ಗುರುವಾರ , ಜೂನ್ 30, 2022
23 °C

ವಿಧಾನಸಭೆ ಅಧಿವೇಶನ ಕರೆಯಲು ಎಚ್‌.ಡಿ. ರೇವಣ್ಣ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ರಾಜ್ಯದ ಹಣಕಾಸು ಸ್ಥಿತಿ, ಕೋವಿಡ್‌ ನಿರ್ವಹಣೆ ಹಾಗೂ ನೀರಾವರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ಚರ್ಚಿಸಲು ವಿಧಾನಸಭೆ ವಿಶೇಷ ಅಧಿವೇಶನ ಕರೆಯುವಂತೆ ಶಾಸಕ ಎಚ್‌.ಡಿ.ರೇವಣ್ಣ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದ ಹಣಕಾಸು ಸ್ಥಿತಿ ಬಗ್ಗೆ ಜನರಿಗೆ ಮಾಹಿತಿ ನಿಡಬೇಕು. ಮೂರು ತಿಂಗಳಿನಿಂದ ವಿಧಾನಸಭಾ ಸಲಹಾ ಸಮಿತಿ ಸಭೆಗಳು ನಡೆದಿಲ್ಲ. ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ನೀರಾವರಿ ಇಲಾಖೆಯಲ್ಲಿ ಕಾನೂನು ಬಾಹಿರವಾಗಿ ಟೆಂಡರ್‌ ಕರೆಯಲಾಗಿದೆ. ಇಂಧನ ದರ ಹೆಚ್ಚುತ್ತಿದೆ. ಇವುಗಳ ಬಗ್ಗೆ ಚರ್ಚೆ ನಡೆಸಲು ಜುಲೈ ಮೊದಲ ವಾರದಲ್ಲಿ ಅಧಿವೇಶನ
ಕರೆಯಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ 30 ಸಾವಿರ ಜನರ ಸಾವಿಗೆ ಸರ್ಕಾರದ ಬೇಜವಾಬ್ದಾರಿತನವೇ ಕಾರಣ. ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಚಿಕಿತ್ಸೆಗೆ ಬಡಕುಟುಂಬಗಳು ಖರ್ಚು ಮಾಡಿರುವ ಅರ್ಧದಷ್ಟು ಹಣವನ್ನು ಸರ್ಕಾರ ಹಿಂದಿರುಗಿಸಬೇಕು. ಹಲವರು ಮನೆ, ಜಮೀನು
ಮಾರಾಟ ಮಾಡಿದ್ದಾರೆ. ಕೆಲವರು ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಆತ್ಮಹತ್ಯೆ
ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ಕ್ರಮ ಸರ್ಕಾರ ಕೈಗೊಳ್ಳಬೇಕು. ಒಂದು ವೇಳೆ ಸಾಧ್ಯವಾಗದಿದ್ದಲ್ಲಿ 2023ರಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದು ಪರಿಹಾರ ನೀಡಲಿದೆ ಎಂದರು.

ಪಾಸಿಟಿವಿಟಿ ದರ ಶೇಕಡಾ 5ಕ್ಕಿಂತ ಕಡಿಮೆ ಬಂದರೆ ಮಾತ್ರ ಲಾಕ್‌ಡೌನ್‌ ಸಡಿಲಿಕೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಕಡಿಮೆ ಆಗಿಲ್ಲ. ನೆಪ ಮಾತ್ರಕ್ಕೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜೀನಾಮೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ‘ರಾಜೀನಾಮೆ ಕೊಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಐಎಎಸ್‌ ಅಧಿಕಾರಿ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ ಎಂದರೆ ರಾಜ್ಯದ ಆಡಳಿತ ಹೇಗಿದೆ ಎಂಬುದು ತೋರಿಸುತ್ತದೆ’ ಎಂದು ಟೀಕಿಸಿದರು.

ಮುಖ್ಯಮಂತ್ರಿ ಹೆಸರಿನಲ್ಲಿ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಈ ಬಗ್ಗೆ ವಿರೋಧ ಪಕ್ಷ ಕಾಂಗ್ರೆಸ್‌ ಸಹ ಧ್ವನಿ ಎತ್ತಿಲ್ಲ. ರಾಜ್ಯ ಲೂಟಿಕೋರರ ಕೈಯಲ್ಲಿದೆ. ನೀರಾವರಿ ಇಲಾಖೆಯಲ್ಲಿ ಬೋಗಸ್‌ ಕಾಮಗಾರಿ, ಬಿಲ್‌, ಟೆಂಡರ್‌ ಕರೆಯಲಾಗಿದೆ. ಭ್ರಷ್ಟಾಚಾರ ವಿರುದ್ಧ ಪಕ್ಷದ ಕಾನೂನು ಘಟಕದದಿಂದ ಹೋರಾಟ ಮಾಡಲಾಗುವುದು ಎಂದು ವಿವರಿಸಿದರು.

ಮೈಸೂರು ನಗರ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪನಾಗ್‌ ಒಳ್ಳೆಯ ಅಧಿಕಾರಿ ಎಂದು ಜನರು ಹೇಳುತ್ತಿದ್ದಾರೆ. ಅವರನ್ನು ವರ್ಗಾ ಮಾಡಲಾಗಿದೆ. ಉಸ್ತುವಾರಿ ಸಚಿವರು ಸಹ ಅವರು ರಾಜೀನಾಮೆ ನೀಡುವುದು ಬೇಡ ಅಂದಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು