ಭಾನುವಾರ, ಮೇ 22, 2022
29 °C
ಪ್ರತಿಭಟನಕಾರರು–ಪೊಲೀಸರ ನಡುವೆ ಮಾತಿನ ಚಕಮಕಿ

ಕಾಡಾನೆ ಹಾವಳಿ: ಗ್ರಾಮಸ್ಥರಿಂದ ರಸ್ತೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕಾಡಾನೆ ಹಾವಳಿಯಿಂದ ಬೆಳೆಗಳು ನಾಶವಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ತಾಲ್ಲೂಕಿನ ಸಾಲಗಾಮೆ ಹೋಬಳಿ ಮಾದಿಹಳ್ಳಿ ಗೇಟ್ ಬಳಿ ರಾಯಪುರ ಗ್ರಾಮಸ್ಥರು ಸೋಮವಾರ ರಸ್ತೆತಡೆ ನಡೆಸಿದರು

ಸಕಲೇಶಪುರ, ಆಲೂರು, ಬೇಲೂರು ಸೇರಿದಂತೆ ಮಲೆನಾಡು ಭಾಗಕ್ಕೆ ಸೀಮಿತವಾಗಿದ್ದ ಕಾಡಾನೆ ಹಾವಳಿ ಈಗ ಬಯಲು ಸೀಮೆಗೂ ವ್ಯಾಪಿಸಿದೆ. ಒಂದು ವರ್ಷದಿಂದ ಹಾಸನ ತಾಲ್ಲೂಕಿನ ಸಾಲಗಾಮೆ, ಮಾದಿಹಳ್ಳಿಯಲ್ಲೂ ಕಾಡಾನೆಗಳು ದಾಂದಲೆ ನಡೆಸಿ, ಹಲವು ರೈತರ ಬೆಳೆಗಳನ್ನು ನಾಶಪಡಿಸಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾದಿಂದ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಬೆಳೆ ಬೆಳೆದು ಕಟಾವು ಮಾಡುವಷ್ಟರಲ್ಲಿ ಬೆಳೆಯನ್ನೆಲ್ಲಾ
ಆನೆಗಳು ತಿಂದು, ತುಳಿದು ನಾಶಪಡಿಸುತ್ತಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಕ್ರಮ ಜರುಗಿಸುತ್ತಿಲ್ಲ. ಇದರಿಂದ ಗ್ರಾಮಸ್ಥರು ನಿತ್ಯ ಭಯದಲ್ಲಿ ಓಡಾಡುವ ಪರಿಸ್ಥಿತಿ
ನಿರ್ಮಾಣವಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ರಸ್ತೆ ಬಿಟ್ಟು ಕದಲುವುದಿಲ್ಲ ಎಂದು
ಪ್ರತಿಭಟನಕಾರರು ಪಟ್ಟು ಹಿಡಿದರು.

ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಬಿಟ್ಟರೆ ಅಧಿಕಾರಿಗಳು ವಾಪಸ್ ಕಳುಹಿಸುತ್ತಾರೆ. ಆದರೆ ಕಾಡಾನೆಗಳು ಗ್ರಾಮಗಳಿಗೆ ನುಗ್ಗಿದರೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಗ್ರಾಮಾಂತರ ವೃತ್ತ ನಿರೀಕ್ಷಕ ಪಿ. ಸುರೇಶ್ ಮತ್ತು ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಸಂಜೆಯೊಳಗೆ ಗ್ರಾಮಕ್ಕೆ ಅರಣ್ಯಾಧಿಕಾರಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಹಿಂಪಡೆದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತಾಸುಗಟ್ಟಲೇ ರಸ್ತೆತಡೆ ನಡೆಸಿದ ಕಾರಣ ವಾಹನ ಸವಾರರು, ಪ್ರಯಾಣಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಯಿತು. ಗ್ರಾಮದ ಶಶಿಧರ್, ಅವಿನಾಶ್, ಏಲಕ್ಕಿಗೌಡ, ಅಶೋಕ್, ವಿಕಾಸ್, ಆಶಾ, ವಿಶಾಲಾಕ್ಷಿ, ರಘು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು