಮುತ್ತಿಗೆ ಹಾಕಲಾಗುವುದು.
ಮನು ಕುಮಾರ್, ಕರವೇ ಜಿಲ್ಲಾ ಘಟಕದ ಅಧ್ಯಕ್ಷ

ಇದರ ಬೆನ್ನಲ್ಲೇ ಎರಡು ದಿನದಿಂದ ಹೇಮಾವತಿ ಜಲಾಶಯದಿಂದ ಹೊರಹರಿವು ನಿಲ್ಲಿಸಲಾಗಿದೆ. ಸಕಲೇಶಪುರ, ಮೂಡಿಗೆರೆ ಸುತ್ತ ಕಳೆದ ಎರಡು ದಿನದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ 5ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ.

ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ 2922 ಅಡಿಗಳಷ್ಟಿದ್ದು,  ಬುಧವಾರ 2896.40 ಅಡಿಗಳಷ್ಟು ನೀರಿನ ಸಂಗ್ರಹವಿದೆ. 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಬುಧವಾರ 17.65 ಟಿಎಂಸಿ ನೀರು ಸಂಗ್ರಹವಿದ್ದು 13.283 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT