ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಿ ಹತ್ಯೆಗೆ ₹10 ಲಕ್ಷ ಸುಪಾರಿ: ಪತ್ನಿ ಸೇರಿ ಏಳು ಮಂದಿ ಬಂಧನ

ಗ್ರಾನೈಟ್‌ ಉದ್ಯಮಿ ಅಪ್ಪಣ್ಣಗೌಡ ಕೊಲೆ
Last Updated 31 ಮೇ 2019, 13:22 IST
ಅಕ್ಷರ ಗಾತ್ರ

ಹಾಸನ: ತಣ್ಣೀರು ಹಳ್ಳದ ಸುಭಾಶ್ ನಗರ ಬಡಾವಣೆಯ ಗ್ರಾನೈಟ್ ಉದ್ಯಮಿ ಅಪ್ಪಣ್ಣಗೌಡ ಕೊಲೆ ಪ್ರಕರಣವನ್ನು ನಗರ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಹತ್ಯೆಗೆ ಸುಪಾರಿ ನೀಡಿದ ಪತ್ನಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.

ಆಸ್ತಿ, ಗ್ರಾನೈಟ್ ಫ್ಯಾಕ್ಟರಿ ಮತ್ತು ಕಲ್ಲು ಕೋರೆಯ ಆಸೆಗಾಗಿ ಮೊದಲ ಪತ್ನಿ ವಿಜಯಾ ₹10 ಲಕ್ಷಕ್ಕೆ ಸುಪಾರಿ ಕೊಟ್ಟು ಪತಿಯನ್ನು ಕೊಲ್ಲಿಸಿದ್ದಳು ಎಂಬ ಸಂಗತಿ ಪೊಲೀಸ್‌ ತನಿಖೆಯಿಂದ ಬಹಿರಂಗವಾಗಿದೆ.

ಈ ಸಂಬಂಧ ಅಪ್ಪಣ್ಣಗೌಡ ಪತ್ನಿ ವಿಜಯಾ, ಅರಕಲಗೂಡು ತಾಲ್ಲೂಕಿನ ಕಡವಿನಹೊಸಳ್ಳಿ ಗ್ರಾಮದ ಕಾರು ಚಾಲಕ ಸುನಿಲ್‌ ಕುಮಾರ್‌, ಹೆಗತ್ತೂರು ಗ್ರಾಮದ ಸುನಿಲ್‌, ಹೊಡೆನೂರು ಗ್ರಾಮದ ಪುನೀತ್, ಶಂಭುನಾಥಪುರ ಗ್ರಾಮದ ಪುಟ್ಟರಾಜು, ಹಾಸನದ ವಿಜಯನಗರ ಬಡಾವಣೆಯ ರಾಘವೇಂದ್ರ, ಚನ್ನರಾಯಪಟ್ಟಣದ ಲಾರಿ ಚಾಲಕ ರಮೇಶ್‌ ಅವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಆಯುಧ, ವಾಹನ, ₹ 56 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

‘ಕಲ್ಲು ಕೋರೆ, ಗ್ರಾನೈಟ್ ಫ್ಯಾಕ್ಟರಿ ಮತ್ತು ಕೋಟಿ ಬೆಲೆ ಬಾಳುವ ಆಸ್ತಿಯಲ್ಲಿ ಎರಡನೇ ಪತ್ನಿಗೂ ಪಾಲು ಹೋಗಲಿದೆ ಎಂಬ ಕಾರಣಕ್ಕೆ ವಿಜಯಾ, ತನಗೆ ಆಸ್ತಿ ಉಳಿಯಬೇಕೆಂದು ಎರಡು ವರ್ಷದ ಹಿಂದೆ ಅಪ್ಪಣ್ಣಗೌಡನಿಗೆ ಕಾರು ಚಾಲಕನಾಗಿದ್ದ ಸುನಿಲ್ ಕುಮಾರ್ ಹಾಗೂ ಸುನಿಲ್‌ ಎಂಬುವರಿಗೆ ₹ 10 ಲಕ್ಷಕ್ಕೆ ಸುಪಾರಿ ನೀಡಿದ್ದಳು. ಮುಂಗಡವಾಗಿ ₹ 5 ಲಕ್ಷ ನೀಡಿ, ಉಳಿದ ಹಣವನ್ನು ಕೆಲಸ ಮಾಡಿದ ಬಳಿಕ ನೀಡುವುದಾಗಿ ಹೇಳಿದ್ದಳು’ ಎಂದು ಸುದ್ದಿಗೋಷ್ಠಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಚೇತನ್‌ ಸಿಂಗ್ ರಾಥೋರ್‌ ಮಾಹಿತಿ ನೀಡಿದರು.

‘ಅಲ್ಲದೇ ಕೆಲ ತಿಂಗಳ ಹಿಂದೆಯೇ ಪತಿ ಹತ್ಯೆಗೆ ಪುಟ್ಟರಾಜು, ರಾಘವೇಂದ್ರ, ರಮೇಶ್‌ ಎಂಬುವರಿಗೂ ಸುಪಾರಿ ಕೊಟ್ಟಿದ್ದಳು. ಆದರೆ, ಅವರು ಹಣ ಪಡೆದುಕೊಂಡು ಕೆಲಸ ಮಾಡಿರಲಿಲ್ಲ. ಅದೇ ಕಾರಣಕ್ಕೆ ಮೇ 15 ರಂದು ತಂತ್ರಗಾರಿಕೆ ರೂಪಿಸಿ, ತಾನು ನೀಡಿದ ಸೂಚನೆಯಂತೆ ಅಂದು ಸಂಜೆಯೇ ಪ್ರಮುಖ ಆರೋಪಿಗಳಾದ ಸುನಿಲ್ ಕುಮಾರ್ ಮತ್ತು ಸುನಿಲ್ ಮನೆ ಒಳಗಡೆ ಬಂದು ಅಡಗಿ ಕುಳಿತಿದ್ದರು. ವಿಜಯಾ ಸಹ ಅದೇ ಮನೆಯ ಮೊದಲ ಮಹಡಿಯಲ್ಲಿ ವಾಸವಿದ್ದಳು. ಮನೆಯ ಕೀ ಇರುವಿಕೆ ಬಗ್ಗೆ ತಿಳಿದಿದ್ದ ಆರೋಪಿಗಳು ತಾವು ಒಳಗಡೆ ಹೋದ ನಂತರ ಕೀಯನ್ನು ಇದ್ದ ಜಾಗದಲ್ಲೇ ಇಟ್ಟಿದ್ದರು’ ಎಂದರು.

ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಮನೆಗೆ ಬಂದ ಅಪ್ಪಣ್ಣಗೌಡ ತಾನಿಟ್ಟಿದ್ದ ಕೀ ಬಳಸಿ ಮನೆ ಒಳ ಹೋಗಿ ಎಂದಿನಂತೆ ಮಲಗಿದ್ದರು. ಮೊದಲು ದೊಣ್ಣೆಯಿಂದ ಹೊಡೆದು ನಂತರ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಅಪ್ಪಣ್ಣಗೌಡ ಇತ್ತೀಚೆಗೆ ಬೆಂಗಳೂರಿನಲ್ಲಿ ವಿಜಯಾಗೆ ಒಂದೂವರೆ ಕೋಟಿ ಕೊಟ್ಟು ಮನೆ ಕೊಡಿಸಿದ್ದರು. ತಾನು ರೂಪಿಸುವ ಕೊಲೆ ಸಂಚು ಬಯಲಾಗಬಾರದು ಎಂದು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅನ್ನು ಕೃತ್ಯ ನಡೆಯುವ ಹತ್ತು ದಿನ ಹಿಂದೆ ತೆಗೆಸಿದ್ದಳು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT