ಸೋಮವಾರ, ಅಕ್ಟೋಬರ್ 26, 2020
21 °C
ಅಕ್ಟೋಬರ್‌ನಲ್ಲಿ ಕಾರ್ಯಾಚರಣೆ ನಡೆಸಲು ನಿರ್ಧಾರ‌ : 2 ಪುಂಡಾನೆ ಸೆರೆಗೆ ಪ್ರಸ್ತಾವ

ಹಾಸನ: ನಾಲ್ಕು ಕಾಡಾನೆಗಳಿಗೆ ರೇಡಿಯೊ ಕಾಲರ್

ಕೆ.ಎಸ್.ಸುನಿಲ್‌ Updated:

ಅಕ್ಷರ ಗಾತ್ರ : | |

Prajavani

ಹಾಸನ: ಮಲೆನಾಡು ಭಾಗದಲ್ಲಿ ಗಜಪಡೆಯಿಂದ ಉಂಟಾಗುತ್ತಿರುವ ಸಮಸ್ಯೆ ನಿವಾರಣೆಗೆ ನಾಲ್ಕು ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲು ಅರಣ್ಯ ಇಲಾಖೆಗೆ ಅನುಮತಿ ದೊರೆತಿದೆ.

ಗುಂಪು ಗುಂಪಾಗಿ ಆನೆಗಳು ಓಡಾಡುವುದನ್ನು ಪತ್ತೆ ಹಚ್ಚಲು ಮೊದಲ ಹಂತದಲ್ಲಿ ನಾಲ್ಕು ಆನೆಗಳಿಗೆ ರೇಡಿಯೊ ಕಾಲರ್‌ ಅಳವಡಿಸಲಾಗುತ್ತದೆ. ಇದರಿಂದ ಅವುಗಳ ಚಲನವಲನಗಳು ಗೊತ್ತಾಗಲಿದೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್‌ ರೂಪಿಸಲಾಗಿದ್ದು, ಈ ಆ್ಯಪ್ ಅನ್ನು ಗ್ರಾಮದ ಸಿಬ್ಬಂದಿ ಮಾತ್ರ ಬಳಸುತ್ತಾರೆ.

ಗಜಪಡೆ ಯಾವುದಾದರೂ ಗ್ರಾಮದ ಬಳಿ ಅಥವಾ ಜನಸಂಚಾರ ಇರುವ ಜಾಗದಲ್ಲಿ ಇರುವ ಬಗ್ಗೆ ಮಾಹಿತಿ ದೊರೆತಲ್ಲಿ ಅವುಗಳನ್ನು ಮರಳಿ ಕಾಡಿಗೆ ಅಟ್ಟಲು ಸಹಕಾರಿಯಾಗಲಿದೆ.

ಅರಣ್ಯ ಇಲಾಖೆ ಮಾಹಿತಿ ಪ್ರಕಾರ, ಮಲೆನಾಡು ಭಾಗದಲ್ಲಿ ಆನೆಗಳ ಸಂಖ್ಯೆ 55 ರಿಂದ 60 ದಾಟಿದೆ.  ಕೆಲ ಆನೆಗಳು ಕಾಫಿ ತೋಟ, ಭತ್ತದ ಗದ್ದೆ ಸೇರಿದಂತೆ ಅನೇಕ ಕಡೆಗಳಲ್ಲಿ ಓಡಾಡುವ ಮೂಲಕ ಭತ್ತ, ಕಾಫಿ ಬೆಳೆ ಹಾನಿ ಉಂಟು ಮಾಡುತ್ತಿವೆ. ಹಲವು ಕಡೆ ಕಾಫಿ ತೋಟಗಳನ್ನೇ ತಂಗುದಾಣ ಮಾಡಿಕೊಂಡಿರುವ ಉದಾಹರಣೆಯೂ ಇದೆ.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ತಾತ್ಕಾಲಿಕ ಪರಿಹಾರ ಕಂಡು ಹಿಡಿಯಲು
ಮುಂದಾಗಿದೆ. ಬೆಳೆ ನಷ್ಟ ಮತ್ತು ಜೀವಹಾನಿಯಲ್ಲಿ ತೊಡಗಿರುವ ಎರಡು ಪುಂಡಾನೆಗಳನ್ನು ಸೆರೆ ಹಿಡಿದು
ಸ್ಥಳಾಂತರ ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಸಕಲೇಶಪುರ, ಆಲೂರು ಭಾಗದ ಕಾಫಿ ತೋಟಗಳಲ್ಲಿ ಆನೆಗಳು ಓಡಾಡುವುದು, ಬೆಳೆ ಹಾಳು ಮಾಡುವುದು
ಮತ್ತು ತಂಗುವುದು ಸಾಮಾನ್ಯವಾಗಿದೆ. ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಹಲವು ಸಭೆ ಸಹ ನಡೆಸಲಾಗಿದೆ. ಆನೆಗಳ ಸ್ಥಳಾಂತರ ಕುರಿತು ಸರ್ಕಾರಕ್ಕೆ ಅನೇಕ ಬಾರಿ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕ ಎಚ್.ಕೆ.ಕುಮಾರಸ್ವಾಮಿ ಸಹ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಎಲ್ಲಾ ಆನೆಗಳನ್ನು ಸೆರೆ ಹಿಡಿಯಲು ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ.

‘ಒಂದೂವರೆ ವರ್ಷದಿಂದ ಜಿಲ್ಲೆಯಲ್ಲಿ ಕಾಡಾನೆಯಿಂದ ಜೀವ ಹಾನಿ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.
ಆದರೂ ಸೆ. 1ರಂದು ಕಾಡಾನೆ ದಾಳಿಯಿಂದ ಒಬ್ಬರು ಮೃತಪಟ್ಟಿದ್ದಾರೆ. ನೊಂದ ಕುಟುಂಬಗಳಿಗೆ ಧೈರ್ಯ ಹೇಳಿ, ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಭರವಸೆ ನೀಡಲಾಗಿದೆ. ಮೊದಲ ಹಂತದಲ್ಲಿ ನಾಲ್ಕು ಆನೆಗಳಿಗೆ ರೇಡಿಯೊ ಕಾಲರ್‌ ಅಳವಡಿಸಲಾಗುವುದು. ಇದರ ಜೊತೆಯಲ್ಲೇ ಮತ್ತೆ ನಾಲ್ಕು ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲು ಅನುಮತಿ ಕೇಳಲಾಗಿದ್ದು, ಸಕಾರಾತ್ಮಕವಾಗಿ ಸರ್ಕಾರ ಸ್ಪಂದಿಸಿದೆ. ಒಟ್ಟಾರೆ ಎಂಟು ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಮಳೆ ನಿಂತ ಬಳಿಕ, ಅಕ್ಟೋಬರ್ ಮಧ್ಯಭಾಗದಲ್ಲಿ ಈ ಕಾರ್ಯಾಚರಣೆ ಶುರು ಮಾಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಲೆನಾಡು ಭಾಗದ ಜನರು, ಈ ಭಾಗದಲ್ಲಿರುವ ಎಲ್ಲಾ ಆನೆಗಳನ್ನು ಸಾಮೂಹಿಕವಾಗಿ ಸ್ಥಳಾಂತರ ಮಾಡಿ
ಎಂದು ಕೇಳುತ್ತಿದ್ದಾರೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಕುರಿತು ಸರ್ಕಾರದಿಂದ ಅನುಮತಿ
ದೊರೆತಿಲ್ಲ. ಆದರೆ, ತೊಂದರೆ ಕೊಡುತ್ತಿರುವ ಆನೆಗಳನ್ನು ಸೆರೆ ಹಿಡಿಯಲು ಶೀಘ್ರ ಅನುಮತಿ ನೀಡುವ ಸಾಧ್ಯತೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು