ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಉಳಿವಿಗೆ ಶ್ರಮಿಸಿದ ನಾಡಪ್ರಭು

ಜಲಮೂಲ ಉಳಿಸಿ ರಾಜ್ಯಕ್ಕೆ ಕೊಡುಗೆ ನೀಡಿದ ಕೆಂಪೇಗೌಡರು: ಶಾಸಕ ಪ್ರೀತಂ
Last Updated 27 ಜೂನ್ 2019, 14:30 IST
ಅಕ್ಷರ ಗಾತ್ರ

ಹಾಸನ: ಶತಮಾನಗಳ ಹಿಂದೆಯೇ ಪರಿಸರ ಉಳಿಸಲು ಕೆಂಪೇಗೌಡರು ಶ್ರಮಿಸಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾಭವನದಲ್ಲಿ ಆಯೋಜಿಸಿದ್ದ ನಾಡ ಪ್ರಭು ಕೆಂಪೇಗೌಡ ಜಯಂತಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧುನೀಕರಣ, ನಗರೀಕರಣಕ್ಕೆ ಮಾರು ಹೋಗಿ ಗೌಡರ ಕಲ್ಪನೆಯನ್ನು ಅಳಿಸುವ ನಿಟ್ಟಿನಲ್ಲಿ ಮನುಷ್ಯ ಪರಿಸರ ನಾಶಕ್ಕೆ ಮುಂದಾಗುತ್ತಿದ್ದಾನೆ. ಆದರೆ, ಅಂದಿನ ಕಾಲದಲ್ಲೇ ಅನೇಕ ಕೆರೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಪರಿಸರ ಉಳಿವಿಗೆ ಶ್ರಮಿಸಿದ್ದರು ಎಂದು ನುಡಿದರು.

ಕೆಂಪೇಗೌಡರ ಜಯಂತಿ ಕೇವಲ ಆಚರಣೆಯಾಗಬಾರದು. ಅವರ ಆದರ್ಶ ಪಾಲಿಸುವ ಮೂಲಕ ಪರಿಸರ ಮುಖಿ ಹಾಗೂ ಸಮಾಜಮುಖಿ ಕೆಲಸ ಮಾಡಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ಮಾತನಾಡಿ, ನವೀನ ಮಾದರಿಯಲ್ಲಿ ಬೆಂಗಳೂರು ನಿರ್ಮಿಸಿ ಉಳಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ. ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿದ ಅವರು ಕೆರೆ, ಕಲ್ಯಾಣಿ ಸೇರಿದಂತೆ ಅನೇಕ ಜಲ ಮೂಲಗಳನ್ನು ಉಳಿಸುವ ಮೂಲಕ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ, ಶತಮಾನಗಳ ಹಿಂದೆಯೇ ನವ ಬೆಂಗಳೂರು ನಿರ್ಮಿಸಿ ಇಡೀ ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಉತ್ತಮ ರಾಜ್ಯಧಾನಿ ಕಟ್ಟಿ ಕೊಟ್ಟವರು ಗೌಡರು ಎಂದರು.

ಶ್ವೇತಾ ದೇವರಾಜ್ ನಾಡಪ್ರಭು ಕೆಂಪೇಗೌಡ ಪುಸ್ತಕ ಬಿಡುಗಡೆ ಮಾಡಿದರು. ನಾಡ ಪ್ರಭು ಕೆಂಪೇಗೌಡ ರಂಗಭೂಮಿ ಕಲಾವಿದರ ಕುರು ಪಾಂಡವರ ಸಂಗ್ರಾಮ ಎಂಬ ಪೌರಾಣಿಕ ನಾಟಕ ಪ್ರದರ್ಶಿಸಿದರು.

ವಿಶ್ರಾಂತ ಪ್ರಾಧ್ಯಾಪಕ ಮಳಲಿ ವಸಂತ್ ಕುಮಾರ್ ಅವರು ನಾಡ ಪ್ರಭು ಕೆಂಪೇಗೌಡ ಅವರ ಜೀವನ ಕುರಿತು ಉಪನ್ಯಾಸ ನೀಡಿ, ಪ್ರತಿಯೊಬ್ಬರು ಅವರ ಪರಿಸರ ಹಾಗೂ ಸಾಮಾಜಿಕ ಕಾಳಜಿಯನ್ನು ಅರಿತು ಬಾಳೋಣ ಎಂದರು.

ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್‌.ಮುದ್ದೇಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ರಾಜೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಿಂಗೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎನ್ ಕುಂಬಾರ ಭಾಗವಹಿಸಿದ್ದರು.

ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮೆರವಣಿಗೆಗೆ ಶಾಸಕ ಪ್ರೀತಂ ಜೆ ಗೌಡ ಅವರು ಕೆಂಪೇಗೌಡರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿ ಮೆರಗು ಹೆಚ್ಚಿಸಿದವು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಪಿ. ಸ್ವರೂಪ್, ಉಪ ವಿಭಾಗಾಧಿಕಾರಿ ಎಚ್.ಎಲ್ ನಾಗರಾಜ್, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT