ಸಕಲೇಶಪುರ: ತಾಲ್ಲೂಕಿನಾದ್ಯಂತ ಗುರುವಾರವೂ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಗೆರೆ ಕುಸಿತ ಹಾಗೂ ಮನೆಗಳ ಗೋಡೆ ಕುಸಿತ ಉಂಟಾಗಿದೆ.
ಮಂಗಳವಾರ ರಾತ್ರಿಯಿಂದ ಗುರುವಾರ ಸಂಜೆವರೆಗೆ ತಾಲ್ಲೂಕಿನಾದ್ಯಂತ ಸರಾಸರಿ 11 ಸೆಂ.ಮೀ ಮಳೆಯಾಗಿದೆ. ಕಾಡಮನೆ, ಮಾರನಹಳ್ಳಿ, ಅತ್ತಿಹಳ್ಳಿ, ಹೊಂಗಡಹಳ್ಳ, ಕುಮಾರಳ್ಳಿ, ದೇವಾಲದಕೆರೆ ಸುತ್ತಮುತ್ತ ಸರಾಸರಿ 12.2 ಸೆಂ.ಮೀ ಮಳೆಯಾಗಿದೆ.
ಅತಿಯಾದ ಗಾಳಿ ಹಾಗೂ ಮಳೆಯಿಂದಾಗಿ ಪಶ್ಚಿಮಘಟ್ಟದ ಅಂಚಿಗೆ ಹೊಂದಿಕೊಂಡ ಹಾನುಬಾಳು, ಹೆತ್ತೂರು, ಯಸಳೂರು ಹೋಬಳಿ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಮರಗಳು ನೆಲಕ್ಕುರುಳಿವೆ. ಮರಗಳೊಂದಿಗೆ ವಿದ್ಯುತ್ ಕಂಬಗಳು ಸಹ ಧರೆಗುರುಳಿದ್ದು, ಹಲವು ಗ್ರಾಮಗಳು ವಿದ್ಯುತ್ ಸಂಪರ್ಕ ಖಡಿತಗೊಂಡಿವೆ.
ಆನೇಮಹಲ್ ಗ್ರಾಮದ ಅಡ್ಡಾಣಿ ಗುಡ್ಡದಲ್ಲಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ವಿಸ್ತರಣೆ ಅವೈಜ್ಞಾನಿಕ ಕಾಮಗಾರಿಯಿಂದ ಭಾರೀ ಪ್ರಮಾಣದಲ್ಲಿ ಗೆರೆ ಕುಸಿತ ಉಂಟಾಗಿ ಗುಡ್ಡದ ಮೇಲ್ಭಾಗ ಇರುವ ಮನೆಗಳಿಗೆ ಅಪಾಯ ಉಂಟಾಗಿದೆ.
ದೋಣಿಗಾಲ್‌ನಿಂದ ಮಾರನಹಳ್ಳಿ ವರೆಗೆ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಮಳೆ ನೀರಿನೊಂದಿಗೆ ಭಾರಿ ಪ್ರಮಾಣದ ಮಣ್ಣು ಹರಿದು ಬಂದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ಪುರಸಭಾ ವ್ಯಾಪ್ತಿಯ ಬಸವನಹಳ್ಳಿ ಬಡಾವಣೆಯ ಪಾರ್ವತಮ್ಮ ಅವರ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದ್ದು, ಯಾವುದೇ ಹಾನಿ ಉಂಟಾಗಿಲ್ಲ. ಪಕ್ಕದ ಮೂಡಿಗೆರೆ ಹಾಗೂ ತಾಲ್ಲೂಕಿನ ಹಾನುಬಾಳು ಭಾಗದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಜೀವ ನದಿ ಹೇಮಾವತಿ ಒಳ ಹರಿವು ಹೆಚ್ಚಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.