ಭಾನುವಾರ, ಜೂನ್ 13, 2021
22 °C
ಅಧಿಕಾರಿಗಳಿಗೆ ಸಂಸದ ಪ್ರಜ್ವಲ್ ರೇವಣ್ಣ ಸೂಚನೆ

ಮರಣ ಪ್ರಮಾಣ ಕಡಿಮೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಮರಣ ಪ್ರಮಾಣ ನಿಯಂತ್ರಿಸಲು ಪರಿಣಾಮಕಾರಿಯಾಗಿ
ಕ್ರಮವಹಿಸಿಬೇಕು ಎಂದು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರು ಅಧಿಕಾರಿಗಳಿಗೆ ಸೂಚನೆ
ನೀಡಿದರು.

ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಕೋವಿಡ್-19 ಸಂಬಂಧಿಸಿದಂತೆ ಅಧಿಕಾರಗಳ ಸಭೆ ನಡೆಸಿ
ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಇನ್ನೂ ಹೆಚ್ಚಿನ
ನಿಗಾವಹಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಬೆಡ್ ಹಾಗೂ
ಆಮ್ಲಜನಕದ ಸಮಸ್ಯೆಯಾಗದಂತೆ ಈಗಲೇ ಎಚ್ಚರಿಕೆವಹಿಸಬೇಕು. ರೆಮ್‍ಡಿಸಿವಿರ್‌ ಪೂರೈಕೆಗೆ ಒತ್ತು
ನೀಡಬೇಕಿದೆ ಎಂದು ಹೇಳಿದರು.

ಆಂಬುಲೆನ್ಸ್‌ಗಳನ್ನು ಶವ ಸಾಗಿಸಲು ಬಳಸಿಕೊಳ್ಳದೆ ರೋಗಿಗಳನ್ನು ಕರೆತರಲು ಮಾತ್ರ
ಬಳಸಿಕೊಳ್ಳಬೇಕು. ನಗರದಲ್ಲಿ ಹಿಮ್ಸ್ ಆಸ್ಪತ್ರೆ ಸೇರಿದಂತೆ 17 ಆಸ್ಪತ್ರೆಗಳ ಪೈಕಿ ಒಂದು
ಆಸ್ಪತ್ರೆಯನ್ನು ಜನರಲ್ ಆಸ್ಪತ್ರೆಯಾಗಿ ಮಾಡಲಾಗುವುದು. ಉಳಿದವುಗಳನ್ನು ಸಂಪೂರ್ಣವಾಗಿ
ಕೋವಿಡ್‍ಗೆ ಮೀಸಲಿರಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಹಾಗೂ
ಹಿಮ್ಸ್‌ನಲ್ಲಿ ಹೆಚ್ಚುವರಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಯಾದರೆ ಕೊರತೆಯೇ ಇರುವುದಿಲ್ಲ.
ಔಷಧ, ರೆಮ್‍ಡಿಸಿವಿರ್‌ಗಳ ಕೊರತೆ ಇದ್ದು, ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂದರು.

ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಹಾಗೂ ಡಿ.ಗ್ರೂಪ್ ನೌಕರರನ್ನು ಕೊರೊನಾ ವಾರಿಯರ್‌ಗಳೆಂದು
ಸರ್ಕಾರ ಘೋಷಿಸಬೇಕು ಹಾಗೂ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಅವರಿಗೆ
ದೊರೆಯುವಂತೆ ಆಗಬೇಕು. ಕೋವಿಡ್ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ
ಊಟೋಪಾಚಾರ ನೀಡುವುದರ ಜೊತೆಗೆ ಅವರಿಗೆ ಪೌಷ್ಟಿಕ ಆಹಾರಗಳನ್ನು ನೀಡಬೇಕು ಎಂದು
ನಿರ್ದೇಶನ ನೀಡಿದರು.

ಸಭೆಯಲ್ಲಿ ಹಿಮ್ಸ್ ನಿರ್ದೇಶಕ ಡಾ. ಬಿ.ಸಿ. ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೃಷ್ಣಮೂರ್ತಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ. ಸತೀಶ್, ಡಾ. ಸುರೇಶ್
ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.