ಸೋಮವಾರ, ಸೆಪ್ಟೆಂಬರ್ 27, 2021
26 °C
ಸಚಿವ ಸಂಪುಟ: ಹಾಸನಕ್ಕೆ ದೊರಕದ ಪ್ರಾತಿನಿಧ್ಯ

ಹಾಸನ: ಪ್ರೀತಂ ಗೌಡಗೆ ತಪ್ಪಿದ ಮಂತ್ರಿ ಸ್ಥಾನ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಸಚಿವ ಸಂಪುಟದಲ್ಲಿ ಈ ಬಾರಿಯಾದರೂ ಹಾಸನ ಜಿಲ್ಲೆಗೆ ಪ್ರಾತಿನಿಧ್ಯ ದೊರಕಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರೀತಂ ಜೆ ಗೌಡ ಅವರಿಗೆ ಮಂತ್ರಿಸ್ಥಾನ ತಪ್ಪಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.

ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಜತೆ ಗುರುತಿಸಿಕೊಂಡಿರುವ ಪ್ರೀತಂ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು. ಸಚಿವ ಸ್ಥಾನವನ್ನು ನೀಡಬೇಕು ಎಂಬ ಈ ಭಾಗದ ಕಾರ್ಯಕರ್ತರು ಮತ್ತು ಮುಖಂಡರ ಆಗ್ರಹವು ವರಿಷ್ಠರ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. 

ಸ್ವತಃ ಪ್ರೀತಂಗೌಡ ಅವರೇ ಈ  ಬಾರಿಗೆ ಅವಕಾಶ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದರು. ಇದೇ ಕಾರಣಕ್ಕೆ ಈ ಹಿಂದೆ ನೀಡಿದ್ದ ನಿಗಮ ಮಂಡಳಿ ಸ್ಥಾನವನ್ನು ತಿರಸ್ಕರಿಸಿ, ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅವರ ಬೆಂಬಲಿಗರು, ಅಭಿಮಾನಿಗಳು ಸಂಭ್ರಮಾಚರಣೆಗೆ ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದರು.

ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಆದಂತೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸರ್ಕಾರದಲ್ಲೂ ಹಾಸನ ಕಡೆಗಣಿಸಲ್ಪಟ್ಟಿದೆ. ಬಿಜೆಪಿ ಅಧಿಕಾರವಧಿಯಲ್ಲಿ ಹೊರ ಜಿಲ್ಲೆಯ ಶಾಸಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಸ್ಥಾನ ನೀಡುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನ ಇದೆ.

ಪ್ರಥಮ ಬಾರಿಗೆ ಆಯ್ಕೆಯಾಗಿರುವ ಪ್ರೀತಂ ಗೌಡ ಅವರ ವೈಯಕ್ತಿಕ ವರ್ಚಸ್ಸು, ಕಾರ್ಯವೈಖರಿ, ಪ್ರಭಾವ ಮೂಲೆಗುಂಪಾಗಿದೆ. ಈ ಬಾರಿಯಾದರೂ ಸ್ಥಾನ ಕೊಡಲೇಬೇಕು ಎಂದು ಶಾಸಕರು ತಮ್ಮ ಹಿತೈಷಿ ಹಿರಿಯರ ಮೂಲಕ ಗಮನ ಸೆಳೆದಿದ್ದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ತಂಡದ ಪ್ರಮುಖ ಸದಸ್ಯರಾಗಿ ಗುರುತಿಸಿಕೊಂಡಿದ್ದ ಪ್ರೀತಂ, ಕೆ.ಆರ್‌.ಪೇಟೆ, ಶಿರಾ ಹಾಗೂ ಮಸ್ಕಿ ಚುನಾವಣೆಗಳಲ್ಲಿ ಪಕ್ಷದ ಪ್ರಚಾರ ಹೊಣೆ ಹೊತ್ತಿದ್ದರು. ತಮ್ಮ ಕ್ಷೇತ್ರದಿಂದ ಕಾರ್ಯಕರ್ತರನ್ನು ಕರೆದೊಯ್ದು ಪ್ರಚಾರದಲ್ಲಿ ತೊಡಗಿಸುವ ಜತೆಗೆ, ಪ್ರಚಾರ ತಂತ್ರ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಎಸ್‌ವೈ ಕುಟುಂಬದೊಂದಿಗಿನ ಅವರ ಬಾಂಧವ್ಯ ಮುಂದುವರಿದಿತ್ತು.

ಪಕ್ಷದ ಹಲವು ಹಿರಿಯರಿಗೆ ಸಚಿವ ಸ್ಥಾನ ನೀಡಲಾಗಿದೆ. ಪ್ರೀತಂ ಯುವಕರಾಗಿರುವುದರಿಂದ ಅವರನ್ನು ಹಿಂದಿಕ್ಕಿ ಇವರಿಗೆ ಸ್ಥಾನಮಾನ ನೀಡುವುದಕ್ಕೆ ಹೈಕಮಾಂಡ್‌ ನಿರಾಕರಿಸಿದೆ  ಎಂದು ಎನ್ನಲಾಗಿದೆ.

ಪ್ರೀತಂ ಗೌಡರಿಗೆ ಸಚಿವ ಸ್ಥಾನ ನೀಡಿದ್ದರೆ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾಗಿ ಬೆಳೆಯುವ ಅವಕಾಶ ಸೃಷ್ಟಿಯಾಗುತ್ತಿತ್ತು. ಆ ಸಮುದಾಯದ ಮತಬ್ಯಾಂಕ್‌ ತಮ್ಮ ಪಕ್ಷದೆಡೆಗೆ ಸೆಳೆಯುವಲ್ಲಿ ಅವರು
ಸಫಲರಾಗುತ್ತಿದ್ದರು. ಮಂತ್ರಿಸ್ಥಾನ ತಪ್ಪಿದ್ದು ಜಿಲ್ಲೆಗೆ ನಷ್ಟ ಎನ್ನಲಾಗಿದೆ. ಶಾಸಕರಾಗಿದ್ದಾಗಲೇ ತಮ್ಮ ಕ್ಷೇತ್ರಕ್ಕೆ ಭರಪೂರ ಅನುದಾನ ತಂದಿದ್ದರು. ರಿಂಗ್‍ ರಸ್ತೆಗೆ ಮುಕ್ತಿ, ಯುಜಿಡಿ, ಕೆರೆ-ಪಾರ್ಕ್ ಅಭಿವೃದ್ಧಿ, ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಿದ್ದರು. ಮುಂದಿನ ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆಗೂ ಪಕ್ಷ ಬಲವರ್ಧನೆಗೆ ಅನುಕೂಲವಾಗುತ್ತಿತ್ತು ಎಂದು ವಿಶ್ಲೇಷಿಸಲಾಗಿದೆ.

ಮೈತ್ರಿ ಸರ್ಕಾರ ಪತನದ ನಂತರ ಅಸ್ತಿತ್ವಕ್ಕೆ ಬಂದ ಬಿ.ಎ.ಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ದೊರಕಲಿಲ್ಲ. ಹಲವು ಯೋಜನೆಗಳಿಗೆ ಅನುದಾನ ತಡೆಹಿಡಿಯಲಾಯಿತು.

‘ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವಷ್ಟು ದೊಡ್ಡವನಲ್ಲ. ಆದರೆ, ಹೈಕಮಾಂಡ್‌ ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ’ ಎಂದು ಪ್ರೀತಂ ಗೌಡ ಗಮನ ಸೆಳೆದಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು