ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಡಿ ಘಾಟಿಯ ಕಾಮಗಾರಿ ವಿಳಂಬ: ಬಂದ್ ಆತಂಕ?

Published 22 ಮೇ 2023, 5:45 IST
Last Updated 22 ಮೇ 2023, 5:45 IST
ಅಕ್ಷರ ಗಾತ್ರ

ಹಾಸನ: ಇದೀಗ ಚುನಾವಣೆಯ ಕಾವು ಮುಗಿದಿದ್ದು, ಮತ್ತೊಂದು ಮಳೆಗಾಲ ಸನ್ನಿಹಿತವಾಗುತ್ತಿದೆ. ಆದರೆ, ರಾಜ್ಯದ ರಾಜಧಾನಿ, ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ಕಾಮಗಾರಿ ಇದುವರೆಗೆ ಮುಗಿಯುತ್ತಿಲ್ಲ. ಮತ್ತೊಮ್ಮೆ ಎರಡೂ ಪ್ರದೇಶಗಳ ನಡುವಿನ ಸಂಪರ್ಕ ಕಡಿತ ಆಗಲಿದೆ ಎನ್ನುವ ಆತಂಕ ಜನರನ್ನು ಕಾಡುತ್ತಿದೆ.

ಹೆದ್ದಾರಿ ವಿಸ್ತರಣೆ ಕಾಮಗಾರಿ ಹಲವಾರು ವರ್ಷಗಳಿಂದ ಕುಂಟುತ್ತಲೇ ಸಾಗಿದೆ. ಪ್ರತಿ ಮಳೆಗಾಲದಲ್ಲಿಯೂ ಈ ರಸ್ತೆಯ ದೋಣಿಗಾಲ್‌ ಬಳಿ ಭೂಕುಸಿತ ಸಂಭವಿಸುತ್ತಿದ್ದು, ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ.

ಹಾಸನ ಬೈಪಾಸ್‌ನಿಂದ ಸಕಲೇಶಪುರ ಬೈಪಾಸ್‌, ಅಲ್ಲಿಂದ ಹೆಗ್ಗದ್ದೆವರೆಗೆ ಚತುಷ್ಪಥ ಕಾಮಗಾರಿ ಗುತ್ತಿಗೆ ನೀಡಲಾಗಿದೆ. 2017ರಲ್ಲಿಯೇ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದ್ದು, ಈವರೆಗೆ ಹಾಸನದಿಂದ ಸಕಲೇಶಪುರದವರೆಗಿನ ಕಾಮಗಾರಿ ಮಾತ್ರ ಶೇ75ರಷ್ಟು ಪೂರ್ಣವಾಗಿದೆ. ಆದರೆ, ಪ್ರಮುಖವಾಗಿರುವ ಸಕಲೇಶಪುರ–ಹೆಗ್ಗದ್ದೆ ಕಾಮಗಾರಿ ಮಾತ್ರ ಇದುವರೆಗೆ ಆರಂಭವೇ ಆಗಿಲ್ಲ ಎನ್ನುವ ಹಂತದಲ್ಲಿದೆ.

  • ಹಾಸನದಿಂದ ಸಕಲೇಶಪುರ ಬೈಪಾಸ್‌‌‌ವರೆಗೆ ಕಾಮಗಾರಿ

  • ಗಡುವು ಪಡೆದು ಕಾಣೆಯಾಗುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು

  • ಈ ರಸ್ತೆ ಬಂದ್ ಆದರೆ, ಚಾರ್ಮಾಡಿ ಘಾಟ್ ಒಂದೇ ದಾರಿ

ಐದು ವರ್ಷಗಳಲ್ಲಿ ಒಂದು ಗುತ್ತಿಗೆ ಕಂಪನಿ ಬದಲಾಗಿದ್ದು, ಮತ್ತೊಂದು ಕಂಪನಿಗೆ ಕಾಮಗಾರಿ ವಹಿಸಲಾಗಿದೆ. ಆದರೆ, ಪೂರ್ಣಪ್ರಮಾಣದ ಯಂತ್ರೋಪಕರಣ, ಕಾರ್ಮಿಕರನ್ನು ಬಳಸದೇ ಇರುವುದರಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.

ದೋಣಿಗಲ್‌ ಬಳಿ ಅಪಾಯಕಾರಿ ಸ್ಥಳವಾಗಿ ಪರಿಣಮಿಸಿದೆ. 2020 ರಿಂದ 2022 ರವರೆಗೆ ಈ ಸ್ಥಳದಲ್ಲಿ ಭೂಕುಸಿತ ಆಗುತ್ತಿದೆ. ಆದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ, ಗುತ್ತಿಗೆ ಕಂಪನಿಯವರಾಗಲಿ, ಜಿಲ್ಲಾಡಳಿತವಾಗಲಿ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಸ್ಥಳದಲ್ಲಿ ಸಂಚಾರ ಸ್ಥಗಿತಗೊಳಿಸುವ ಆದೇಶ ಮಾತ್ರ ಪ್ರತಿವರ್ಷ ಹೊರಡಿಸಲಾಗುತ್ತದೆ. ಅದರಲ್ಲಿ ದಿನಾಂಕ ಮಾತ್ರ ಬದಲಾಗಿರುತ್ತದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಪ್ರತಿ ವರ್ಷವೂ ಈ ಗೋಳಾಟ ತಪ್ಪುತ್ತಿಲ್ಲ. ದೋಣಿಗಲ್‌ ಬಳಿ ಹೆದ್ದಾರಿ ಕಾಮಗಾರಿಗಾಗಿ ಒಂದು ಬದಿಯ ಮಣ್ಣನ್ನು ಕೆಳಭಾಗದಲ್ಲಿ ಕತ್ತರಿಸಲಾಗಿದ್ದು, ಇದರಿಂದ ಈ ಪ್ರದೇಶದಲ್ಲಿ ಮಳೆ ಜೋರಾದಲ್ಲಿ ಭೂಕುಸಿತ ಆಗುತ್ತಿದೆ. ಅದಕ್ಕೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡುವುದು ಅಗತ್ಯವಾಗಿದ್ದರೂ, ಗುತ್ತಿಗೆ ವಹಿಸಿದ ಕಂಪನಿಯಾಗಲಿ, ಸರ್ಕಾರವಾಗಲಿ ಕಿವಿಗೊಡುತ್ತಿಲ್ಲ.

ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತವಾದರೆ, ಚಾರ್ಮಾಡಿ ಘಾಟಿಯನ್ನೇ ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಇಲ್ಲವೇ ಬೆಂಗಳೂರಿನಿಂದ ಬರುವವರು ಸಂಪಾಜೆ ಘಾಟಿಯ ಮೂಲಕ ಸಂಚರಿಸಬೇಕು. ನಿತ್ಯ ಈ ಮಾರ್ಗದಲ್ಲಿ 30 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಅದಾಗ್ಯೂ ಈ ರಸ್ತೆಯ ಬಗ್ಗೆ ನಿರ್ಲಕ್ಷ್ಯ ತಾಳಿರುವುದು ಜನರು ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಕ್ರಿಯೆ ನೀಡದ ಅಧಿಕಾರಿಗಳು: ಹೆದ್ದಾರಿ ಕಾಮಗಾರಿ ಹಾಗೂ ದೋಣಿಗಲ್‌ ಬಳಿಯ ಭೂಕುಸಿತದ ಬಗ್ಗೆ ಯಾವುದೇ ಮಾಹಿತಿಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ.

ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಹಾಜರಾಗುವ ಪ್ರಾಧಿಕಾರದ ಅಧಿಕಾರಿಗಳು, ಒಂದಿಷ್ಟು ಗಡುವು ಪಡೆದು, ಮತ್ತೆ ಮುಂದಿನ ಸಭೆಯವರೆಗೂ ಕಾಣಿಸಿಕೊಳ್ಳುವುದೇ ಇಲ್ಲ ಎನ್ನುವ ಆರೋಪ ಜನರದ್ದು.

ರಸ್ತೆ ಡಾಂಬರೀಕರಣ
ಚುನಾವಣೆ ಶುರುವಾಗುವ ಮುನ್ನವೇ ಸಕಲೇಶಪುರ–ಹೆಗ್ಗದ್ದೆ ನಡುವಿನ ರಸ್ತೆಯನ್ನು ಡಾಂಬರೀಕರಣ ಮಾಡಿದ್ದು, ಇದೀಗ ತಕ್ಕಮಟ್ಟಿಗೆ ವಾಹನಗಳ ಓಡಾಟಕ್ಕೆ ಯೋಗ್ಯವಾಗಿದೆ. ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದ್ದ ರಸ್ತೆಯಲ್ಲಿ 10 ಕಿ.ಮೀ. ಕ್ರಮಿಸುವುದಕ್ಕೆ ಒಂದು ಗಂಟೆಗೂ ಅಧಿಕ ಸಮಯ ಬೇಕಾಗುತ್ತಿತ್ತು. ಇದೀಗ ರಸ್ತೆ ಗುಂಡಿಮುಕ್ತವಾಗಿದ್ದು, ಪ್ರಯಾಣಿಕ ಹಾಗೂ ಸರಕು ಸಾಗಣೆ ವಾಹನಗಳ ಓಡಾಟ ಸುಗಮವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT