ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ ಲೈಂಗಿಕ ದೌರ್ಜನ್ಯ ಪ್ರಕರಣ: ಹಾಸನ ಚಲೋ ಪ್ರತಿಭಟನೆಗೆ ಜನಸಾಗರ

Published 30 ಮೇ 2024, 8:52 IST
Last Updated 30 ಮೇ 2024, 8:52 IST
ಅಕ್ಷರ ಗಾತ್ರ

ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಬಂಧನ ಹಾಗೂ ಸಂತ್ರಸ್ತರ ಮಹಿಳೆಯರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಗುರುವಾರ ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಸಹಸ್ರಾರು ಜನರು ಭಾಗಿಯಾಗಿದ್ದರು.

ನಗರದ ಮಹಾರಾಜಾ ಪಾರ್ಕ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸದಸ್ಯರು, ಪ್ರಜ್ವಲ್‌ ರೇವಣ್ಣ ಬಂಧಿಸಬೇಕು. ಮಹಿಳೆಯರಿಗೆ ರಕ್ಷಣೆ ನೀಡಬೇಕು. ಅವರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದರು. ದಾರಿಯುದ್ದಕ್ಕೂ ಘೋಷಣೆ ಕೂಗಿದ ಸದಸ್ಯರು, ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಹಿರಂಗ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ರಾಜ್ಯಸಭೆ ಮಾಜಿ ಸದಸ್ಯೆ ಸುಭಾಷಿಣಿ ಅಲಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ದೇಶದ ಹಲವೆಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಪುರುಷ ಪ್ರಧಾನ, ಬಂಡವಾಳಶಾಹಿ ವ್ಯವಸ್ಥೆ, ರಾಜಕೀಯ ಪ್ರಭುತ್ವದಂತಹ ಮೈತ್ರಿಕೂಟ ರಚಿಸಿಕೊಂಡಿರುವ ಬಲಾತ್ಕಾರಿ ಬಚಾವೋ ಪಾರ್ಟಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವ ಸಂಕಲ್ಪ ಮಾಡುತ್ತಿದ್ದೇವೆ ಎಂದು ರಾಜ್ಯ ಸಭೆ ಮಾಜಿ ಸದಸ್ಯೆ ಸುಭಾಷಿಣಿ ಅಲಿ ಹೇಳಿದರು.

ನಮ್ಮನ್ನು ಆಳುವ ದೊಡ್ಡವರು ಹೇಳುತ್ತಿದ್ದಾರೆ, ಇದುವರೆಗೆ ನಾವು ಟ್ರೇಲರ್‌ ತೋರಿಸಿದ್ದೇವೆ. ಇನ್ನೂ ಸಿನಿಮಾ ಬಾಕಿ ಇದೆ ಎಂದು. ಆದರೆ, ಇವರು ತೋರಿಸಿರುವ ಟ್ರೇಲರ್‌ ಎಂಥದ್ದು. ಬ್ರಿಜ್‌ಭೂಷಣ್‌ ಪರವಾಗಿ ನಿಂತರು. ಬಿಲ್ಕೀಸ್‌ ಬಾನು ಅತ್ಯಾಚಾರಿಗಳಿಗೆ ಜಾಮೀನು ಕೊಡಿಸಿದರು. ರಾಮ್‌ರಹೀಮರಿಗೆ ಪೆರೋಲ್‌ ಕೊಡಿಸಿದರು. ಪ್ರಜ್ವಲ್‌ ರೇವಣ್ಣ ಕೈಎತ್ತಿ ಹಿಡಿದು ಮತ ಕೇಳಿದರು. ಇದೇನಾ ನಿಮ್ಮ ಟ್ರೇಲರ್‌ ಎಂದು ಪ್ರಶ್ನಿಸಿದ ಅವರು, ಇಂತಹ ನಿಮ್ಮ ಸಿನಿಮಾ, ಟ್ರೇಲರ್‌ ನಡೆಯಲ್ಲ. ಜೂನ್‌ 4 ರ ನಂತರ ಟ್ರೇಲರ್‌ ಬಂದ್‌ ಆಗಲಿದೆ. ಯಾವುದೇ ಸರ್ಕಾರವಿರಲಿ, ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಮನೆಯಲ್ಲಿ ಕೆಲಸ ಮಾಡುವವರು, ಅವರ ಪಕ್ಷದ ಕಾರ್ಯಕರ್ತೆಯರು, ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಅಲ್ಲದೇ ಅದನ್ನು ವಿಡಿಯೋ ಮಾಡಿಕೊಂಡು, ಜಗತ್ತಿನ ಎದುರು ತೋರಿಸಿದ್ದಾರೆ ಎಂದು ಆರೋಪಿಸಿದರು.

ಈ ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾಗಿರುವ ಪ್ರಜ್ವಲ್‌ ರೇವಣ್ಣ, ಅವರ ತಂದೆ ಹಾಗೂ ಅವರ ಕುಟುಂಬದವರನ್ನು ಜೈಲಿಗೆ ಹಾಕಬೇಕು. ಅವರಿಗೆ ಬೇಲ್‌ ಕೊಡಬಾರದು. ತನಿಖೆಯಲ್ಲಿ ಅವರು ತಮ್ಮ ಪ್ರಭಾವ ಬಳಸಬಹುದು. ಆದರೆ, ಇಲ್ಲಿರುವ ರಾಜ್ಯ ಸರ್ಕಾರ ಅದಕ್ಕೆ ಸೊಪ್ಪು ಹಾಕದೇ, ಅವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಬೆಂಬಲವಾಗಿ ಇಲ್ಲಿ ನಿಂತಿದ್ದೇವೆ. ಇದರಲ್ಲಿ ನಿಮ್ಮ ಯಾವುದೇ ತಪ್ಪಿಲ್ಲ. ನಿಮ್ಮ ಪರವಾಗಿ ನಾವು ನಿಂತಿದ್ದೇವೆ. ನೀವು ತಲೆ ಎತ್ತಿ ನಿಲ್ಲಲು ಬೇಕಿರುವ ನಿಮಗೆ ಯಾವುದೇ ಸಹಕಾರ, ಸಹಾಯ ನೀಡಲು ನಾವು ಸಿದ್ಧರಿದ್ದೇವೆ. ಸರ್ಕಾರವೂ ಸಂತ್ರಸ್ತೆಯರ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.

ರಾಜಮಹಾರಾಜರ ಕಾಲ ಮುಗಿದು ಹೋಗಿದ್ದರೂ, ಇನ್ನೂ ಕೆಲವರು ಹಣ, ರಾಜಕೀಯ ಪ್ರಾಬಲ್ಯದಿಂದಾಗಿ ತಮ್ಮನ್ನು ತಾವು ಮಹಾರಾಜರು ಎಂದು ತಿಳಿದುಕೊಂಡಿದ್ದಾರೆ. ಅವರ ದೌರ್ಜನ್ಯವನ್ನು ವಿರೋಧಿಸುವ ಕೆಲಸವನ್ನು ಇಂದು ಹಾಸನದ ಮಹಾರಾಜಾ ಪಾರ್ಕ್‌ನಿಂದಲೇ ಆರಂಭಿಸಿದ್ದೇವೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು, ಅವರ ಕುಟುಂಬದವರ ಬೆಂಬಲವಾಗಿ ನಿಂತಿದ್ದೇವೆ. ಇಂದಿನ ಹೋರಾಟ ಯಶಸ್ವಿಯಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT