ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಅವಧಿ ವೇತನ ಪಾವತಿಸಿ

ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಜಿಲ್ಲಾಧಿಕಾರಿ ಕಚೇರಿ ಚಲೋ
Last Updated 24 ಸೆಪ್ಟೆಂಬರ್ 2020, 14:22 IST
ಅಕ್ಷರ ಗಾತ್ರ

ಹಾಸನ: ‘ಲಾಕ್‍ಡೌನ್ ಅವಧಿಯ ವೇತನವನ್ನು ಕಾರ್ಮಿಕರಿಗೆ ಪೂರ್ಣವಾಗಿ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಗುರುವಾರ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಚಲೋ ನಡೆಸಿದರು.

ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೂ ಗುರುವಾರ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೋವಿಡ್ ಬಂದು ಪ್ರತ್ಯೇಕ ವಾಸದಲ್ಲಿರುವ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಇಲಾಖೆಯಲ್ಲಿರುವ ಅರ್ಜಿಗಳನ್ನು ತ್ವರಿತವಾಗಿ ಸಂಧಾನ ಸಭೆ ನಡೆಸಿ, ಇತ್ಯರ್ಥ ಮಾಡಿ, ಪರಿಹಾರ ದೊರಕಿಸಿಕೊಡಬೇಕು. ಲಾಕ್‍ಡೌನ್ ಆರ್ಥಿಕ ಹಿಂಜರಿತ ನೆಪದಲ್ಲಿ ಕಾರ್ಮಿಕರ ವಜಾ, ವರ್ಗಾವಣೆ, ವೇತನ ಒಪ್ಪಂದದಲ್ಲಿನ ವೇತನ ಹೆಚ್ಚಳ ಮುಂದೂಡಿಕೆ ಕ್ರಮಗಳನ್ನು ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು.

‘ಕೋವಿಡ್-19 ಲಾಕ್‍ಡೌನ್‍ನಿಂದ ತೊಂದರೆಗೆ ಸಿಲುಕಿರುವ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಹಾಗೂ ಕಾರ್ಮಿಕ ಕ್ಷೇತ್ರ ಪುನಶ್ಚೇತನಕ್ಕೆ ಪರ್ಯಾಯ ಕ್ರಮ ಕೈಗೊಳ್ಳಬೇಕು.ಆರು ತಿಂಗಳಿಂದ ದೇಶದಾದ್ಯಂತ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.ಸೋಂಕಿನ ಭೀಕರತೆಯಿಂದ ಜನರು ಮೃತಪಟ್ಟಿರುವುದು ಮಾತ್ರವಲ್ಲದೆ ಹಸಿವಿನಿಂದಲೂ ಸಾಯುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಶೇಕಡಾ 80ರಷ್ಟು ಸಂಘಟಿತ ಕಾರ್ಮಿಕರಿಗೆ ಲಾಕ್‍ಡೌನ್ ಕಾಲಾವಧಿಯ ಪೂರ್ಣ ವೇತನ ಸಿಕ್ಕಿಲ್ಲ. ಗ್ರಾಮ ಪಂಚಾಯಿತಿ, ಅಂಗನವಾಡಿ, ಬಿಸಿಯೂಟ ನೌಕರರಿಗೆ ಹಲವು ತಿಂಗಳ ವೇತನ ಬಾಕಿ ಉಳಿದಿದೆ. ಪ್ಲಾಂಟೇಷನ್ ಕಾರ್ಮಿಕರಿಗೆ ವೇತನ ಮತ್ತು ಬೋನಸ್ ಕಡಿತಗೊಳಿಸಲಾಗಿದೆ. ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರು, ಟ್ರೈನಿಗಳು ಮುಂತಾದ ಉದ್ಯೋಗ ಭದ್ರತೆಯಿಲ್ಲದ ಶೇಕಡಾ 70ರಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕೈಗಾರಿಕಾ ಕಾರ್ಮಿಕರು ಸಹ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇಎಸ್‍ಐ ವ್ಯಾಪ್ತಿಯ ಸೋಂಕಿತ ಕಾರ್ಮಿಕರಿಗೆ 28 ದಿನಗಳ ವೇತನ ಸಹಿತ ರಜೆ ಮತ್ತು ಕ್ವಾರಂಟೈನ್ ಕಾಲಾವಧಿಯ ವೇತನ ನೀಡಲಾಗುತ್ತಿದೆ. ಆದರೆ, ಇಎಸ್‍ಐ ವ್ಯಾಪ್ತಿಯಿಂದ ಹೊರಗಿರುವ ಕಾರ್ಮಿಕರಿಗೆ ಈ ಅವಕಾಶವು ಲಭ್ಯವಿಲ್ಲ. ಆದ್ದರಿಂದ ಹೊರಗಿರುವವರಿಗೂ ಸೌಲಭ್ಯವನ್ನು ವಿಸ್ತರಿಸಿ ದುಡಿಯುವ ಜನರಿಗೆ ಸಹಕಾರಿಯಾಗಬೇಕು’ ಎಂದು ಒತ್ತಾಯಿಸಿದರು.

‘ಕೋವಿಡ್ ನಿಯಂತ್ರಣ ಮತ್ತು ಆರೋಗ್ಯ ಸೇವೆಯಲ್ಲಿ ತೊಡಗಿರುವ ಕೋವಿಡ್ ಸೇನಾನಿಗಳಾದ ವೈದ್ಯರು, ಶುಶ್ರೂಷಕಿಯರು, ವೈದ್ಯಕೀಯ, ಅರೆವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿ, ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು, ಮುನ್ಸಿಪಾಲ್ ಹಾಗೂ ಗ್ರಾಮ ಪಂಚಾಯಿತಿ ನೌಕರರಿಗೆ ಸುರಕ್ಷತಾ ಪರಿಕರ ಹಾಗೂ ಸೂಕ್ತ ವೇತನ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಗ್ರಾಮ ಪಂಚಾಯಿತಿ ನೌಕರರ ₹382 ಕೋಟಿ ವೇತನ ಶೀಘ್ರ ಬಿಡುಗಡೆ ಮಾಡಬೇಕು. ಕೆಎಸ್‍ಆಆರ್‌ಟಿಸಿ ನೌಕರರು, ವಸತಿ ಶಾಲೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬಾಕಿ ವೇತನ ಕೂಡಲೇ ಪಾವತಿಸಬೇಕು’ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಉಪಾಧ್ಯಕ್ಷೆ ಇಂದಿರಮ್ಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಖಜಾಂಚಿ ಜಿ.ಪಿ. ಸತ್ಯನಾರಾಯಣ, ಜಿಲ್ಲಾ ಕಾರ್ಯದರ್ಶಿ ಅರವಿಂದ್, ಕಾರ್ಯದರ್ಶಿ ಸೌಮ್ಯ, ದಲಿತ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ ಎಂ.ಜಿ. ಪೃಥ್ವಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ ಕುಮಾರ್‌, ಮುಖಂಡರಾದ ಕೆ.ಟಿ. ಹೊನ್ನೇಗೌಡ, ಪ್ರಕಾಶ್‌, ಜಯಂತಿ, ಉಷಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT