ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಸಂಚಾರ ನಿಯಮ ಉಲ್ಲಂಘನೆ; ಮೊದಲ ದಿನವೇ ₹5 ಲಕ್ಷ ದಂಡ ವಸೂಲಿ

Published 11 ಜುಲೈ 2023, 14:12 IST
Last Updated 11 ಜುಲೈ 2023, 14:12 IST
ಅಕ್ಷರ ಗಾತ್ರ

ಹಾಸನ: ಹೆಲ್ಮೆಟ್‌, ಚಾಲನಾ ಪರವಾನಗಿ ಇಲ್ಲದೇ ಬೈಕ್‌ಗಳನ್ನು ಓಡಿಸುವುದು, ಸೀಟ್‌ ಧರಿಸದೇ ಕಾರುಗಳ ಚಾಲನೆ ಮಾಡುವವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕಾರ್ಯಾಚರಣೆ ಆರಂಭಿಸಿದ್ದು, ಮೊದಲ ದಿನವೇ ₹5 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ.

ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಸಂಚಾರ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದೆ. ನಗರದಲ್ಲಿಯೇ 30 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸುವ ಮೂಲಕ ಸಂಚಾರ ನಿಯಮ ಪಾಲಿಸದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 6:30ವರೆಗೆ 30 ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಒಟ್ಟು 1027 ಪ್ರಕರಣಗಳನ್ನು ದಾಖಲಿಸಿದ್ದಾರೆ. ಹೆಲ್ಮೆಟ್‌ ಇಲ್ಲದ 871, ಸೀಟ್‌ ಬೆಲ್ಟ್‌ ಹಾಕದ 70, ಮೂವರು ಕುಳಿತು ಸಂಚರಿಸುತ್ತಿದ್ದ 14 ಹಾಗೂ ಇನ್ನಿತರ 71 ಪ್ರಕರಣಗಳು ಸೇರಿವೆ. ಒಟ್ಟು ₹5.16 ಲಕ್ಷ ದಂಡ ವಸೂಲಿ ಮಾಡಲಾಗಿದೆ.

ಒಬ್ಬರು ಡಿಎಸ್ಪಿ ನೇತೃತ್ವದಲ್ಲಿ 6 ಜನ ಇನ್‌ಸ್ಪೆಕ್ಟರ್, 25 ಜನ ಸಬ್‌ ಇನ್‌ಸ್ಪೆಕ್ಟರ್‌, ಎಎಸ್‌ಐ, 100 ಜನ ಕಾನ್‌ಸ್ಟೆಬಲ್‌ಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮಂಗಳವಾರವೂ ಕಾರ್ಯಾಚರಣೆ ಮುಂದುವರಿದಿದ್ದು ಬಹುತೇಕ ಜನರು ಮೂಲೆಯಲ್ಲಿ ಇಟ್ಟಿದ್ದ ಹೆಲ್ಮೇಟ್‌ ಧರಿಸಿ ವಾಹನ ಚಾಲನೆ ಮಾಡುತ್ತಿರುವುದು ನಗರದಲ್ಲಿ ಕಂಡು ಬಂತು.

ಸದ್ಯಕ್ಕೆ ಸ್ಥಳದಲ್ಲಿಯೇ ದಂಡದ ರಸೀದಿ ನೀಡಲಾಗುತ್ತಿದ್ದು ತಿಂಗಳೊಳಗಾಗಿ ದಂಡ ಪಾವತಿ ಮಾಡದೇ ಇದ್ದರೆ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು.
ಹರಿರಾಂ ಶಂಕರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ನಗರದಲ್ಲಿ ವೀಲಿಂಗ್ ಹಾಗೂ ನಿಯಮಬಾಹಿರ ವಾಹನ ಚಾಲನೆ ವಿರುದ್ಧ ಪೊಲೀಸರ ಕಾರ್ಯಾಚರಣೆ ನಡೆಸಿರುವುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಕೇವಲ ಡೈರಿ ಸರ್ಕಲ್, ತಣ್ಣೀರು ಹಳ್ಳ, ಸಾಲಿಗಾಮೆ ರಸ್ತೆವರೆಗೂ ಮೀಸಲಿದ್ದ ಕಾರ್ಯಾಚರಣೆ ನಗರದ ಎಲ್ಲೆಡೆಗಳಲ್ಲೂ ಕಂಡು ಬರುತ್ತಿರುವುದರಿಂದ ವಾಹನ ಸವಾರರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.

ನಗರದ 80 ಅಡಿ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ತ್ರಿವಳಿ ಸಂಚಾರ, ವೀಲಿಂಗ್, ಸೇರಿದಂತೆ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುತ್ತಿರುವ ಜೊತೆಗೆ ಕ್ರಿಮಿನಲ್ ಮೊಕದ್ದಮೆ ಹಾಕುತ್ತಿದ್ದಾರೆ.

ಕಾರ್ಯಾಚರಣೆ ಮುಂದುವರಿಕೆ

ಸಂಚಾರ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಶೇ 90 ರಷ್ಟು ದ್ವಿಚಕ್ರ ಸವಾರರು ಹೆಲ್ಮೆಟ್ ರಹಿತ ಸಂಚಾರ ಮಾಡುತ್ತಿದ್ದಾರೆ. ಇದರಿಂದ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆಯು ಹೆಚ್ಚಾಗಿತ್ತು. ಆದ್ದರಿಂದ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಇದರಿಂದ ಸಂಚಾರ ನಿಯಂತ್ರಣ ವ್ಯಾಪಕವಾಗಿ ಯಶಸ್ಸು ಕಂಡಿದೆ ಎಂದು ಎಸ್ಪಿ ಹರಿರಾಂ ಶಂಕರ್‌ ತಿಳಿಸಿದರು.

ಕಾರ್ಯಾಚರಣೆ ಮುಂದುವರಿಯಲಿದ್ದು, ಸದ್ಯ ಜನರಲ್ಲಿ ಸಂಚಾರಿ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲಾಗುವುದು. ಆದರೆ ಈಗಾಗಲೇ ನಿಗದಿ ಪಡಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಕೆಲ ದಿನಗಳ ಕಾಲ ಎಚ್ಚರಿಕೆ ನೀಡುವ ಮೂಲಕ ಹೆಲ್ಮೆಟ್ ಕಡ್ಡಾಯ ಸೇರಿದಂತೆ ಇತರೆ ಸಂಚಾರ ನಿಯಮ ಪಾಲಿಸುವಂತೆ ಜನರಿಗೆ ತಿಳಿ ಹೇಳಲಾಗುವುದು ಎಂದರು.

ನಂತರ ವಿಶೇಷ ಕಾರ್ಯಾಚರಣೆ ಕೈಗೊಂಡು ಹೆಲ್ಮೆಟ್ ರಹಿತ ಪ್ರಯಾಣ ಹಾಗೂ ಇತರೆ ಸಂಚಾರಿ ನಿಯಮ ಉಲ್ಲಂಘನೆಗೆ ಕಟ್ಟುನಿಟ್ಟಾಗಿ ದಂಡ ವಿಧಿಸಲಾಗುವುದು ಎಂದು ಹೇಳಿದರು.

ಈ ವಿಶೇಷ ಕಾರ್ಯಾಚರಣೆಯಲ್ಲಿ ದಂಡ ವಸೂಲಿ ಹಣ ಇಲಾಖೆಗೆ ಸೇರಲಿದ್ದು, ಇದರಲ್ಲಿ ಯಾವುದೇ ಸಚಿವರ ಅಥವಾ ಸರ್ಕಾರದ ಒತ್ತಡ ಇಲ್ಲ. ಕೇವಲ ಸಾರ್ವಜನಿಕರಲ್ಲಿ ಸಂಚಾರ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಮನೆಗೆ ತಲುಪಲಿದೆ ದಂಡದ ರಶೀದಿ

ಮುಂದಿನ ಕೆಲ ದಿನಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಪಾರ್ಕಿಂಗ್ ಇಲ್ಲದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡುವವರಿಗೆ ದಂಡ ವಿಧಿಸಲಾಗುವುದು ಎಫ್‌ಟಿವಿಆರ್ (ಫೀಲ್ಟ್‌ ಟ್ರಾಫಿಕ್‌ ವಯೋಲೇಶನ್‌ ರಿಪೋರ್ಟ್‌) ತಂತ್ರಜ್ಞಾನದ ಮೂಲಕ ಸಿಬ್ಬಂದಿ ಸಂಚಾರಿ ನಿಯಮ ಉಲ್ಲಂಘನೆಯ ಫೋಟೋ ಕ್ಲಿಕ್ ಮಾಡುವ ಮೂಲಕ ವಾಹನದ ಮಾಲೀಕರಿಗೆ ಮನೆಗೆ ದಂಡದ ರಸೀದಿ ವಿತರಿಸಲಾಗುವುದು. ಇದಕ್ಕಾಗಿ ಈಗಾಗಲೇ 10 ಮೊಬೈಲ್ ಲೈಸೆನ್ಸ್ ಪಡೆದಿದ್ದು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಎಸ್ಪಿ ಹರಿರಾಂ ಶಂಕರ್‌ ತಿಳಿಸಿದರು. ಮುಂದಿನ ಒಂದೂವರೆ ತಿಂಗಳಲ್ಲಿ ಸ್ಥಳದಲ್ಲೇ ದಂಡ ವಿಧಿಸುವ ಪ್ರಕ್ರಿಯೆ ಅಂತ್ಯ ಆಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT