ಗುರುವಾರ , ಫೆಬ್ರವರಿ 25, 2021
19 °C
ತಂದೆ, ಮಗನ ಮೇಲೆ ಹಲ್ಲೆ: ಸೀಗೆ ಗ್ರಾಮಸ್ಥರ ಪ್ರತಿಭಟನೆ‌

ತಂದೆ, ಮಗನ ಮೇಲೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ತಾಲ್ಲೂಕಿನ ಸೀಗೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ತಂದೆ, ಮಗನ ಮೇಲೆ ಹಲ್ಲೆ ಮಾಡಿದ
ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ
ನೇತೃತ್ವದಲ್ಲಿ ಸೀಗೆ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್‌.ಕೆ. ಸಂದೇಶ್‌ ಮಾತನಾಡಿ, ಸೀಗೆ ಗ್ರಾಮಸ್ಥರು ಪಡಿತರ
ಪಡೆಯಲು ವೀರಾಪುರ ಗ್ರಾಮಕ್ಕೆ ಹೋಗಬೇಕು. ಹಾಗಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಕಾರ್ಡ್‌ಗೆ ಒಟಿಪಿ ನೀಡಿ ವಾಪಸ್‌ ಬೈಕ್‌ನಲ್ಲಿ ಬರುತ್ತಿದ್ದ ಗ್ರಾಮದ ದಿನೇಶ್‌ ನನ್ನು ವೀರಾಪುರ ಗ್ರಾಮದ ಒಕ್ಕಲಿಗ ಸಮುದಾಯದ
ರಘು, ಆದಿತ್ಯ ಮತ್ತು ಕೆಂಚ ಎಂಬುವರು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ
ಬಿಜೆಪಿಗೆ ಸಹಕಾರ ನೀಡಿದ್ದೀಯಾ ಎಂದು ನಿಂದಿಸಿದ್ದಾರೆ ಎಂದು ಆರೋಪಿಸಿದರು.

ದಿನೇಶ್‌ ಈ ವಿಷಯವನ್ನು ತನ್ನ ತಂದೆ ಚಂದ್ರಯ್ಯನಿಗೆ ತಿಳಿಸಿದ್ದಾನೆ. ಹಲ್ಲೆ ನಡೆಸಿದವರ ಬಳಿ ಮಾತನಾಡಲು ಬರುತ್ತಿದ್ದ ಚಂದ್ರಯ್ಯ ಅವರನ್ನು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ.  ಗ್ರಾಮದ ರಾಮಯ್ಯ ಹಾಗೂ ಕರಿಯಯ್ಯ ಜಗಳ ಬಿಡಿಸಿದ್ದಾರೆ ಎಂದು ಹೇಳಿದರು.

ಹಲ್ಲೆಗೆ ಒಳಗಾಗಿ ಗಾಯಗೊಂಡಿರುವ ತಂದೆ, ಮಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ. ಒಟಿಪಿ ನೀಡಲು ವೀರಾಪುರ ಗ್ರಾಮಕ್ಕೆ ಹೋಗಲು ಪರಿಶಿಷ್ಟ ಜಾತಿಯ ಜನರು ಭಯಪಡುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಕೆ.ಈರಪ್ಪ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ
ಸಂಚಾಲಕ ಎಂ.ಜಿ ಪೃಥ್ವಿ, ಡಿವೈಎಫ್‌ಐನ ಎಂ.ಎನ್‌. ಮಧುಸೂದನ್‌, ಮುಖಂಡ ಎಚ್‌. ದೇವರಾಜು ಹಾಗೂ
ಗ್ರಾಮಸ್ಥರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು