ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಶುರು

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ತರಬೇತಿ: ಸಚಿವ ರೇವಣ್ಣ
Last Updated 3 ಜುಲೈ 2019, 14:35 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಗುಣಮಟ್ಟದ ಶೈಕ್ಷಣಿಕ ಪ್ರಗತಿಗೆ ಹೊಸ ಕ್ರಾಂತಿಕಾರಕ ಪ್ರಯತ್ನ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಸರ್ಕಾರಿ ಶಾಲೆಗಳ 10 ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ಸ್ಮಾರ್ಟ್‍ಕ್ಲಾಸ್‍ ಪ್ರಾರಂಭವಾಗಲಿವೆ. ಇಂಗ್ಲಿಷ್, ಗಣಿತ, ಕನ್ನಡ, ಮತ್ತು ವಿಜ್ಞಾನ ವಿಷಯಗಳ ಬಗ್ಗೆ ಶಿಕ್ಷಕರಿಗೆ ಮೂರು ದಿನ ವಿಶೇಷ ಶಿಬಿರ ನಡೆಸಿ ತರಬೇತಿ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲಾ ಸರ್ಕಾರಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಲ್ಲಿ ಸರ್ಕಾರದ ವತಿಯಿಂದಲೇ ವಿಶೇಷವಾಗಿ ಸಿಇಟಿ ತರಬೇತಿ ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಯಾವುದೇ ಖಾಸಗಿ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟಕ್ಕೆ ಕಡಿಮೆ ಇಲ್ಲದಂತೆ ಜಿಲ್ಲೆಯಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಾಮರ್ಥ್ಯಗಳನ್ನು ಕಟ್ಟಿ ಬೆಳೆಸಲಾಗುವುದು ಎಂದು ತಿಳಿಸಿದರು.

ಹಾಸನ ನಗರದ ನಾಲ್ಕು ಕಡೆ 1-12 ನೇ ತರಗತಿಯವರೆಗೆ ಸರ್ಕಾರಿ ಪಬ್ಲಿಕ್ ಶಾಲೆ ಪ್ರಾರಂಭಿಸಲಾಗಿದೆ. ಮೊಸಳೆ ಹೊಸಹಳ್ಳಿಯಲ್ಲಿ ಡಿಪ್ಲೊಮಾ ಕಾಲೇಜಿನ ಎಲ್ಲಾ 360 ಸೀಟ್‍ಗಳು ಭರ್ತಿಯಾಗಿವೆ. ಶಿಕ್ಷಣ, ಕೃಷಿ ಮತ್ತು ಆರೋಗ್ಯ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.

ಹಾಸನ ನಗರದಲ್ಲಿ ವಾಸಿಸುತ್ತಿರುವ ಕಡು ಬಡವ ವಸತಿ ರಹಿತರಿಗೆ 3000 ನಿವೇಶನ ಹಂಚಿಕೆ ಮಾಡಲು ವಿವಿಧ ಕಡೆಗಳಲ್ಲಿ 30 ಎಕರೆ ಜಾಗ ಗುರುತಿಸಲಾಗಿದೆ. ನಗರಸಭೆ, ನಗರಾಭಿವೃದ್ದಿ ಪ್ರಾಧಿಕಾರ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಿವೇಶನಕ್ಕೆ ಮಂದಿರ, ಮಸೀದಿ, ಸಮುದಾಯ ಭವನ, ಶಾಲೆ, ಆಸ್ಪತ್ರೆಗಳಿಗೂ ಜಾಗ ಮೀಸಲಿರಿಸಿ ವ್ಯವಸ್ಥಿತವಾಗಿ ಬಡಾವಣೆಗಳನ್ನು ನಿರ್ಮಿಸಲಾಗುವುದು ಎಂದರು.

ಹಾಸನ ನಗರಸಭೆ ವ್ಯಾಪ್ತಿಯ ಕಂದಾಯ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿರುವ 2,114 ಮಂದಿ ಅವುಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದು, ಅವುಗಳನ್ನು ನಿಯಾಮಾನುಸಾರ ಪರಿಗಣಿಸಿ ಹಕ್ಕುಪತ್ರ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ನಗರ ಹಾಗೂ ಹೊರವಲಯದಲ್ಲಿ ಅನಧಿಕೃತ ಲೇಔಟ್‍ಗಳ ಅಭಿವೃದ್ಧಿ ಪಡಿಸುವವರ ಬಗ್ಗೆ ನಿಯಾಮಾನುಸಾರ ಕ್ರಮ ಕೈಗೊಳ್ಳಲು ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ನಗರ ಜಿಲ್ಲಾ ಕ್ರೀಡಾಂಗಣ, ಹಾಗೂ ಸರ್ಕಾರಿ ಕಟ್ಟಡಗಳ ಆವರಣದಲ್ಲಿ ಹಲವರು ರಾತ್ರಿ ಮದ್ಯಪಾನ ಮಾಡಿ ಬಾಟಲಿಗಳನ್ನು ಒಡೆದು ಅಸಭ್ಯವಾಗಿ ವರ್ತಿಸುತ್ತಿರುವುದರ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಡಿವೈಎಸ್‍ಪಿ, ವೃತ್ತ ನಿರೀಕ್ಷಕರು, ಸಬ್ ಇನ್‌ಸ್ಪೆಕ್ಟರ್‌ಗಳು, ಅಬಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿಶೇಷ ಗಮನ ಹರಿಸಿ, ಗಸ್ತು ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲು ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಲ್ಲ 35 ಪಿ.ಜಿ. ಕೋರ್ಸ್‌ಗಳನ್ನು ಆರಂಭಿಸಲು ಬೇಕಾದ ಸಿದ್ಧತೆ ಕೈಗೊಳ್ಳಲಾಗುವುದು. ಪ್ರಸ್ತುತ 9 ಕೋರ್ಸ್‌ಗಳು ಇವೆ ಎಂದೂ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಸ್ಮಾರ್ಟ್‍ಕ್ಲಾಸ್ ವ್ಯವಸ್ಥೆ ಹಾಗೂ ಗುಣಾತ್ಮಕ ಶೈಕ್ಷಣಿಕ ಅಭಿವೃದ್ಧಿಗೆ ಕೈಗೊಂಡಿರುವ ವಿಶೇಷ ಕ್ರಮಗಳ ಬಗ್ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT