ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆನರಸೀಪುರ | ಶಾಶ್ವತ ಸೂರು ಕಲ್ಪಿಸಿ: ಆಗ್ರಹ

ಹೇಮಾವತಿ ನದಿ ದಡದಲ್ಲಿ ಕಿಳ್ಳೇಕ್ಯಾತರ ಬದುಕು ದುಸ್ತರ
Last Updated 1 ಮಾರ್ಚ್ 2021, 4:47 IST
ಅಕ್ಷರ ಗಾತ್ರ

ಹೊಳೆನರಸೀಪುರ: ಇಲ್ಲಿನ ಹೇಮಾವತಿ ನದಿ ದಡದಲ್ಲಿನಾಲ್ಕು ದಶಕದಿಂದ ಬದುಕು ಕಟ್ಟಿಕೊಂಡಿರುವ ಕಿಳ್ಳೇಕ್ಯಾತ ಸಮುದಾಯವರಿಗೆ ಶಾಶ್ವತ ಸೂರಿಲ್ಲ, ಪಡಿತರ ವ್ಯವಸ್ಥೆಯಿಲ್ಲ. ಮೀನುಗಾರಿಕೆಯನ್ನೇ ನಂಬಿರುವ ಇವರಿಗೆ ಸರ್ಕಾರದಿಂದ ಮೂಲಸೌಕರ್ಯದ ಅವಶ್ಯವಿದೆ.

ಅರಕಲಗೂಡು ರಸ್ತೆ ಪಕ್ಕದ ನದಿ ನಡದಲ್ಲಿ ಸುಮಾರು 13 ಕಿಳ್ಳೇಕ್ಯಾತ ಕುಟುಂಬಗಳು ವಾಸವಾಗಿವೆ. ಶೆಡ್‌ಗಳಲ್ಲಿ ಬದುಕಿನ ಬಂಡಿ ಸಾಗಿಸುತ್ತಿರುವ ಇವರು ವಸತಿ ಸೇರಿದಂತೆ ಅಗತ್ಯ ಸೌಲಭ್ಯದ ನಿರೀಕ್ಷೆಯಲ್ಲಿದ್ದಾರೆ.

‘ನಮ್ಮ ತಾತನ ಕಾಲದಲ್ಲಿ ಇಲ್ಲಿಗೆ ಬಂದು ನೆಲೆಸಿದ್ದೇವೆ. ತಾತ ಸೊಂಟಕ್ಕೆ ಸೋರೆ ಬುರುಡೆ ಕಟ್ಟಿಕೊಂಡು ಮೀನು ಹಿಡಿದು ಜೀವನ ನಡೆಸುತ್ತಿದ್ದರಂತೆ. ನಾವೂ ಇದೇ ಗುಡಿಸಲಿನಲ್ಲಿ ಹುಟ್ಟಿ ಬೆಳೆದದ್ದು. ನಮಗೆ ಮೀನುಗಾರಿಕೆ ಬಿಟ್ಟು ಬೇರೆ ಯಾವುದೇ ವೃತ್ತಿ ಗೊತ್ತಿಲ್ಲ. ಆದ್ದರಿಂದ ನಮ್ಮ ಬದುಕು ಹೇಮಾವತಿ ನದಿ ದಡದಲ್ಲೇ ಸಾಗುತ್ತಿದೆ’ ಎಂದು ಕಿಳ್ಳೇಕ್ಯಾತ ಕುಟುಂಬದ ಯುವಕ ಕುಮಾರ ಮಾಹಿತಿ ನೀಡಿದರು.

‘ನಾವೂ ಮೀನು ಹಿಡಿದು ಜೀವನ ಸಾಗಿಸುತ್ತಿದ್ದೇವೆ. ಆದರೆ, ನಮ್ಮ ಹಿರಿಯರಂತೆ ಸೊಂಟಕ್ಕೆ ಸೋರೆ ಬುರುಡೆ ಕಟ್ಟಿಕೊಳ್ಳಲ್ಲ, ಮೀನುಗಾರಿಕೆ ಇಲಾಖೆಯಿಂದ ನೀಡಿರುವ ದೋಣಿ ಮತ್ತು ಬಲೆ ಹಾಕಿ ಮೀನು ಹಿಡಿಯುತ್ತೇವೆ’ ಎಂದುಹೇಳಿದರು.

‘ನಮ್ಮ ಊರಿನಲ್ಲಿ ಪುಟ್ಟಮನೆ ಇದೆ, ಮತದಾರರ ಚೀಟಿ ಹಾಗೂ ಪಡಿತರ ಚೀಟಿಯೂ ಇದೆ. ಆದರೆ, ಪಡಿತರ ತೆಗೆದುಕೊಳ್ಳುತ್ತಿಲ್ಲ. ಇಲ್ಲಿನ ನ್ಯಾಯಬೆಲೆ ಅಂಗಡಿಗೆ ಹೋಗಿ ಅಕ್ಕಿ ಕೇಳಿದಕ್ಕೆ ‘ನೀವು ಎಲ್ಲಿ ಕಾರ್ಡ್ ಪಡೆದುಕೊಂಡಿದ್ದೀರೊ ಅಲ್ಲಿಗೇ ಹೋಗಿ ತೆಗೆದುಕೊಳ್ಳಬೇಕು’ ಎಂದರು. ಅಂದಿನಿಂದ ನಾವು ಪಡಿತರ ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ಬಡವರ, ದುರ್ಬಲರ, ನಿರಾಶ್ರಿತರ ಬದುಕನ್ನು ಹಸನಾಗಿಸಲು ಹತ್ತಾರು ಯೋಜನೆ ಗಳನ್ನು ಜಾರಿಗೆ ತಂದಿದೆ. ಯೋಜನೆ ತಲುಪಬೇಕಾದವರನ್ನು ತಲುಪುತ್ತಿಲ್ಲ’ ಎಂದು ವನಿತಮ್ಮ ಅಳಲು ತೋಡಿಕೊಂಡರು.

‘ಕಳೆದ ವರ್ಷ ಮಳೆ ಹೆಚ್ಚಾಗಿ ನದಿ ನೀರಿನ ಹರಿವು ಹೆಚ್ಚಾಗಿತ್ತು. ನಮ್ಮನ್ನು ಮುಂಜಾಗ್ರತೆ ದೃಷ್ಟಿಯಿಂದ ಇಲ್ಲಿಂದ ಸ್ಥಳಾಂತರಿಸಿದರು. ಆ ಸಮಯದಲ್ಲಿ ಶಾಸಕ ಎಚ್‌.ಡಿ.ರೇವಣ್ಣ ಅವರು ಬಂದು ಚಾಪೆ, ಹೊದಿಕೆ, ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ ಹಾಗೂ ಹಣ ಕೊಟ್ಟು ನೆರವಾದರು’ ಎಂದು ಶಾಸಕರ ಕಾರ್ಯವನ್ನು ಶ್ಲಾಘಿಸಿದರು.

ಕಿಳ್ಳೆಕ್ಯಾತ ಸಮುದಾಯದವರು ಅರಸೀಕೆರೆ ತಾಲ್ಲೂಕು ಜಾವಗಲ್ ಸಮೀಪದ ಟಿ.ಬಿ. ಕಾವಲ್ ಹಾಗೂ ತೊಂಡರೆ ಕಾವಲ್‍ನಿಂದ ಬಂದು ಇಲ್ಲಿ ನೆಲೆಸಿದ್ದಾರೆ.

‘ಮೀನುಗಾರರು ಬೇರೆ ಬೇರೆ ಊರುಗಳಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಅವರ ಊರಿನ ಮತದಾರರ ಪಟ್ಟಿಯಲ್ಲಿ ಅವರ ಹೆಸರಿದೆ. ಪಡಿತರ ಚೀಟಿಯನ್ನೂ ಪಡೆದುಕೊಂಡಿದ್ದಾರೆ. ಶಾಶ್ವತವಾಗಿ ಇಲ್ಲಿ ನೆಲೆಸುವುದಾದರೆ, ಇಲ್ಲಿನ ಮತದಾರರ ಪಟ್ಟಿಗೆ ಸೇರಿಸಲು, ಪಡಿತರ ಚೀಟಿ ಕೊಡಿಸಲು ವ್ಯವಸ್ಥೆ ಮಾಡುತ್ತೇನೆ. ಅವರಿಗೆ ಶಾಶ್ವತ ಸೂರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಕೆ.ಆರ್. ಶ್ರೀನಿವಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT