ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಕುಡಿಯುವ ನೀರು ಸರಬರಾಜಿಗೆ ಆಗ್ರಹ

ಅಧಿಕಾರಿ, ಜನಪ್ರತಿನಿಧಿ ವಿರುದ್ಧ ಆಕ್ರೋಶ
Last Updated 25 ಸೆಪ್ಟೆಂಬರ್ 2020, 2:42 IST
ಅಕ್ಷರ ಗಾತ್ರ

ಸಕಲೇಶಪುರ: ಇಲ್ಲಿನ ಪುರಸಭೆಯಿಂದ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡದೆ ಹೊಳೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸದೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟಿಸಿದರು. ಬಳಿಕ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿದರು.

ಹೊಳೆಮಲ್ಲೇಶ್ವರಸ್ವಾಮಿ ದೇವ ಸ್ಥಾನದಿಂದ ಬಿ.ಎಂ.ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಜನಪ್ರತಿನಿಧಿಗಳು ಹಾಗೂ ಮುಖ್ಯಾಧಿಕಾರಿ ವಿರುದ್ಧ ಘೋಷಣೆ ಕೂಗಿದರು.

‘ಕೊಟ್ಯಂತರ ರೂಪಾಯಿ ತೆರಿಗೆ ವಸೂಲಿ ಮಾಡುವ ಪುರಸಭೆ ಜನರಿಗೆ ಶುದ್ಧೀಕರಿಸಿದ ನೀರು ಪೂರೈಕೆ ಮಾಡದೆ ಜನರ ಆರೋಗ್ಯದ ಮೇಲೆ ಚೆಲ್ಲಾಟ ಆಡುತ್ತಿದೆ’ ಎಂದು ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಸಾಗರ್‌ ಜಾನೇಕೆರೆ ಆರೋಪಿಸಿದರು.

‘ಮುಖ್ಯಾಧಿಕಾರಿ ಸ್ಟೀಫನ್‌ ಪ್ರಕಾಶ್‌ ಬೇಜವಾಬ್ದಾರಿ ಅಧಿಕಾರಿ ಆಗಿದ್ದು, ಕುಡಿಯುವ ನೀರು ಪೂರೈಕೆ ಹೆಸರಿನಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಅವರು ಹಾಸನದಲ್ಲಿ ವಾಸ್ತವ್ಯ ಇದ್ದು, ನಿತ್ಯ ಪುರಸಭೆ ವಾಹನದಲ್ಲಿ ಬಂದು ಹೋಗಿ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ’ ಎಂದು ಆರೋಪ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ಕಚೇರಿ ಮುಂದೆ ಕೆಲ ಹೊತ್ತು ಧರಣಿ ನಡೆಸಿ, ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದರು.

ಕಚೇರಿ ಬಾಗಿಲಿಗೆ ಬೀಗ ಹಾಕಲು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ಬೀಗ ಹಾಕದಂತೆ ತಡೆದರು. ಪ್ರತಿಭಟನಾ ಸ್ಥಳಕ್ಕೆ ಉಪವಿಭಾ ಗಾಧಿಕಾರಿ ಎಂ.ಗಿರೀಶ್‌ ನಂದನ್‌ ಭೇಟಿ ನೀಡಿ ಮನವಿ ಆಲಿಸಿದರು.

‘ಕುಡಿಯುವ ನೀರಿನ ಶುದ್ಧೀಕರಣ ಕೇಂದ್ರದ ಯಂತ್ರೋಪಕರಣಗಳಿಗೆ ಶಾಶ್ವತ ಪರಿಹಾರ ಮಾಡುವ ಸಲುವಾಗಿ ಎತ್ತಿನಹೊಳೆ ಯೋಜನೆ ಅಡಿಯಲ್ಲಿ ₹ 12 ಕೋಟಿ ವೆಚ್ಚದ ಹೈಟೆಕ್‌ ಶುದ್ಧೀಕರಣ ಕೇಂದ್ರ ಸ್ಥಾಪನೆ ಆಗಲಿದೆ. ಈ ಕಾಮಗಾರಿ ಪೂರ್ಣಗೊಳ್ಳುವವರೆಗೂ ಈಗಿರುವ ಶುದ್ಧೀಕರಣ ಕೇಂದ್ರವನ್ನು ಇನ್ನಷ್ಟು ಸ್ವಚ್ಛಗೊಳಿಸಿ ಶುದ್ಧ ನೀರನ್ನು ಸರಬರಾಜು ಮಾಡಲಾಗುವುದು’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಗೌಡ, ವೇದಿಕೆ ರಾಜ್ಯ ಘಟಕದ ಕಾರ್ಯದರ್ಶಿ ಮೋಹನ್‌ಗೌಡ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಅಜಿತ್‌ಕುಮಾರ್‌, ಸಂತೋಷ್‌ ಕಿರೇಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT