ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಆದ ಅನ್ಯಾಯ ಪ್ರಶ್ನಿಸದ ಪ್ರಜ್ವಲ್‌, ದೇವೇಗೌಡರು: ಸಿದ್ದರಾಮಯ್ಯ

ಜೆಡಿಎಸ್‌ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ
Published 20 ಏಪ್ರಿಲ್ 2024, 1:19 IST
Last Updated 20 ಏಪ್ರಿಲ್ 2024, 1:19 IST
ಅಕ್ಷರ ಗಾತ್ರ

ಹಾಸನ: ‘ರಾಜ್ಯಕ್ಕೆ ಬಿಜೆಪಿ ಮಾಡುತ್ತಿರುವ ಅನ್ಯಾಯದ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ, ಎಚ್‌.ಡಿ.ದೇವೇಗೌಡರು ನೆಪಕ್ಕೂ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ ಏಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಜಿಲ್ಲೆಯ ಬೇಲೂರು, ಸಕಲೇಶಪುರ, ಅರಕಲಗೂಡಿನಲ್ಲಿ ಶುಕ್ರವಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರವಾಗಿ ನಡೆದ ಪ್ರಜಾಧ್ವನಿ–02 ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿಯವರನ್ನು ಬೈಯ್ದಿದ್ದ ದೇವೇಗೌಡರಿಗೆ, ಈ ಬಾರಿ ಅವರ ಬಗ್ಗೆ ಅತಿಯಾದ ಪ್ರೇಮ ಬಂದಿದೆ. ಸ್ವಾರ್ಥ, ಕುಟುಂಬ ರಾಜಕಾರಣಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ’ ಎಂದು ಟೀಕಿಸಿದರು.

‘ಹಾಸನದಲ್ಲಿ ಮೊಮ್ಮಗ, ಮಂಡ್ಯದಲ್ಲಿ ಮಗ, ಬೆಂಗಳೂರು ಗ್ರಾಮಾಂತರದಲ್ಲಿ ಅಳಿಯನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಕೋಲಾರ ಮೀಸಲು ಕ್ಷೇತ್ರ ಆಗದೇ ಇದ್ದಿದ್ದರೆ, ಅಲ್ಲಿಯೂ ಕುಟುಂಬದವರನ್ನೇ ನಿಲ್ಲಿಸುತ್ತಿದ್ದರು’ ಎಂದು ಲೇವಡಿ ಮಾಡಿದರು.

‘ಕಳೆದ ಚುನಾವಣೆಯಲ್ಲಿ ಹಾಸನಕ್ಕೆ ಬಂದು ಪ್ರಜ್ವಲ್‌ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದೆ. ನಾನು ಬರದೇ ಹೋಗಿದ್ದರೆ, ಆಗಲೇ ಪ್ರಜ್ವಲ್‌ ಸೋಲುತ್ತಿದ್ದರು. ನಾನು ತಪ್ಪು ಮಾಡಿಬಿಟ್ಟೆ’ ಎಂದು ಹೇಳಿದರು.

‘ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಕೊಡುವುದಾಗಿ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದರೂ, ಒಂದು ರೂಪಾಯಿ ಕೂಡ ಬಿಡುಗಡೆ ಮಾಡದೇ ವಂಚಿಸಿದ್ದಾರೆ. ಬರಪರಿಹಾರ ಕೊಟ್ಟಿಲ್ಲ. ರೈತರ ಪರ ಎಂದು ಬಿಂಬಿಸಿಕೊಳ್ಳುವ ಜೆಡಿಎಸ್‌ ಸುಪ್ರೀಮೊ ಎಚ್.ಡಿ. ದೇವೇಗೌಡರು, ಸಂಸದ ಪ್ರಜ್ವಲ್‌ ರೇವಣ್ಣ ಈ ಬಗ್ಗೆ ಸಂಸತ್ತಿನಲ್ಲಿ ಬಾಯಿ ಬಿಡಲಿಲ್ಲ. ಈ ಬಗ್ಗೆ ಪ್ರಶ್ನಿಸುವುದನ್ನು ಬಿಟ್ಟು, ಜೆಡಿಎಸ್‌ನವರು ಬಿಜೆಪಿ ಜೊತೆಗೆ ಸೇರಿದ್ದಾರೆ. ಇದು ಮತ ಹಾಕಿದವರಿಗೆ ಮಾಡಿದ ದ್ರೋಹವಲ್ಲವೇ? ಮತ್ತೆ ಇಂಥವರನ್ನು ಲೋಕಸಭೆಗೆ ಕಳುಹಿಸಿಕೊಡಬೇಕಾ ಎಂದು ಯೋಚಿಸಿ’ ಎಂದು ಹೇಳಿದರು.

‘ಸಿದ್ದರಾಮಯ್ಯನಿಗೆ ಗರ್ವ ಬಂದಿದೆ. ಗರ್ವಭಂಗ ಮಾಡುತ್ತೇನೆ ಎಂದು ದೇವೇಗೌಡರು ಹೇಳುತ್ತಿದ್ದಾರೆ. ಆದರೆ, ನನಗೆ ಗರ್ವವೇ ಇಲ್ಲ. ಗರ್ವ ಭಂಗ ಹೇಗೆ ಮಾಡುತ್ತೀರಿ’ ಎಂದು ಪ್ರಶ್ನಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಈ ಚುನಾವಣೆ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಗೌಡರು ಹೇಳಿದ್ದಾರೆ. ಸರ್ಕಾರ ಹೇಗೆ ಬೀಳುತ್ತದೆ? ಇದೇನು ಮಡಿಕೆನಾ? ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಮತದಿಂದ ರಚನೆಯಾದ ಸರ್ಕಾರ. ಹಾಸನ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನನ್ನ ಈ ಮಾತನ್ನು ಬರೆದಿಟ್ಟುಕೊಳ್ಳಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT